ಆಗಸ್ಟ್​ನಿಂದ ಕಠಿಣ ಕ್ರಮ: ಹೈ ಬೀಮ್​ ಲೈಟ್ ಒನ್​ವೇ, ಫುಟ್​ಬಾತ್​ ಮೇಲೆ ವಾಹನ ಚಾಲನೆ ಮಾಡುವವರೇ ಎಚ್ಚರ

|

Updated on: Jul 22, 2024 | 8:00 PM

ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮಕ್ಕೆ ಟ್ರಾಫಿಕ್​ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಕರ್ನಾಟಕದಾದ್ಯಂತ ಹೈ ಬೀಮ್​ ಲೈಟ್​ ವಾಹನಗಳನ್ನು ತಡೆದು ದಂಡ ಹಾಕುವ ಕೆಲಸ ನಡೆದಿದೆ. ಇದರ ಜೊತೆಗೆ ಒನ್​ವೇ, ಫುಟ್​ಬಾತ್​ ಮೇಲೆ ವಾಹನ ಚಾಲನೆ ಮಾಡುವವರ ವಿರುದ್ಧ ಇದೇ ಆಗಸ್ಟ್​​ನಿಂದ ಇನ್ನಷ್ಟು ಕಠಿಣ ಕ್ರಮಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಆಗಸ್ಟ್​ನಿಂದ ಕಠಿಣ ಕ್ರಮ: ಹೈ ಬೀಮ್​ ಲೈಟ್ ಒನ್​ವೇ, ಫುಟ್​ಬಾತ್​ ಮೇಲೆ ವಾಹನ ಚಾಲನೆ ಮಾಡುವವರೇ ಎಚ್ಚರ
ಅಲೋಕ್​ ಕುಮಾರ್
Follow us on

ಬೆಂಗಳೂರು, (ಜುಲೈ 22): ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ವಿಶೇಷ ಕಾರ್ಯಚರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಅಪಘಾತಕ್ಕೆ ಕಾರಣವಾಗಿರುವ ಪ್ರಖರ ಬೆಳಕು ಹೊರಹಾಕುವ (ಹೈ ಬೀಮ್ ಲೈಟ್) ಮತ್ತು ಕಣ್ಣು ಕುಕ್ಕುವ ಎಲ್​ಇಡಿ ಲೈಟ್​ ಅಳವಡಿಸಿರುವ ವಾಹನಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ರಾಜ್ಯಾದ್ಯಂತ ವಿಶೇಷ ಕಾರ್ಯಚರಣೆ ನಡೆಸಲಾಗಿದೆ. ಇದರ ಜೊತೆಗೆ ಇದೀಗ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ( ಒನ್​ವೇ), ಫುಟ್​ಬಾತ್​ ಮೇಲೆ ವಾಹನ ಚಾಲನೆ ಬಗ್ಗೆ ವಿಶೇಷ ಕಾರ್ಯಚರಣೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ.

ಈ ಕುರಿತು ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕರಾದ ಅಲೋಕ್​ ಕುಮಾರ್​ ಅವರು ಸುತ್ತೋಲೆ ಹೊರಡಿಸಿದ್ದು, ರಸ್ತೆ ಅಪಘಾತ ತಡೆಗಟ್ಟಲು ವಿಶೇಷ ಕಾರ್ಯಚರಣೆ ನಡೆಸುವಂತೆ ಸಂಬಂಧಪಟ್ಟ ಪೊಲೀಸ್​ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ, ಫುಟ್​ಬಾತ್​ ಮೇಲೆ ವಾಹನ ಚಾಲನೆ ಬಗ್ಗೆ ವಿಶೇಷ ಕಾರ್ಯಚರಣೆ ಮಾಡುವುದು, ಇದರ ಜೊತೆಗೆ ಡಿಫೆಕ್ಟಿವ್​ ನಂಬರ್​ ಪ್ಲೇಟ್​ ಮೇಲೆ ಸಹ ಆಗಸ್ಟ್ 1ರಿಂದ ವಿಶೇಷ ಕಾರ್ಯಚರಣೆ ನಡೆಸಲು ಎಲ್ಲಾ ಘಟಕಗಳಲ್ಲಿ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ.

ಇದನ್ನೂ ಓದಿ: ಹೈ ಬೀಮ್‌ ಲೈಟ್‌ ಹಾಕಿಕೊಂಡು ಓಡಾಡುವ ವಾಹನಗಳಿಗೆ ಶಾಕ್, ಕರ್ನಾಟಕದಾದ್ಯಂತ 8244 ಕೇಸ್ ಬುಕ್


ರಾಷ್ಟ್ರೀಯ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವುದು ಜೀವಕ್ಕೆ ಅಪಾಯಕಾರಿಯಾಗಿದ್ದು, ಇಂತಹ ಹೆದ್ದಾರಿಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವವರ ಮೇಲೆ ಬಿಎನ್​ಎಸ್​ 281 ಅಡಿಯಲ್ಲಿ ಮತ್ತು 184 ಐಎಂವಿ ಕಾಯ್ದೆಯಡಿ ಹಾಗೂ ಎಫ್​ಐಆರ್​ ದಾಖಲು ಮಾಡಲು ಕ್ರಮ ಜರುಗಿಸಬೇಕೆಂದು ಖಡಕ್ ಸೂಚನೆ ರವಾನಿಸಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ಇತರೆ ನಗರ ಪ್ರದೇಶಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಹಾಗು ಫುಟ್​ಬಾತ್​ ಮೇಲೆ ಮೋಟಾರು ಸೈಕಲ್​ಗಳ ಚಾಲನೆ ಮಾಡುವುದು ಬಹಳ ಸಾಮಾನ್ಯವಾಗಿದೆ. ಅದಕ್ಕಾಗಿ ಆಗಸ್ಟ್​ 1ರಿಂದ ಈ ವಿಶೇಷ ಕಾರ್ಯಚರಣೆ ನಡೆಸಬೇಕು. ಇದರ ಜೊತೆ ಜನರಲ್ಲಿ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ, ಕರಪತ್ರ, ಧ್ವನಿ ವರ್ದಕ ಉಪಕರಣಗಳ ಮೂಲಕ ಈ ಬಗ್ಗೆ ತಿಳುವಳಿಕೆ ನೀಡಬೇಕೆಂದು ಹೇಳಿದ್ದಾರೆ.

ಒಟ್ಟಿನಲ್ಲಿ ಅಪಘಾತ ತಡೆಗಟ್ಟು ನಿಟ್ಟಿನಲ್ಲಿ ರಸ್ತೆ ಮತ್ತು ಸುರಕ್ಷತೆ ಹೆಚ್ಚುವರಿ ಪೊಲೀಸ್​ ಮಹಾ ನಿರ್ದೇಶಕರಾದ ಅಲೋಕ್​ ಕುಮಾರ್ ಪಣ ತೊಟ್ಟಿದ್ದು, ಈ ಬಗ್ಗೆ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕಿದೆ. ಒಂದು ವೇಳೆ ಈ ಮೇಲಿನ ಎಲ್ಲಾ ನಿಯಮ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.