ಬೆಂಗಳೂರು, ಜೂನ್ 12: ಪೋಕ್ಸೋ ಪ್ರಕರಣದಲ್ಲಿ (POCSO Case) ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪರನ್ನು (BS Yediyurappa) ಬಂಧಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಂತ್ರಸ್ತೆಯ ಸಹೋದರ ಕರ್ನಾಟಕ ಹೈಕೋರ್ಟ್ಗೆ (Karnataka High Court) ರಿಟ್ ಅರ್ಜಿ ಸಲ್ಲಿಸಿದ್ದಾರೆ. ಘಟನೆ ನಡೆದು ಹಲವು ತಿಂಗಳುಗಳಾದರೂ ಪೊಲೀಸರಿಂದ ಕ್ರಮವಿಲ್ಲ. ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಮಾಜಿ ಸಿಎಂ ಬಿಎಸ್‌ವೈ ಮನೆಯ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ ಎಂದು ಸಂತ್ರಸ್ತೆಯ ಸಹೋದರ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಕನಿಷ್ಠ 41ಎ ಅಡಿ ನೋಟಿಸ್ ನೀಡಿ ಯಡಿಯೂರಪ್ಪರನ್ನು ವಿಚಾರಣೆಗೆ ಕರೆದಿಲ್ಲ. ಈ ಮಧ್ಯೆ, ದೂರುದಾರರಾಗಿರುವ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದು ಹಲವು ತಿಂಗಳಾದರೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಯಡಿಯೂರಪ್ಪರನ್ನು ಬಂಧಿಸುವಂತೆ ನಿರ್ದೇಶಿಸಬೇಕೆಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಮತ್ತೊಂದೆಡೆ, ತಮ್ಮ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಮಾಡಬೇಕೆಂದು ಕೋರಿ ಯಡಿಯೂರಪ್ಪ ಕೂಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿತ್ತು. ಎಫ್ಐಆರ್ ದಾಖಲಾದ ನಂತರ ವಿಚಾರಣೆಗೆ ಹಾಜರಾಗಿದ್ದೆ. ಏಪ್ರಿಲ್ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದ್ದರು ಎಂದು ಯಡಿಯೂರಪ್ಪ ಹೈಕೋರ್ಟ್ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ನೋಟಿಸ್: ಕೇಸ್ ರದ್ದು ಕೋರಿ ಬಿಎಸ್‌ವೈ ಹೈಕೋರ್ಟ್ಗೆ ಮೊರೆ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭದಲ್ಲೇ ಮಾರ್ಚ್ನಲ್ಲಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಡಿಯೂರಪ್ಪ ಮಾತ್ರವಲ್ಲದೆ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಸೇರಿದಂತೆ 53 ಮಂದಿ ವಿರುದ್ಧ ಸಂತ್ರಸ್ತ ಬಾಲಕಿಯ ತಾಯಿ ದೂರು ನೀಡಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇತ್ತೀಚೆಗಷ್ಟೇ ಮೃತಪಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ