ಬೆಂಗಳೂರು, ಮೇ 3: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು (Anticipatory Bail Plea) ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ (HD Revanna) ಶುಕ್ರವಾರ ಹಿಂಪಡೆದಿದ್ದಾರೆ. ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಸೇರಿಸಿಲ್ಲ ಎಂಬ ವಿಶೇಷ ತನಿಖಾ ತಂಡದ ಹೇಳಿಕೆ ಬೆನ್ನಲ್ಲೇ ರೇವಣ್ಣ ಈ ಕ್ರಮ ಕೈಗೊಂಡಿದ್ದಾರೆ. ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪವಿಲ್ಲದಿರುವುದರಿಂದ ನಿರೀಕ್ಷಣಾ ಜಾಮೀನು ಅಗತ್ಯವಿಲ್ಲ ಎಂದು ಎಸ್ಐಟಿಯ ಎಸ್ಪಿಪಿ ಎನ್. ಜಗದೀಶ್ ಕೋರ್ಟ್ಗೆ ತಿಳಿಸಿದ್ದರು.
ಈ ದಿನದವರೆಗೆ ರೇವಣ್ಣ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಲ್ಲ ಎಂದು ಎನ್. ಜಗದೀಶ್ ಕರ್ನಾಟಕ ಹೈಕೋರ್ಟ್ಗೆ ನೀಡಿದ್ದ ಮಾಹಿತಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ದಾಖಲಿಸಿಕೊಂಡಿತು. ನಂತರ ರೇವಣ್ಣ ಅರ್ಜಿ ವಾಪಸ್ ಪಡೆದರು.
ಈ ಮಧ್ಯೆ, ಮಹಿಳೆಯೊಬ್ಬರು ಕಾಣೆಯಾಗಿರುವ ವಿಚಾರವಾಗಿ ರೇವಣ್ಣ ವಿರುದ್ಧ ಮೈಸೂರಿನ ಕೆಆರ್ ನಗರದಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಮಾಜಿ ಸಚಿವ ಹೆಚ್ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ, ಮೈಸೂರಿನಲ್ಲಿಯೂ ಕೇಸ್ ದಾಖಲು
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ರೇವಣ್ಣಗೆ ಸಂಕಷ್ಟ ಶುರುವಾಗಿದೆ. ಈ ಮಧ್ಯೆ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಲು ರೇವಣ್ಣ ಕಾಲಾವಕಾಶ ಕೇಳಿದ್ದಾರೆ. ಮತ್ತೊಂದೆಡೆ, ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಗುರುವಾರವೇ ತಿಳಿಸಿದ್ದಾರೆ. ಈ ಮಧ್ಯೆ, ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದರೂ ಅವರನ್ನು ಕರೆತಂದು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Fri, 3 May 24