ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ತೀರ್ಮಾನ: ಪ್ರಯಾಣಿಕರಿಗೆ ಮತ್ತೊಂದು ಶಾಕ್
Private Bus Ticket Price hike; ರಾಜ್ಯದ ಜನತೆ ಇದೀಗ ಮತ್ತೊಂದು ದರ ಏರಿಕೆಯ ಭಾರ ಹೊರಲು ಸಿದ್ಧವಾಗಬೇಕಿದೆ. ಬೆಲೆ ಏರಿಕೆ ಜಮಾನದಲ್ಲಿ ಇದೀಗ ಮತ್ತೊಂದು ಹೊಡೆತ ಬೀಳಲಿದೆ. ಕರ್ನಾಟಕದಾದ್ಯಂತ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರ ಒಕ್ಕೂಟ ತೀರ್ಮಾನಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಉಡುಪಿ, ಏಪ್ರಿಲ್ 8: ಸರಣಿ ಬೆಲೆ ಏರಿಕೆಗಳಿಂದ (Price Hike) ತತ್ತರಿಸಿರುವ ಕರ್ನಾಟಕ ಜನತೆಗೆ ಶೀಘ್ರದಲ್ಲೇ ಮತ್ತೊಂದು ಶಾಕ್ ಎದುರಾಗಲಿದೆ. ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿ (KSRTC Ticket price) ಬಸ್ಗಳ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಖಾಸಗಿ ಬಸ್ ಸರದಿ. ರಾಜ್ಯದಾದ್ಯಂತ ಖಾಸಗಿ ಬಸ್ಗಳ ಟಿಕೆಟ್ ದರ (Private Bus Ticket Price) ಹೆಚ್ಚಳ ಮಾಡಲು ಖಾಸಗಿ ಬಸ್ ಮಾಲೀಕರ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ಮುಂದಿನ ವಾರವೇ ಅಧಿಕೃತ ಪ್ರಕಟಣೆ ಪ್ರಕಟವಾಗುವ ಸಾಧ್ಯತೆ ಇದೆ.
ಹಾಲು, ಕರೆಂಟು, ಮೆಟ್ರೋ, ಸರ್ಕಾರಿ ಬಸ್ ಟಿಕೆಟದ ದರ ಹೀಗೆ ಎಲ್ಲವೂ ಏರಿಕೆಯಾಗಿದ್ದು, ಈ ಬಗ್ಗೆ ಜನ ಬೀದಿಗಿಳಿದು ಹೋರಾಡುತ್ತಿರುವಾಗಲೇ, ಸದ್ದಿಲ್ಲದೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಸಲು ನಿರ್ಧರಿಸಿದ್ದಾರೆ. ಡೀಸೆಲ್ ದರ ಏರಿಕೆ ಹಾಗೂ ಟೋಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ, ಸರ್ಕಾರದ ತೀರ್ಮಾನಕ್ಕೆ ಕಾಯದೆ ತಾವೇ ದರ ಏರಿಸಲು ನಿರ್ಧರಿಸಿದ್ದಾರೆ.
ಖಾಸಗಿ ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಬಸ್ ಮಾಲೀಕರ ಸಂಘ ಹೇಳೋದೇನು?
ಇತ್ತೀಚಿನ ವರ್ಷಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ ಸುಮಾರು ಐದು ರೂಪಾಯಿ ಏರಿಕೆಯಾಗಿದೆ. ಟೋಲ್ ದರ ಕೂಡ ಹೆಚ್ಚಾಗಿದೆ. ದರ ಏರಿಸದಿದ್ದರೆ ಖಾಸಗಿ ಬಸ್ ಉದ್ಯಮ ಸ್ಥಗಿತಗೊಳ್ಳುತ್ತದೆ. ಪ್ರತಿ ಬಸ್ ನಿರ್ವಹಣೆಗೆ ಸದ್ಯ 18 ರಿಂದ 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಬರುತ್ತಿದೆ. ಹಾಗಾಗಿ ದರ ಏರಿಸುವುದು ಅನಿವಾರ್ಯ ಎಂದು ಬಸ್ ಮಾಲೀಕರ ಸಂಘದ ರಾಜ್ಯ ಪ್ರಮುಖರು ಹೇಳಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ ತಿಳಿಸಿದ್ದಾರೆ.
ಎಷ್ಟು ಹೆಚ್ಚಾಗಲಿದೆ ಖಾಸಗಿ ಬಸ್ ಟಿಕೆಟ್ ದರ?
ಬೇರೆ ಬೇರೆ ಕಾರಣಗಳಿಂದಾಗಿ ಈವರೆಗೆ ಟಿಕೆಟ್ ದರ ಹೆಚ್ಚಳ ಮಾಡಿರಲಿಲ್ಲ. ಸಾರಿಗೆ ಸಚಿವರಿಗೆ ಈ ಬಗ್ಗೆ ಮನವಿ ಕೊಟ್ಟಿದ್ದೆವು. ಅವರು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರು ತಕ್ಷಣ ತೀರ್ಮಾನ ತೆಗೆದುಕೊಳ್ಳುವಂತೆ ಕಂಡು ಬರುತ್ತಿಲ್ಲ. ನಮಗೆ ಬಸ್ ಓಡಿಸಲು ಸಾಧ್ಯವಾಗುತ್ತಿಲ್ಲ. ಒಂದೆರಡು ಬಸ್ ಇದ್ದವರು ಸಂಚಾರ ಸ್ಥಗಿತಗೊಳಿಸಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ನಷ್ಟದಲ್ಲಿವೆ. ಡೀಸೆಲ್ ದರ ಏರಿಕೆಯಾದಾಗ ಸೆಸ್ ಹಾಕಲು ನಮಗೆ ಅವಕಾಶ ಇದೆ. ಇದೇ ಆಧಾರದಲ್ಲಿ ಪ್ರತಿ ಟಿಕೆಟಿಗೆ 1 ರೂ.ನಿಂದ 3 ರೂ. ವರೆಗೆ ಏರಿಕೆ ಆಗಬಹುದು. ಹತ್ತು ದಿನದ ಒಳಗೆ ಸಭೆ ಕರೆದು ರಾಜ್ಯವಾಪಿ ದರ ಏರಿಕೆ ಜಾರಿ ಮಾಡುತ್ತೇವೆ ಎಂದು ಕುಯಿಲಾಡಿ ಸುರೇಶ್ ನಾಯ್ಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಮೇಲಿನ ಅಬಕಾರಿ ಸುಂಕ 2 ರೂ ಹೆಚ್ಚಳ; ಆದರೆ ಬೆಲೆ ಏರಿಕೆ ಇರಲ್ಲ
ರಾಜ್ಯದ 17 ಜಿಲ್ಲೆಗಳಲ್ಲಿ ಒಟ್ಟು 8,000 ಖಾಸಗಿ ಬಸ್ಸುಗಳಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ನಂತರ ಖಾಸಗಿ ಬಸ್ಸು ಉದ್ಯಮ ನಷ್ಟದಲ್ಲಿದೆ. ಪ್ರಯಾಣಿಕರು ಇಲ್ಲ ಎಂಬ ಕಾರಣಕ್ಕೆ ಬಸ್ ರದ್ದು ಮಾಡುವಂತಿಲ್ಲ, ಹಾಗಾಗಿ ದರ ಏರಿಕೆ ಅನಿವಾರ್ಯ ವಾಗಿದೆ ಎಂದು ಅವರು ಹೇಳಿದ್ದಾರೆ.