ಬೆಂಗಳೂರು (ಮೇ.3): ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Videos Case) ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಬೆನ್ನಲ್ಲೇ ಇದೀಗ ಅವರ ತಂದೆ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣಗೂ (HD Revanna) ಸಹ ಕರ್ನಾಟಕ ವಿಶೇಷ ತನಿಖಾ ದಳ (ಎಸ್‌ಐಟಿ) ಲುಕ್ ಔಟ್ ನೋಟಿಸ್(Look Out Notice) ಜಾರಿ ಮಾಡಿದೆ. ಪ್ರಕರಣ ಸಂಬಂಧ ಬಂಧನದ ಭೀತಿಯಲ್ಲಿರುವ ರೇವಣ್ಣ ದೇಶ ಬಿಟ್ಟು ಹೊಗುವುದನ್ನ ತಡೆಯಲು ಎಸ್‌ಐಟಿ ಈ ಲುಕ್ ನೋಟಿಸ್ ನೀಡಿದೆ.
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರ್ನಾಲ್ಕು ದಿನಗಳಿಂದ ವಿಚಾರಣೆಗೆ ಹಾಜರಾಗದಿದ್ದರಿಂದ ವಿದೇಶಕ್ಕೆ ಹಾರುವ ಯತ್ನ ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಈ ಲುಕ್ಔಟ್ ಅಸ್ತ್ರ ಪ್ರಯೋಗಿಸಿದೆ. ಇದರಿಂದ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.
ಇದನ್ನೂ ಓದಿ: ಗನ್ ತೋರಿಸಿ ಜೆಡಿಎಸ್ ನಾಯಕಿ ಮೇಲೆಯೇ ಪ್ರಜ್ವಲ್ ಅತ್ಯಾಚಾರ, ಇಲ್ಲಿದೆ ಇಂಚಿಂಚು ಡಿಟೇಲ್ಸ್!
ಈಗಾಗಲೇ ರೇವಣ್ಣ ಸಂತ್ರಸ್ಥೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಕೋರ್ಟ್, ಜಾಮೀನು ನೀಡದೇ ನಾಳೆಗೆ ವಿಚಾರಣೆ ಮುಂದೂಡಿದೆ. ಇದರಿಂದ ರೇವಣ್ಣಗೆ ನಿರಾಸೆಯಾಗಿದೆ.
ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ಈಗಾಗಲೇ ಲುಕ್ ಔಟ್ ನೋಟೀಸ್ ಜಾರಿ ಮಾಡಿ ಬಂಧನಕ್ಕೆ ಬಲೆ ಬೀಸಿದೆ. ಈ ಮೂಲಕ ವಿಮಾನ ನಿಲ್ದಾಣ, ಭೂ ಗಡಿ ಪ್ರದೇಶ ಅಥವಾ ಬಂದರುಗಳಲ್ಲಿ ಪತ್ತೆಯಾದರೂ ಬಂಧಿಸಲು ಮುಂದಾಗಿದೆ. ಸದ್ಯ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದುಕೊಂಡೇ ಕಾನೂನು ಹೋರಾಟ ನಡೆಸಿದ್ದಾರೆ.
ಒಟ್ಟಿನಲ್ಲಿ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ತಂದೆ ಮಕ್ಕಳ ಬಂಧನವಾದರೂ ಅಚ್ಚರಿಪಡಬೇಕಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.