ಬಲೆಗೆ ಬಿತ್ತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ ಚಿರತೆ ಎಸ್ಕೇಪ್: ಅಧಿಕಾರಿಗಳಿಗೆ ಸ್ಥಳೀಯರು ಫುಲ್ ಕ್ಲಾಸ್
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅದೊಂದು ಚಿರತೆ ಜನರ ನಿದ್ದೆಗೆಡಿಸಿತ್ತು. ಒಬ್ಬೊಬ್ಬರೇ ಓಡಾಡಲು ಭಯಪಡುತ್ತಿದ್ದರು. ಇಂದು ಆ ಚಿರತೆಯನ್ನು ಹಿಡಿಯಲಾಗಿದೆ. ಆದರೆ ಟ್ವಿಸ್ಟ್ ಅಂದರೆ ಬಲೆಗೆ ಬಿತ್ತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ ಚಿರತೆ ಮತ್ತೆ ಎಸ್ಕೇಪ್ ಆಗಿದೆ.
ಬಾಗಲಕೋಟೆ, ಜುಲೈ 22: ಬಲೆಗೆ ಬಿತ್ತೆಂದು ನಿಟ್ಟುಸಿರು ಬಿಡುವಷ್ಟರಲ್ಲೇ ಚಿರತೆ (leopard) ಎಸ್ಕೇಪ್ ಆಗಿರುವಂತಹ ಘಟನೆ ಜಿಲ್ಲೆಯ ಮುಧೋಳ (Mudhol) ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೀಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಗ್ರಾಮಗಳ ಸುತ್ತ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಚಿರತೆ ಸೆರೆಹಿಡಿಯಲು ಹೊಲದಲ್ಲಿ ಬೋನ್ ಇರಿಸಲಾಗಿತ್ತು. ಚಿರತೆ ಕೂಡ ಸಿಕ್ಕಿತ್ತು. ಆದರೆ ಬೋನಿಗೆ ಬಿದ್ದ ಚಿರತೆ ಸರಳು ಬೆಂಡ್ ಮಾಡಿ ಪರಾರಿ ಆಗಿದೆ.
ಕಿಶೋರಿ, ಮಂಟೂರು, ಮೆಳ್ಳಿಗೇರಿ ಹಳ್ಳಿಗಳ ಜನರಿಗೆ ಕಳೆದ ನಾಲ್ಕು ದಿನಗಳಿಂದ ಚಿರತೆ ಆತಂಕ ಶುರುವಾಗಿತ್ತು. ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಕಿಶೋರಿ ಗ್ರಾಮದ ತೋಟದ ವಸತಿ ರೈತರಾದ ಸಂಗಪ್ಪ ಎಂಬುವರ ಆಕಳ ಕರು, ಸಗರಪ್ಪ ನದಾಪ್ ಎಂಬುವರ ಎಮ್ಮೆ ಕರುವಿಗೆ ಕಚ್ಚಿ ಗಾಯಗೊಳಿಸಿತ್ತು. ಒಂದು ನಾಯಿ ಮೇಲೂ ದಾಳಿ ಮಾಡಿ ಕೊಂದು ಹಾಕಿತ್ತು.
ಇದನ್ನೂ ಓದಿ: ಬೆಂಗಳೂರು: ಕಾಡಿನಿಂದ ನಾಡಿಗೆ ಬಂದು ಬಿಎಂಟಿಸಿ ಬಸ್ ಕೆಳಗೆ ಅವಿತುಕೊಂಡ ಮರಿ ಚಿರತೆ
ಹೆಜ್ಜೆ ಗುರುತು ಚಿರತೆಯದ್ದೇ ಎಂಬುದು ಪಕ್ಕಾ ಆಯಿತು ಗ್ರಾಮಸ್ಥರಿಗೆ ಆತಂಕ ಶುರುವಾಗಿತ್ತು. ಹೊಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ದನಕರುಗಳ ಬಗ್ಗೆ ಭಯ, ಒಬ್ಬರೆ ಸಂಚರಿಸಲು ಅಂಜಿಕೆ ಪಡುವಂತಾಗಿತ್ತು. ಬೇಗ ಚಿರತೆ ಹಿಡಿದು ಜನರ ಭಯ ದೂರ ಮಾಡಬೇಕೆಂದು ಅರಣ್ಯಾಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದರು.
ಕಿಶೋರಿ, ಮಂಟೂರು, ಮೆಳ್ಳಿಗೇರಿ ರೈತರ ಹೊಲದ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿತ್ತು. ಈ ಮೂರು ಗ್ರಾಮ ಅಷ್ಟೇ ಅಲ್ಲದೇ ಅಕ್ಕಪಕ್ಕದ ಏಳೆಂಟು ಗ್ರಾಮದ ಜನರಿಗೂ ಆತಂಕ ಶುರುವಾಗಿತ್ತು. ಮುಧೋಳ ಭಾಗದಲ್ಲಿ ತೋಟದ ವಸತಿ ಪ್ರದೇಶ ಹೆಚ್ಚಿದ್ದು, ರಾತ್ರಿ ಹಗಲು ಚಿರತೆಯದ್ದೇ ಚಿಂತೆಯಾಗಿತ್ತು. ಚಿರತೆ ಹಿಡಿಯೋದಕ್ಕೆ ಮುಧೋಳ ಹಾಗೂ ಬೀಳಗಿ ಅರಣ್ಯಾಧಿಕಾರಿಗಳು ಜಂಟಿ ಪ್ರಯತ್ನ ನಡೆಸಿದ್ದರು.
ಇದನ್ನೂ ಓದಿ: ಬೆಂಗಳೂರು: ಹಿಟ್ ಆ್ಯಂಡ್ ರನ್ಗೆ ಚಿರತೆ ಸಾವು ಶಂಕೆ
ಕೋಲು ಹಿಡಿದು ಕಬ್ಬಿನ ಹೊಲ ಸೇರಿದಂತೆ ವಿವಿಧ ಬೆಳೆಗಳಲ್ಲಿ ಸುತ್ತಾಡಿ ಹುಡುಕಾಟ ನಡೆಸಿದ್ದರು. ಜೊತೆಗೆ ರೈತರಿಗೆ ಜಾಗೃತೆಯಿಂದ ಇರಲು ಸೂಚನೆ ನೀಡಿದ್ದರು. ರಾತ್ರಿ ಚಿರತೆ ಓಡಾಡಿದ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ಹುಡುಕಾಟ ನಡೆಸಿದ್ದರು. ಒಬ್ಬರೆ ಹೊಲದಲ್ಲಿ ಓಡಾಡಬಾರದು. ಸಂಜೆ ಮನೆ ಬಿಟ್ಟು ಹೊರಬಾರದು, ದನಕರುಗಳ ಬಗ್ಗೆ ಜಾಗೃತಿಯಿಂದ ಇರಲು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.