ಪ್ರವಾಸಿಗರಿಗೆ ಗುಡ್ ನ್ಯೂಸ್: ಲಕ್ಷದ್ವೀಪದಿಂದ ಮಂಗಳೂರಿಗೆ ಬಂತು ಹೈಸ್ಪೀಡ್ ಪ್ಯಾಸೆಂಜರ್ ಹಡಗು, ಕೇವಲ 7 ಗಂಟೆಯ ಪ್ರಯಾಣ!
ನಾಲ್ಕು ವರ್ಷಗಳ ಹಿಂದೆ ಲಕ್ಷದ್ವೀಪಕ್ಕೆ ಮಂಗಳೂರಿನಿಂದ ಸಂಚರಿಸುವ ಪ್ರಯಾಣಿಕ ಹಡಗಿನ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಮೊದಲ ಹೈಸ್ಪೀಡ್ ಪ್ರಯಾಣಿಕ ಹಡಗು ಆಗಮಿಸಿದೆ. ವಿಶೇಷವೆಂದರೆ, ಪ್ರಯಾಣದ ಅವಧಿ ಕೇವಲ 7 ಗಂಟೆ ಆಗಿದ್ದು, ಟಿಕೆಟ್ ದರವೂ ಕಡಿಮೆ ಇದೆ. ವಿವರಗಳಿಗೆ ಮುಂದೆ ಓದಿ.
ಮಂಗಳೂರು, ಮೇ 3: ಕೊನೆಗೂ ಕರ್ನಾಟಕದ ಪ್ರವಾಸಿಗರಿಗೆ ಅಥವಾ ಕರ್ನಾಟಕದ ಮೂಲಕ ಲಕ್ಷದ್ವೀಪ (Lakshadweep) ಪ್ರವಾಸ ತೆರಳುವವರಿಗೆ ಶುಭ ಸುದ್ದಿ ಬಂದಿದೆ. ಕೋವಿಡ್ 19 ಸಾಂಕ್ರಾಮಿಕದ ನಂತರ ಸ್ಥಗಿತಗೊಂಡಿದ್ದ ಮಂಗಳೂರು (Mangaluru) ಲಕ್ಷದ್ವೀಪ ಪ್ರಯಾಣಿಕ ಹಡಗು ಪುನರಾರಂಭಗೊಳ್ಳುವ ಸುಳಿವು ದೊರೆತಿದೆ. ಇದರ ಅಂಗವಾಗಿ, ಲಕ್ಷದ್ವೀಪದಿಂದ ಮಂಗಳೂರಿನ ಹಳೆ ಬಂದರಿಗೆ ಮೊದಲ ಹೈಸ್ಪೀಡ್ ಪ್ರಯಾಣಿಕ ಹಡಗು (Hi-Speed Passenger Ship) ಎಂಎಸ್‌ವಿ ಪ್ಯಾರಾಲಿ ಮೇ 2ರಂದು ಗುರುವಾರ ಆಗಮಿಸಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕ ಹಡಗು ಸಂಚಾರ ಸ್ಥಗಿತಗೊಂಡಿತ್ತು. ಸೇವೆಯನ್ನು ಪುನರಾರಂಭಿಸುವ ಭರವಸೆ ಪ್ರವಾಸಿಗರಲ್ಲಿತ್ತು.
ಲಕ್ಷದ್ವೀಪದಿಂದ ಹಳೆ ಬಂದರಿಗೆ 150 ಪ್ರಯಾಣಿಕರು, 8 ಕಾರ್ಮಿಕರು ಮತ್ತು 3 ಸಿಬ್ಬಂದಿ ಪ್ರಯಾಣಿಕ ಹಡಗಿನಲ್ಲಿ ಬಂದರು. ಮಾಜಿ ಶಾಸಕ ಜೆ.ಆರ್.ಲೋಬೊ ಬಂದರಿನಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು.
ಪ್ರಯಾಣದ ಸಮಯ, ದರ ವಿವರ ಇಲ್ಲಿದೆ
ಈ ಹಡಗು ಶನಿವಾರ ಲಕ್ಷದ್ವೀಪಕ್ಕೆ ಮರಳಲಿದೆ. ಈ ಮೊದಲು ಲಕ್ಷದ್ವೀಪದಿಂದ ಹಳೆ ಬಂದರಿಗೆ ಹಡಗಿನ ಪ್ರಯಾಣಕ್ಕೆ 13 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು ಆದರೆ ಈಗ ಹೈ-ಸ್ಪೀಡ್ ಹಡಗು ಕೇವಲ 7 ಗಂಟೆ ತೆಗೆದುಕೊಳ್ಳುತ್ತದೆ. ಪ್ರಯಾಣದ ದರ 450 ರೂ. ಇದೆ.
ಲಕ್ಷದ್ವೀಪದಿಂದ ನೇರವಾಗಿ ಮಂಗಳೂರಿಗೆ ಪ್ರಯಾಣಿಸಿದ್ದು ಸಂತಸ ನೀಡಿದೆ. ಹಡಗು ಇಲ್ಲದಿದ್ದರೆ ನಾವು ಕೊಚ್ಚಿಗೆ ಪ್ರಯಾಣಿಸಿ ಅಲ್ಲಿಂದ ರೈಲಿನಲ್ಲಿ ಮಂಗಳೂರಿಗೆ ತಲುಪಬೇಕಾಗಿತ್ತು. ಲಕ್ಷದ್ವೀಪ ಮತ್ತು ಸ್ಥಳೀಯ ಆಡಳಿತವು ಲಕ್ಷದ್ವೀಪದಿಂದ ಮಂಗಳೂರಿಗೆ ಪ್ರಯಾಣಿಕ ಹಡಗು ಸೌಲಭ್ಯವನ್ನು ಪುನರಾರಂಭಿಸಲು ಉಪಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.“
ಲಾಕ್‌ಡೌನ್‌ಗೆ ಮೊದಲು 2020 ರಲ್ಲಿ ಕೊನೆಯ ಪ್ರಯಾಣಿಕ ಹಡಗು ಲಕ್ಷದ್ವೀಪದಿಂದ ಇಲ್ಲಿಗೆ ಬಂದಿದ್ದರೆ, ಹೈ-ಸ್ಪೀಡ್ ಪ್ಯಾಸೆಂಜರ್ ಹಡಗು 7 ವರ್ಷಗಳ ನಂತರ ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದೆ.
ಈ ಮಧ್ಯೆ, ಲಕ್ಷದ್ವೀಪದ ಮಾಜಿ ಸಂಸದ ಅಮ್ದುಲ್ಲಾ ಸೈಯದ್ ಮಂಗಳೂರಿಗೆ ಆಗಮಿಸಿದ್ದು, ಲಕ್ಷದ್ವೀಪದಿಂದ ಮಂಗಳೂರಿಗೆ ಹಡಗು ಪ್ರಯಾಣದ ಸೌಲಭ್ಯವನ್ನು ಪುನರಾರಂಭಿಸುವ ಬಗ್ಗೆ ಯುಟಿ ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: Lakshadweep search: ಮೇಕ್ ಮೈ ಟ್ರಿಪ್ನಿಂದ ಬೀಚಸ್ ಆಫ್ ಇಂಡಿಯಾ ಅಭಿಯಾನ; ಮೋದಿಯ ಲಕ್ಷದ್ವೀಪ ಭೇಟಿ ಪರಿಣಾಮ
ಲಕ್ಷದ್ವೀಪಕ್ಕೆ ತೆರಳಲು ಬೇಕು ಅನುಮತಿ ಪತ್ರ
ಲಕ್ಷದ್ವೀಪಕ್ಕೆ ತೆರಳಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು. ಯಾರಾದರೂ ಸಂಬಂಧಿಕರು ಲಕ್ಷದ್ವೀಪದಲ್ಲಿ ವಾಸಿಸುತ್ತಿದ್ದರೆ ನಮಗೆ ಅವರಿಂದ ಆಹ್ವಾನದ ಅಗತ್ಯವಿದೆ. ಅಲ್ಲಿಗೆ ಪ್ರಯಾಣಿಸಲು ವ್ಯಕ್ತಿಯು ಅರ್ಜಿ ಸಲ್ಲಿಸಬೇಕು ಮತ್ತು ಪೊಲೀಸ್ ಇಲಾಖೆಯಿಂದ ಅನುಮೋದನೆ ಪಡೆಯಬೇಕು. ಟ್ರಾವೆಲ್ ಏಜೆನ್ಸಿಗಳ ಮೂಲಕ ಪ್ರಯಾಣಕ್ಕಾಗಿ ಬುಕ್ಕಿಂಗ್ ಮಾಡಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Fri, 3 May 24