ಬೆಂಗಳೂರು, ಮೇ 6: ಚುನಾವಣೆ ಹೊತ್ತಲ್ಲಿ ದೇಶಾದ್ಯಂತ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಅತ್ಯಾಚಾರ ಕೇಸ್ ಭಾರಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ (Congress) ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ, ಜೆಡಿಎಸ್ ಮೈತ್ರಿಯನ್ನು ಟೀಕಿಸುತ್ತಿದೆ. ರಾಷ್ಟ್ರ ನಾಯಕರೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಪ್ರಜ್ವಲ್ ಕೇಸ್ ಅನ್ನೇ ದಾಳ ಮಾಡಿಕೊಂಡಿದ್ದಾರೆ. ಈ ಮಧ್ಯೆ ಮೇ 7ರಂದು ಮತದಾನ ಮುಗಿದ ನಂತರ ಪ್ರಜ್ವಲ್ ಭಾರತಕ್ಕೆ ವಾಪಸಾಗುವ ಸಾಧ್ಯತೆ ಇದೆ ಎಂದು ಮೂಲಗಳು ‘ಟಿವಿ9’ಗೆ ತಿಳಿಸಿವೆ.
ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದ ದಿನವೇ, ಅಂದರೆ ಏಪ್ರಿಲ್ 26ರ ಮಧ್ಯರಾತ್ರಿಯೇ ಪ್ರಜ್ವಲ್ ದೇಶ ಬಿಟ್ಟು ಹೊರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದರು. ಮೇ 5ರಂದೇ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವ ಪುಕಾರು ಹಬ್ಬಿತ್ತು. ಬೆಂಗಳೂರು, ಮಂಗಳೂರು, ಗೋವಾ ಅಥವಾ ಕೊಚ್ಚಿ ಏರ್ಪೋರ್ಟ್ಗಳಲ್ಲಿ ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದರು. ಆದ್ರೆ ಪ್ರಜ್ವಲ್ ಬರಲೇ ಇಲ್ಲ. ಸದ್ಯ ಬಂದಿರುವ ಮಾಹಿತಿ ಪ್ರಕಾರ ಚುನಾವಣೆ ಬಳಿಕ, ಅಂದರೆ ಮೇ 7ರ ನಂತ್ರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 2ನೇ ಹಂತದ ಮತದಾನ ಬಳಿಕ ಪ್ರಜ್ವಲ್ ಶರಣಾಗತಿಯಾಗುವ ಸಾಧ್ಯತೆಯೂ ಇದೆ. ಈ ಮಧ್ಯೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಸಿಬಿಐಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರಜ್ವಲ್ಗೆ ನೋಟಿಸ್ ನೀಡಲು ಮಹಿಳಾ ಆಯೋಗವೂ ಸಿದ್ಧತೆ ನಡೆಸಿದೆ.
ಏಪ್ರಿಲ್ 26ರಂದು ಜರ್ಮನಿಗೆ ತೆರಳಿದ್ದ ಪ್ರಜ್ವಲ್ ಅಂದೇ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಮೇ 15ಕ್ಕೆ ವಾಪಸ್ ಬರಲು ರಿಟರ್ನ್ ಟಿಕೆಟ್ ಬುಕ್ ಆಗಿತ್ತು. ಇದಾದ ಬಳಿಕ ಎಸ್ಐಟಿ ನೋಟಿಸ್ ಹಿನ್ನೆ ಮೇ 3ಕ್ಕೆ ವಾಪಸ್ ಬರಲು ಮತ್ತೊಂದು ಟಿಕೆಟ್ ಬುಕ್ ಮಾಡಲಾಗಿತ್ತು. ಇನ್ನು ಪ್ರಜ್ವಲ್ಗಾಗಿ ಎಸ್ಐಟಿ ಅಧಿಕಾರಿಗಳು 2 ದಿನದಿಂದ ಕಾಯುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಇಮಿಗ್ರೇಷನ್ನಲ್ಲಿ ಬೆಂಗಳೂರಿಗೆ ಬರುವ ವಿಮಾನಗಳ ಪ್ರಯಾಣಿಕರ ಲಿಸ್ಟ್ ಪರಿಶೀಲನೆ ನಡೆಸಿದ್ದಾರೆ. ಪ್ರಜ್ವಲ್ ಪಾಸ್ಪೋರ್ಟ್ ನಂಬರ್ ಸಮೇತ ಟಿಕೆಟ್ ಪರಿಶೀಲನೆ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಫ್ಲೈಟ್ನಲ್ಲಿ ಪ್ರಜ್ವಲ್ ಟಿಕೆಟ್ ಬುಕ್ ಆಗಿಲ್ಲ. ದುಬೈ, ಮಸ್ಕತ್, ಫ್ರಾಂಕ್ಫರ್ಟ್ ಸೇರಿ ಹಲವು ದೇಶಗಳ ವಿಮಾನಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಎರಡು ಪಾಳಿಯಲ್ಲಿ ಎರಡು ತಂಡಗಳಿಂದ ಏರ್ಪೋಟ್ನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಜ್ವಲ್ಗೆ ಬಂದ್ರೆ ಏರ್ಪೋಟ್ನಿಂದಲೇ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ತಲೆಮರೆಸಿಕೊಂಡದ್ದು ಸಾಕು, ವಿಚಾರಣೆಗೆ ಹಾಜರಾಗು: ಪ್ರಜ್ವಲ್ಗೆ ಕುಟುಂಬಸ್ಥರು, ಆಪ್ತರಿಂದಲೇ ಹೆಚ್ಚಾದ ಒತ್ತಡ
ಈ ಮಧ್ಯೆ, ಪ್ರಜ್ವಲ್ ಲೈಂಗಿಕ ದೌರ್ಜನ್ಯ ಕೇಸ್ನಿಂದ ಮುಜುಗರಕ್ಕೀಡಾಗಿರುವ ಕುಟುಂಬದವರು ವಿಚಾರಣೆಗೆ ಹಾಜರಾಗುವಂತೆ ಸಂಸದ ಪ್ರಜ್ವಲ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ಇರುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಇದ್ರಿಂದ ಕುಟುಂಬ, ಪಕ್ಷಕ್ಕೆ ಮುಜುಗರ ಉಂಟು ಆಗ್ತಿದೆ. ಮೊದಲು ಎಸ್ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸು. ಕಾನೂನು ಹೋರಾಟದಿಂದ ಸತ್ಯಾಂಶ ಹೊರಬರುತ್ತದೆ. ವಿಚಾರಣೆಗೆ ಹಾಜರಾಗದೇ ಕಾನೂನು ಹೋರಾಟಕ್ಕೆ ಮೊರೆ ಹೋದ್ರೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಈಗಾಗಲೇ ಈ ಪ್ರಕರಣದಿಂದ ಸಾಕಷ್ಟು ಡ್ಯಾಮೇಜ್ ಆಗ್ತಿದೆ. ಕೂಡಲೇ ವಕೀಲರ ಜತೆ ಚರ್ಚಿಸಿ ವಿಚಾರಣೆಗೆ ಹಾಜರಾಗು ಎಂದು ಕುಟುಂಬದವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ