ಶಬರಿಮಲೆ ಯಾತ್ರೆಗೆ ಬೆಂಗಳೂರಿನ ಬಾಲಕಿ ಮಾಡಿದ್ದ ಮನವಿ ತಿರಸ್ಕರಿಸಿದ ಕೇರಳ ಹೈಕೋರ್ಟ್
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ 10 ವರ್ಷದಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಬಾರದು ಎಂಬ ನಿಮಯದಿಂದ ಬೆಂಗಳೂರಿನ ಬಾಲಕಿಯೊಬ್ಬಳಿಗೆ ನಿರಾಸೆಯಾಗಿದೆ. 10 ವರ್ಷಕ್ಕೂ ಮೊದಲೇ ತೆರಳಲು ಕೋವಿಡ್ ಹಾಗೂ ತಂದೆಯ ಅನಾರೋಗ್ಯ ಅಡ್ಡಿಯಾಗಿದ್ದರಿಂದ ಇದೀಗ ಅನುಮತಿ ನೀಡಲು ಕೇರಳ ದೇವಸ್ವಂ ಮಂಡಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಆಕೆ ಕೇರಳ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲ್ಪಟ್ಟಿದೆ.
ಕೊಚ್ಚಿ, ಜೂನ್ 12: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ (Sabarimala Ayyappa Temple) ಯಾತ್ರೆಗೆ ಅನುಮತಿ ಕೋರಿ ಬೆಂಗಳೂರು ಉತ್ತರದ (Bengaluru North) 10 ವರ್ಷದ ಬಾಲಕಿ ಸ್ನಿಗ್ಧಾ ಶ್ರೀನಾಥ್ (Snigdha Sreenath) ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ (Kerala High Court) ತಿರಸ್ಕರಿಸಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿಷಯವು ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠದ ಪರಿಗಣನೆಯಲ್ಲಿದೆ ಎಂದು ತಿಳಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸಿತು.
10 ವರ್ಷ ವಯಸ್ಸಾಗಿದ್ದರೂ ಸಹ ಋತುಚಕ್ರ ಆರಂಭವಾಗಿಲ್ಲದೇ ಇರುವ ಕಾರಣ ವಯೋಮಿತಿಯನ್ನು ಲೆಕ್ಕಿಸದೆ ದೇಗುಲ ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಬಾಲಕಿ ಪರ ಕೇರಳ ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು.
10 ವರ್ಷ ವಯಸ್ಸು ಪೂರ್ಣವಾಗುವುದಕ್ಕಿಂತ ಮುಂಚೆಯೇ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಶಬರಿಮಲೆಗೆ ಹೋಗಲು ಬಯಸಿದ್ದೆ. ಆದರೆ, ಆ ಸಂದರ್ಭದಲ್ಲಿ ತಂದೆಯ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ತೊಂದರೆಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈ ಬಾರಿ ಶಬರಿಮಲೆಗೆ ತೆರಳಲು ಅವಕಾಶ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಸೂಚಿಸಬೇಕು ಎಂದು ಬಾಲಕಿ ಮನವಿಯಲ್ಲಿ ಉಲ್ಲೇಖಿಸಿದ್ದಳು. ತಿರುವಾಂಕೂರು ದೇವಸ್ವಂ ಮಂಡಳಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಬಾಲಕಿ ನ್ಯಾಯಾಲಯದ ಮೊರೆ ಹೋಗಿದ್ದಳು.
ಹತ್ತು ವರ್ಷಗಳ ವಯೋಮಿತಿ ತಾಂತ್ರಿಕವಾಗಿದ್ದು, ಸಂಪ್ರದಾಯಗಳನ್ನು ಅನುಸರಿಸಿ ಶಬರಿಮಲೆ ಪ್ರವೇಶಿಸಬಹುದು ಎಂದು ಬಾಲಕಿ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ್ ಕೆ ನರೇಂದ್ರನ್ ಮತ್ತು ನ್ಯಾಯಮೂರ್ತಿ ಹರಿಶಂಕರ್ ವಿ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸದ್ಯ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಷಯವು ಸುಪ್ರೀಂ ಕೋರ್ಟ್‌ನ ಪೀಠದ ಮುಂದಿದೆ ಎಂದು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ, 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶವಿಲ್ಲ ಎಂಬ ತಿರುವಾಂಕೂರು ದೇವಸ್ವಂ ಮಂಡಳಿಯ ನಿಲುವಿನಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Riyana Raju: ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ತೃತೀಯಲಿಂಗಿ
ದೇವಸ್ವಂ ಮಂಡಳಿಯ ಪರ ವಕೀಲರ ವಾರವನ್ನು ಆಲಿಸಿದ ಹೈಕೋರ್ಟ್ ಪೀಠ ಪರವಾಗಿಯೇ ತೀರ್ಪು ನೀಡಿತು. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡುವ ವರೆಗೆ ಅರ್ಜಿದಾರರು ಕಾಯಬೇಕು. ಸಂಪ್ರದಾಯದ ಪ್ರಕಾರ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶ ನೀಡಲಾಗುತ್ತಿಲ್ಲ. ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ ಅರ್ಜಿದಾರರು ಹೈಕೋರ್ಟ್‌ನ ರಿಟ್ ನ್ಯಾಯವ್ಯಾಪ್ತಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಪೀಠ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ