ಪರಪ್ಪನ ಅಗ್ರಹಾರ ಜೈಲು ಪಾಲಾದ ರೇವಣ್ಣ ವಿಚಾರಣಾಧೀನ ಕೈದಿ ನಂಬರ್ 4567
ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಅಮಾವಾಸ್ಯೆ ದಿನವೇ ಸಾಲು, ಸಾಲು ಸಂಕಷ್ಟ ಎದುರಾಗಿದೆ. ಜನಪ್ರತಿನಿಧಿ ನ್ಯಾಯಾಲಯ ಇಂದು ಜಾಮೀನು ವಿಚಾರಣೆಯನ್ನು ಮುಂದೂಡಿಕೆ ಮಾಡಿದ್ರೆ, 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರೊಂದಿಗೆ ಮಹಿಳೆಯ ಕಿಡ್ನಾಪ್ ಕೇಸ್‌ನಲ್ಲಿ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಇದೀಗ ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ.
ಬೆಂಗಳೂರು, (ಮೇ 08): ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣಗೆ(JDS MLA HD Revanna) 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇದೀಗ ಜೈಲು ಅಧಿಕಾರಿಗಳು ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ (HD Revanna prisoner No) ನೀಡಿದ್ದಾರೆ. ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆ ರೇವಣ್ಣ ವಿಚಾರಣಾಧೀನ ಬಂಧಿ ನಂಬರ್ 4567 (HD Revanna prisoner No 4567) ನೀಡಲಾಗಿದೆ.
ಮೇ 14ರವರೆಗೆ ನ್ಯಾಯಾಂಗ ಬಂಧನ
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎನ್ನಲಾಗಿರುವ ಸಂಸತ್ರಸ್ತೆಯನ್ನು ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್ಐಟಿ ಕಸ್ಟಡಿ ಅವಧಿ ಇಂದು (ಮೇ 08) ಮುಕ್ತಾಯವಾಗಿದ್ದರಿಂದ ರೇವಣ್ಣ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೀಗ ಕೋರ್ಟ್ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಮತ್ತೊಂದೆಡೆ ರೇವಣ್ಣ ಅವರ ಜಾಮೀನು ಅರ್ಜಿ ಸಹ ನಾಳೆಗೆ ಮುಂದೂಡಿದೆ. ಇದರಿಂದ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲೇ ಗತಿ.
ಇದನ್ನೂ ಓದಿ: ಕಿಡ್ನಾಪ್ ಪ್ರಕರಣ: ಮೇ 14ರವರೆಗೆ ಹೆಚ್ಡಿ ರೇವಣ್ಣಗೆ ನ್ಯಾಯಾಂಗ ಬಂಧನ
ಹೆಚ್ಡಿ ರೇವಣ್ಣ ಬಂಧನ
ಈ ಮಧ್ಯೆ ಮಾಜಿ ಹೆಚ್ಡಿ ರೇವಣ್ಣ ವಕೀಲರ ಮೊರೆ ಹೋಗಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಸಿದ್ದರು. ಶನಿವಾರ (ಮೇ 04) ಸಂಜೆ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು. ಇದೇ ಬೆನ್ನಲ್ಲೇ ಶನಿವಾರ ಸಂಜೆಯೇ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ನಿವಾಸದಲ್ಲಿ ಹೆಚ್ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
ಶನಿವಾರ ರಾತ್ರಿ 7.30ರ ಸುಮಾರಿಗೆ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಸಿಐಡಿ ಕಚೇರಿಗೆ ರೇವಣ್ಣ ಕರೆತಂದರು. ಭಾನುವಾರ ಸಂಜೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು. ಅದೇ ದಿನ ರಾತ್ರಿ 7 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು.
ಏನಿದು ಕಿಡ್ನಾಪ್ ಕೇಸ್?
ವ್ಯಕ್ತಿಯೊಬ್ಬರು ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ಅವರ ಚಿತ್ರವೂ ಇತ್ತು, ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್ಐಟಿ ಗುರುತಿಸಿದೆ. ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಸಂತ್ರಸ್ತೆಯ 20 ವರ್ಷದ ಪುತ್ರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಮಹಿಳೆಯ ಪತ್ತೆಗಾಗಿ ನಂತರ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಲಾಗಿತ್ತು. ಮಹಿಳೆ ರೇವಣ್ಣ ಅವರ ಆಪ್ತನ ತೋಟದ ಮನೆಯಲ್ಲಿ ಪತ್ತೆಯಾಗಿದ್ದಳು. ಬಳಿಕ ಮೇ 03ರ ಸಂಜೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣಗೆ ಎಸ್ಐಟಿ ಮೂರನೇ ನೋಟಿಸ್ ನೀಡಿತ್ತು.
Published On - 8:31 pm, Wed, 8 May 24