ಪೋಕ್ಸೋ ಪ್ರಕರಣ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ತುಸು ರಿಲೀಫ್
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದಲ್ಲಿ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಹೈಕೋರ್ಟ್ನಲ್ಲಿ ತುಸು ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಕೋರ್ಟ್ ಮುಂದುವರಿಸಿದೆ.
ಬೆಂಗಳೂರು, ಆಗಸ್ಟ್ 30: ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ತಾತ್ಕಾಲಿಕ ರಿಲೀಫ್ ನೀಡಿದೆ. ಬಿಎಸ್ವೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿದೆ. ಬಿಎಸ್ವೈ ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನೂ ಮುಂದುವರಿಸಿದೆ.
ಮಂತ್ರಿಗಳು ತಪ್ಪು ತಪ್ಪಾಗಿ ಪೋಕ್ಸೋ ಪೋಕ್ಸೋ ಎನ್ನುತ್ತಿದ್ದಾರೆ. ಬರಲಿ, ಮಾಡಿಬಿಡೋಣ ವಾದಮಂಡನೆ ಎಂದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಸವಾಲು ಹಾಕಿದರು. ಇದೇ ವೇಳೆ, ನಾವು ಸಿದ್ಧರಿದ್ದೇವೆ, ಸ್ವಲ್ಪ ಸಮಯ ಬೇಕು ಎಂದು ಎಸ್ಪಿಪಿ ಅಶೋಕ್ ನಾಯ್ಕ್ ಹೇಳಿದರು. ನೀವು ರೆಡಿ ಆದ್ರೆ ನಾನು ಈಗಲೇ ರೆಡಿ ಎಂದು ನಾಗೇಶ್ ಹೇಳಿದರು. ನಂತರ ಸಿಐಡಿ ಮನವಿ ಮೇರೆಗೆ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿತು.
ಪ್ರತಿನಿತ್ಯ ಒಬ್ಬರಲ್ಲ ಒಬ್ಬ ಸಚಿವರು ಯಡಿಯೂರಪ್ಪ ವಿರುದ್ಧ ಆರೋಪಿಸುತ್ತಿದ್ದಾರೆ. ಬಿಎಸ್ವೈ ಶರಣಾಗಬೇಕು, ಜೈಲಿಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಮಧ್ಯಂತರ ಆದೇಶ ತೆರವುಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಈಗ ನೋಡಿದರೆ ವಿಚಾರಣೆ ಮುಂದೂಡಿಕೆ ಕೇಳುತ್ತಿದ್ದಾರೆ. ಬರಲಿ ವಾದ ಮಂಡಿಸಲಿ, ಹಣೆಯಲ್ಲಿ ಬರೆದಿದ್ದರೆ ಜೈಲಿಗೆ ಹೋಗುತ್ತಾರೆ ಎಂದು ವಕೀಲ ನಾಗೇಶ್ ಸವಾಲು ಹಾಕಿದರು.
ಸಿಐಡಿ ಪರ ವಕೀಲರು, ಬಿಎಸ್ವೈ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ದಾಖಲಿಸಲಾಗಿದೆ. ಆರೋಪಪಟ್ಟಿಯ ಪ್ರತಿ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ಸಿಐಡಿ ಪರ ಎಸ್ಪಿಪಿ ಅಶೋಕ್ ನಾಯ್ಕ್ ಮನವಿ ಮಾಡಿದರು. ಅಂತಿಮವಾಗಿ ವಿಚಾರಣೆ ಮುಂದೂಡಿಕೆಯಾಯಿತು.
ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ಕೋರ್ಟ್ಗೆ ಆರೋಪ ಪಟ್ಟಿ ಸಲ್ಲಿಕೆ
ಪ್ರಕರಣ ಸಂಬಂಧ ಜೂನ್ನಲ್ಲಿ ಯಡಿಯೂರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಹಳೇ ಕೇಸ್ ಬಗ್ಗೆ ವಿಚಾರಿಸುತ್ತಾ ರೂಮಿಗೆ ಕರೆದೊಯ್ದು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಯಡಿಯೂರಪ್ಪ ವಿರುದ್ಧದ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಬಾಲಕಿ ಪ್ರತಿಭಟಿಸಿದಾಗ ಹಣ ನೀಡಿ ಕಳುಹಿಸಿರುವುದಾಗಿ ಆರೋಪಿಸಲಾಗಿದೆ ಎಂದೂ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ