ಅಧಿಕಾರ ಹಂಚಿಕೆ ಜಟಾಪಟಿ: ಸಿದ್ದರಾಮಯ್ಯ, ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಬುಲಾವ್, ಎಲ್ಲರ ಚಿತ್ತ ಎಐಸಿಸಿ ಅಧ್ಯಕ್ಷರತ್ತ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕದನ ಕೋಲಾಹಲಕಾರಿ ತಿರುವು ಪಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಶಾಸಕರ ಬಲಾಬಲ ಪ್ರದರ್ಶನ ಶುರುವಾಗಿದೆ. ಈ ಮಧ್ಯೆ ಬೆಂಗಳೂರಿಗೆ ಬಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಹಾಗೂ ಡಿಸಿಎಂಗೆ ಬುಲಾವ್ ಕೊಟ್ಟಿದ್ದಾರೆ ಎನ್ನಲಾಗಿದ್ದು, ಗೊಂದಲಕ್ಕೆ ಅಂತ್ಯ ಹಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಅಧಿಕಾರ ಹಂಚಿಕೆ ಜಟಾಪಟಿ: ಸಿದ್ದರಾಮಯ್ಯ, ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಬುಲಾವ್, ಎಲ್ಲರ ಚಿತ್ತ ಎಐಸಿಸಿ ಅಧ್ಯಕ್ಷರತ್ತ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Updated By: Ganapathi Sharma

Updated on: Nov 22, 2025 | 7:14 AM

ಬೆಂಗಳೂರು, ನವೆಂಬರ್ 22: ಕರ್ನಾಟಕ ಕಾಂಗ್ರೆಸ್ (Congress) ಪಾಳಯದಲ್ಲಿ ಅಧಿಕಾರ ಹಂಚಿಕೆ ಕದನ ತಾರಕಕ್ಕೇರಿದೆ. ದಿನಕ್ಕೊಂದು ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ (Siddaramaiah) ಸಿಎಂ ಆಗಿ ಎರಡೂವರೆ ವರ್ಷ ಮುಗಿಯಿತು. ಕೊಟ್ಟ ಮಾತಿನಂತೆ ಅಧಿಕಾರ ಹಂಚಿಕೆಯಾಗಲೇ ಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಣ ಪಟ್ಟುಹಿಡಿದಿದೆ. ಇದೀಗ ಶಾಸಕ ಬಲಪ್ರದರ್ಶನವೂ ನಡೆಯುತ್ತಿದೆ. ಡಿಕೆಶಿ ಬೆಂಬಲಿತ ಒಕ್ಕಲಿಗ ಶಾಸಕರು ದೆಹಲಿಗೆ ಭೇಟಿ ನೀಡಿ ದಾಳ ಉರುಳಿಸಿದ್ದಾರೆ. ವರಿಷ್ಠರ ಮುಂದೆ ಪರೇಡ್ ನಡೆಸಿದ್ದಾರೆ. ಇತ್ತ ಸಿಎಂ ಆಪ್ತ ಬಣ ಸತೀಶ್ ಜಾರಕಿಹೊಳಿ ಮನೆಯಲ್ಲಿ ಗುರುವಾರ ಡಿನ್ನರ್ ಮೀಟಿಂಗ್ ನಡೆಸಿ ತಂತ್ರಹೂಡಿತ್ತು. ಕಳೆದೆರಡು ದಿನಗಳಿಂದ ಡಿಕೆಶಿ ನಿವಾಸ ಚಟುವಟಿಕೆಯ ಕೇಂದ್ರವಾಗಿದೆ. ಪರಿಷತ್ ಸದಸ್ಯರು, ವಿಧಾನಸಭೆ ಶಾಸಕರು ಸಾಲು ಸಾಲಾಗಿ ಭೇಟಿ ನೀಡುತ್ತಿದ್ದಾರೆ.

ಡಿಕೆ ಶಿವಕುಮಾರ್ ನಿವಾಸಕ್ಕೆ ಶುಕ್ರವಾರ ರಾತ್ರಿಯೂ ಶಾಸಕರ ದಂಡು

ಸಿದ್ದರಾಮಯ್ಯ ಪರ ಮತ್ತು ಡಿಕೆ ಶಿವಕುಮಾರ್​​ಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬ ಲೆಕ್ಕಾಚಾರವೂ ಶುರುವಾಗಿದೆ. ಈ ಮಧ್ಯೆ ಶುಕ್ರವಾರ ರಾತ್ರಿ ಡಿಸಿಎಂ ಅವರ ಸದಾಶಿವನಗರದ ನಿವಾಸಕ್ಕೆ ಶಾಸಕ ಸಿಪಿ ಯೋಗೇಶ್ವರ್, ಪ್ರಕಾಶ್ ಕೋಳಿವಾಡ್ ಹಾಗೂ ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಎಂಎಲ್​ಸಿ ದಿನೇಶ್ ಗೂಳಿಗೌಡ, ಮಾಜಿ ಸಂಸದ ಶಿವರಾಮೇಗೌಡ, ಕಾಂಗ್ರೆಸ್​​ ಮುಖಂಡ ಆನಂದಗಡ್ಡದೇವರ ಮಠ ಭೇಟಿ ಕೊಟ್ಟಿದ್ದಾರೆ. ಡಿಕೆಶಿ ಮತ್ತು ಡಿಕೆ ಸುರೇಶ್ ಜೊತೆ ಕೆಲಕಾಲ ಮಾತುಕತೆ ನಡೆಸಿ ಮಾತುಕತೆ ನಡೆಸಿದ್ದಾರೆ.

ಈ ಮಧ್ಯೆ, ನುಡಿದಂತೆ ಸಿಎಂ ಅವರು ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ಬದ್ಧ. ಅದನ್ನು ಸಿಎಂ ಕೂಡ ಹೇಳಿದ್ದಾರಲ್ಲ. ಅವರ ಅಥಾರಿಟಿಯನ್ನು ನಾವು ಯಾವತ್ತೂ ಪ್ರಶ್ನೆ ಮಾಡಿಲ್ಲ. ಸಂಪುಟ ಪುನಾರಚನೆ ಮಾಡಿ ಅಂದಿಲ್ಲ. 5 ವರ್ಷ ಇರ್ತೀನಿ ಅಂತ ಸಿಎಂ ಹೇಳಿದ್ದಾರೆ. ದೊಡ್ಡವರು ಹಾಗೆ ಹೇಳಿದ ಮೇಲೆ ಚಿಕ್ಕವರಾದ ನಾವು ನಮ್ರತೆಯಿಂದ ಇರಬೇಕು ಎಂದು ಡಿಕೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ, ಡಿಸಿಎಂಗೆ ಖರ್ಗೆ ತುರ್ತು ಬುಲಾವ್

ಅಧಿಕಾರ ಹಂಚಿಕೆ ಕಲಹ ತೀವ್ರಗೊಳ್ಳುತ್ತಿದ್ದಂತೆಯೇ ದೆಹಲಿಯಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕಳೆದ ಶನಿವಾರ ದೆಹಲಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ಬೇಟಿಯಾಗಿದ್ದರು. ಈ ವೇಳೆ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ರಾಹುಲ್ ಗಾಂಧಿ ಅದನ್ನು ಖರ್ಗೆಗೆ ವಹಿಸಿ ಕೈತೊಳೆದುಕೊಂಡಿದ್ದಾರೆ. ನಂತರ ದೆಹಲಿಯಲ್ಲೇ ಖರ್ಗೆಯನ್ನು ಭೇಟಿಯಾಗಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಸೂತ್ರ ಮುಂದಿಟ್ಟಿದ್ದರು. ಆದರೆ, ಖರ್ಗೆ ಮಾತ್ರ ರಾಹುಲ್ ಗಾಂಧಿ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ: ರಾತ್ರೋರಾತ್ರಿ ಸದಾಶಿವನಗರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಮಹತ್ವದ ಬೆಳವಣಿಗೆ!

ಆದರೆ ಈಗ ಸಂಪುಟ ಪುನಾರಚನೆಗೆ ಡಿಕೆ ಬಣ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಖರ್ಗೆ ಬೆಂಗಳೂರು ಭೇಟಿ ಕುತೂಹಲ ಕೆರಳಿಸಿದೆ. ಸದಾಶಿವನಗರದ ಮನೆಯಲ್ಲಿ ತಂಗಿದ್ದು ಇದೀಗ ಎಲ್ಲರ ಚಿತ್ತ ಖರ್ಗೆಯವರತ್ತ ನೆಟ್ಟಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಖರ್ಗೆ ನಿನ್ನೆಯೇ ಬುಲಾವ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇಂದು ಉಭಯ ನಾಯಕರನ್ನು ಮುಖಾಮುಖಿಯಾಗಿ ಕೂರಿಸಿ ಚರ್ಚಿಸುವ ಸಾಧ್ಯತೆಯಿದೆ. ಅಧಿಕಾರ ಹಂಚಿಕೆ ಬಗ್ಗೆ ನಡೆಯುತ್ತಿರುವ ಗೊಂದಲಗಳಿಗೆ ತೆರೆ ಎಳೆಯುತ್ತಾರಾ? ಸಿಎಂ ಕುರ್ಚಿ ಕದನಕ್ಕೆ ಖರ್ಗೆ ಮದ್ದರೆಯುತ್ತಾರಾ? ಇಲ್ಲ ಪರಸ್ಪರ ವಾದ ಆಲಿಸಿ ಹೈಕಮಾಂಡ್‌ಗೆ ವರದಿ ಒಪ್ಪಿಸುತ್ತಾರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ