ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಯುವಕ ಯುವತಿಯರಿಗೆ ಸೆಕ್ಯೂರಿಟಿ ತರಬೇತಿ
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸೆಕ್ಯೂರಿಟಿ ತರಬೇತಿ ಮತ್ತು ಔದ್ಯೋಗಿಕ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಪಶ್ಚಿಮ ಬಂಗಾಳ, ಛತ್ತೀಸ್ ಘಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ತಾನ, ಝಾರ್ಖಂಡ ಮತ್ತು ದೆಹಲಿಯ ಒಟ್ಟು 43 ಯುವಕ ಯುವತಿಯರು ಪಾಲ್ಗೊಂಡಿದ್ದರು. ಹಾಗಾದ್ರೆ, ಈ ಕಾರ್ಯಕ್ರಮದ ಉದ್ದೇಶವೇನು?

ಬೆಂಗಳೂರು, (ಏಪ್ರಿಲ್ 7): ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು(bengaluru Art of Living Center) ಇತ್ತೀಚೆಗೆ, ಯುವಕ ನಾಯಕ ತರಬೇತಿ ಕಾರ್ಯಕ್ರಮ (ವೈಲ್ಟಿಪಿ) ವನ್ನು ಪೂರ್ಣಗೊಳಿಸಿರುವ ಗ್ರಾಮೀಣ ಯುವಕ ಯುವತಿಯರಿಗೆ ಪ್ರಾರಂಭಿಕ ಹಂತದ ಸೆಕ್ಯೂರಿಟಿ ತರಬೇತಿ ಮತ್ತು ಅವರಿಗೆ ಉದ್ಯೋಗವನ್ನು ಕೊಡಿಸಲು ಔದ್ಯೋಗಿಕ ಶಿಬಿರವನ್ನು ನಡೆಸಿತು. ಗ್ರಾಮೀಣ ಯುವಜನತೆಯನ್ನು ಸೆಕ್ಯೂರಿಟಿ ಗಾರ್ಡ್, ಫೋರ್ಮಾನ್, ಹೌಸ್ ಕೀಪಿಂಗ್, ಎಲೆಕ್ಟ್ರೀಷಿಯನ್, ವಾಹನ ಚಾಲಕರು ಮತ್ತು ವೃದ್ಧರ ಆರೈಕೆಗಳಂತಹ ನೌಕರಿಗಳಿಗೆ ತಯಾರು ಮಾಡುವುದು ಇದರ ಉದ್ದೇಶವಾಗಿತ್ತು. ಇದರ ಪ್ರಥಮ ಹಂತದ ತರಬೇತಿಯು ಮಾರ್ಚ್ 17 ರಿಂದ 25 ರವರೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಸಲಾಯಿತು.
18 ರಿಂದ 35 ವರ್ಷಗಳ 43 ಯುವಕರು ಪಶ್ಚಿಮ ಬಂಗಾಳ, ಛತ್ತೀಸ್ ಘಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ತಾನ, ಝಾರ್ಖಂಡ ಮತ್ತು ದೆಹಲಿಯಿಂದ ಬಂದು ಭಾಗವಹಿಸಿದ್ದು, ಎರಡು ತಿಂಗಳ ಆನ್-ಜಾಬ್ ತರಬೇತಿಯನ್ನು ಪಡೆದುಕೊಂಡರು. ತರಬೇತಿಯಲ್ಲಿ ಯಶಸ್ವಿಗಳಾದವರಿಗೆ ಮಾರ್ಚ್ 27 ರಂದು ಉದ್ಯೋಗ ಅವಕಾಶದ ಶಿಬಿರವನ್ನು ನಡೆಸಲಾಯಿತು.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಪಾರಂಪರಿಕ ಶಾಲೆಯಿಂದ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಪ್ರಶಸ್ತಿ ಪ್ರದಾನ
ಈ ಕಾರ್ಯಕ್ರಮವನ್ನು “ಸುಮೇರು ಸುರಕ್ಷಾ ಎಲ್ ಎಲ್ ಪಿ’ಯ ವತಿಯಿಂದ ನಡೆಸಲಾಗಿದ್ದು, ಇದು ಶ್ರೀ ಸುಮೇರು ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ (SSRPL)ನ ಅಂಗವಾಗಿದೆ. ಈ ತರಬೇತಿಯ ಹಿಂದಿರುವ ಗುರಿಯೆಂದರೆ, – “ಭಾರತದ ಪ್ರತಿಯೊಬ್ಬ ಯುವಕ ಯುವತಿಯರೂ ಸಹ ತಮ್ಮ ಕುಶಲತೆ ಮತ್ತು ಸಾಮರ್ಥ್ಯಗಳಿಗೆ ತಕ್ಕಂತೆ ತರಬೇತಿಯನ್ನು ಪಡೆಯಬಹುದು” ಎಂಬುದಾಗಿದೆ. 2026 ರೊಳಗೆ ಶ್ರೀ ಸುಮೇರು ಸುರಕ್ಷಾ ಎಲ್ ಎಲ್ ಪಿಯು 10,000 ಗ್ರಾಮೀಣ ಯುವಕರಿಗೆ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಈ ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡಿ, ಅವರಿಗೆ ಆರ್ಥಿಕ ಸುರಕ್ಷತೆಯನ್ನು ನೀಡುವ ಗುರಿಯನ್ನು ಹೊಂದಿದೆ. ಮುಂದಿನ ಸೆಕ್ಯೂರಿಟಿ ತರಬೇತಿಯನ್ನು ಮೇ 1 ರಿಂದ 15 ರವರೆಗೆ ನಡೆಸಲಾಗುವುದು.
ತರಬೇತಿಯ ಮಾದರಿಯು ಹೀಗಿದೆ: 10 ದಿವಸಗಳ ಪ್ರಾಥಮಿಕ ತರಬೇತಿ. ಇದಾದ ನಂತರ ಎರಡು ತಿಂಗಳ ಆನ್ ಜಾಬ್ ತರಬೇತಿ. ನಂತರ ಉದ್ಯೋಗದ ಅವಕಾಶಗಳು. ಯಶಸ್ವಿಯಾಗಿ ತರಬೇತಿ ಪಡೆದವರಿಗೆ 17,000 ರೂಪಾಯಿಗಳ ಮಾಸಿಕ ಸಂಬಳದ ಉದ್ಯೋಗ ದೊರಕುತ್ತದೆ.
ತರಬೇತಿಯು ಸುದರ್ಶನ ಕ್ರಿಯೆ, ಸ್ವ-ರಕ್ಷಣಾ ತಂತ್ರಗಳು, ಸೆಕ್ಯೂರಿಟಿ ನಿರ್ವಹಣೆ ಮತ್ತು ದೈಹಿಕ ವ್ಯಾಯಾಮಗಳ ಕಲಿಯುವಿಕೆಯನ್ನು ಒಳಗೊಂಡಿರುತ್ತದೆ. ತರಬೇತಿ ಪಡೆಯುವವರು ಡ್ರಿಲ್ ಗಳಲ್ಲಿ ಮತ್ತು ಸೆಕ್ಯೂರಿಟಿ ಬ್ರೀಫಿಂಗ್ ಗಳಲ್ಲಿ ಸಹ ಭಾಗವಹಿಸುತ್ತಾರೆ. ಎನ್ ಎಸ್ ಡಿ ಸಿ ಯಿಂದ ಮಾನ್ಯತೆ ಪಡೆದಂತಹ ಕೈಪಿಡಿಗಳನ್ನು ಅವರಿಗೆ ನೀಡಲಾಗುತ್ತದೆ. ಅವರು ವಾರಕ್ಕೊಮ್ಮೆ ಸುದರ್ಶನ ಕ್ರಿಯೆಯ ಫಾಲೋ ಅಪ್ ಗಳಲ್ಲಿ ಮತ್ತು ತಿಂಗಳಿಗೊಮ್ಮೆ ಆನ್ಲೈನ್ ಫಾಲೋ ಅಪ್ ಸೆಷನ್ ಗಳಲ್ಲಿ ಭಾಗವಹಿಸುತ್ತಾರೆ.
ಆನ್ ಜಾಬ್ ತರಬೇತಿಯ ಸಮಯದಲ್ಲಿ ಬೇಸಿಕ್ ಕಂಪ್ಯೂಟರ್ ಕುಶಲತೆ, ಸಂಪರ್ಕದ ಹಾಗೂ ಭಾಷೆಯ ಕುಶಲತೆಯನ್ನು ವರ್ಧಿಸಲಾಗುತ್ತದೆ. ತರಬೇತಿಯ ಕೊನೆಯ ಹಂತದಲ್ಲಿ ಉದ್ಯೋಗ ನೀಡಲಿರುವ ಕಂಪನಿಗಳ ಸಂದರ್ಶನದಲ್ಲಿ ಹಾಗೂ ಉದ್ಯೋಗ ಪಡೆಯುವ ಕಾರ್ಯವಿಧಾನಗಳಲ್ಲಿ ಪಾಲ್ಗೊಳ್ಳುತ್ತಾರೆ.
ತರಬೇತಿ ಪಡೆದವರು, ಈ ಅನುಭವವು ಬಹಳ ಸಮೃದ್ಧವಾಗಿತ್ತು ಎಂದು ಹಂಚಿಕೊಂಡಿದ್ದಾರೆ. ದೆಹಲಿಯಿಂದ ಬಂದ ಅರ್ಚನಾ ಚೌರಾಸಿಯಾರವರು, “ನಾನು ಇಲ್ಲಿ ಸೆಕ್ಯೂರಿಟಿ ತರಬೇತಿಯನ್ನು ಪಡೆಯಲು ಬಂದೆ. ಅದನ್ನು ಹೇಗೆ ನಡೆಸುವುದು, ಅದರ ಲಾಭಗಳೇನು ಎಂದು ಕಲಿತೆ” ಎಂದರು. ಈಗ ಅವರು ಉದ್ಯಮದ ನೌಕರರಿಗೆ ಸೆಕ್ಯುರಿಟಿ ತರಬೇತಿಯನ್ನು ನೀಡಬಲ್ಲ ವಿಶ್ವಾಸವನ್ನು ಹೊಂದಿದ್ದಾರೆ.