ಬೆಂಗಳೂರು, (ಮೇ 8): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪದ ಪ್ರಕರಣಗಳ ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ದಾಖಲಿಸುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಪ್ರಕರಣಗಳನ್ನು ನಡೆಸಲು ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗಿದೆ. ತಂಡವನ್ನು ಬಲಪಡಿಸುವ ಉದ್ದೇಶದಿಂದ ಹಿರಿಯ ವಕೀಲರಾದ ಅಶೋಕ್ ನಾಯಕ್ ಹಾಗೂ ಜಯನಾ ಕೊಠಾರಿ ಅವರನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಇರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಪ್ರಜ್ವಲ್ ವಿರುದ್ದ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪಹರಣ ಪ್ರಕರಣಗಳಿದ್ದರೆ, ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣವಿತ್ತು. ಆನಂತರ ಅಪಹರಣ ಪ್ರಕರಣವೂ ದಾಖಲಾಗಿ ಅದರಡಿ ಬಂಧಿಸಲಾಗಿದೆ. ಈ ಎಲ್ಲಾ ಪ್ರಕರಣಗಳ ವಿಚಾರಣೆಗೆ ಸರ್ಕಾರ ಹತ್ತು ದಿನಗಳ ಹಿಂದೆಯೇ ವಿಶೇಷ ತನಿಖಾ ತಂಡ( SIT) ರಚಿಸಿ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್, ಎಸ್ಪಿಗಳಾದ ಸೀಮಾ ಲಾಟ್ಕರ್, ಡಾ.ಸುಮನ್ ಪನ್ನೇಕರ್ ಅವರನ್ನೊಳಗೊಂಡ ತಂಡ ರಚಿಸಿದೆ. ಈ ಪ್ರಕರಣ ವಿಚಾರಣೆಗೆ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಜಗದೀಶ್ ಅವರನ್ನು ನೇಮಿಸಲಾಗಿದೆ. ಈಗಾಗಲೇ ಈ ಪ್ರಕರಣಗಳ ವಿಚಾರಣೆಯೂ ಶುರುವಾಗಿದೆ. ಆದರೆ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಸಮರ್ಥ ವಾದ ಮಂಡನೆ ದೃಷ್ಟಿಯಿಂದ ಹೆಚ್ಚುವರಿಯಾಗಿ ಸರ್ಕಾರಿ ಅಭಿಯೋಜಕರನ್ನು ಬುಧವಾರ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಪಾಲಾದ ರೇವಣ್ಣ ವಿಚಾರಣಾಧೀನ ಕೈದಿ ನಂಬರ್ 4567
ಈ ಪ್ರಕರಣ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದೆ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣದ ಜತೆಗೆ ಅತಿ ಗಣ್ಯರು ಭಾಗಿಯಾಗಿರುವ ಆರೋಪಗಳಿರುವುದರಿಂದ ಎಸ್‌ಐಟಿ ನಡೆಸಲಿರುವ ತನಿಖೆಗೆ ಮಹತ್ವವೂ ಇದೆ. ಪ್ರಕರಣಗಳ ತನಿಖೆ ಜತೆಗೆ ನ್ಯಾಯಾಲಯದಲ್ಲಿನ ವಿಚಾರಣೆಯೂ ಪ್ರಮುಖವಾಗಿರುವುದರಿಂದ ಹೆಚ್ಚುವರಿಯಾಗಿ ಇಬ್ಬರು ಅಭಿಯೋಜಕರು ಎಸ್‌ಐಟಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈ ಪ್ರಕರಣ ಈಗಾಗಲೇ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಪೆನ್‌ಡ್ರೈವ್ ಬಿಡುಗಡೆ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿದೆ, ಎಸ್‌ಐಟಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕೈಗೊಂಬೆಯಾಗಿದೆ ಎನ್ನುವ ಆರೋಪಗಳು ಜೋರಾಗಿವೆ. ಇದರ ನಡುವೆಯೇ ಎಸ್‌ಐಟಿ ಸಂತ್ರಸ್ತರ ವಿಚಾರಣೆ ಮುಂದುವರೆಸಿದೆ. ಈ ಪ್ರಕರಣದಲ್ಲಿ ಇನ್ನಷ್ಟು ದೂರು, ಮೊಕದ್ದಮೆ ದಾಖಲಾಗುವ ಸೂಚನೆಯೂ ಇರುವುದರಿಂದ ಸಿಬ್ಬಂದಿ, ತಜ್ಞರು ಹಾಗೂ ಅಭಿಯೋಜಕರೊಂದಿಗೆ ಎಸ್‌ಐಟಿ ತಂಡ ಬಲಪಡಿಸುವ ಕೆಲಸ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Wed, 8 May 24