ನನಗೆ ಯಾರೂ ಸಹೋದರಿಯರು ಇಲ್ಲ: ವಂಚನೆ ಪ್ರಕರಣಕ್ಕೆ ಸಚಿವ ಜೋಶಿ ಸ್ಪಷ್ಟನೆ

| Updated By: ರಮೇಶ್ ಬಿ. ಜವಳಗೇರಾ

Updated on: Oct 18, 2024 | 5:38 PM

ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಸುಲಿಗೆ ಮಾಡಿರುವ ಆರೋಪ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಮತ್ತು ಸಹೋದರಿ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರಿನ ಬಸನವೇಶ್ವರನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಸಚಿವ ಜೋಶಿ ಅವರೇ ಸ್ಪಷ್ಟನೆ ನೀಡಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ನನಗೆ ಯಾರೂ ಸಹೋದರಿಯರು ಇಲ್ಲ: ವಂಚನೆ ಪ್ರಕರಣಕ್ಕೆ ಸಚಿವ ಜೋಶಿ ಸ್ಪಷ್ಟನೆ
ಪ್ರಲ್ಹಾದ್ ಜೋಶಿ
Follow us on

ನವದೆಹಲಿ, (ಅಕ್ಟೋಬರ್ 18): ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ಸುಲಿಗೆ ಮಾಡಿದ್ದ ಆರೋಪದಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ, ಸಹೋದರಿ ಸೇರಿದಂತೆ ಮೂವರ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಹೆಸರು ತಳುಕು ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖುದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಸಹೋದರಿ ಇದ್ದಾರೆ ಎನ್ನುತ್ತಿದ್ದಾರೆ. ನನಗೆ ಯಾರೂ ಸಹೋದರಿಯರು ಇಲ್ಲ. ಗೋಪಾಲ್ ಜೋಷಿ ನಮ್ಮ ಸಹೋದರ
ನಾನು ಗೋಪಾಲ್ ಜೋಷಿ ಬೇರೆಯಾಗಿ 35 ವರ್ಷ ಆಗಿದೆ. ನನ್ನ ಹಾಗೂ ಗೋಪಾಲ್ ಜೋಷಿ ಮಧ್ಯೆ ಯಾವುದೆ ವ್ಯವಹಾರ ಇಲ್ಲ. ಯಾರು ಹಣ ಪಡೆದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸ್ಪಷ್ಟಪಡಿಸಿದರು.

ಈ ಸಂಬಂಧ ನವದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ನಿನ್ನೆ(ಅ.17) ನನ್ನ ಸಹೋದರ ನನ್ನ ಮೇಲೆ ಎಫ್​ಐಆರ್ ಆಗಿದ್ದು, ಇಂದು ಕಾಂಗ್ರೆಸ್ ನವರು ಪ್ರತಿಭಟನೆ ಮಾಡಿದ್ದಾರೆ. ನನಗೆ ಸಹೋದರಿ ಇದ್ದಾರೆ ಎನ್ನುತ್ತಿದ್ದಾರೆ. ನನಗೆ ಯಾರೂ ಸಹೋದರಿಯರು ಇಲ್ಲ. ನಾವು ನಾಲ್ಕು ಸಹೋದರರು. ಒಬ್ಬ ಸಹೋದರ ತೀರಿ ಹೋಗಿದ್ದಾರೆ. ಗೋಪಾಲ್ ಜೋಷಿ ನಮ್ಮ ಸಹೋದರ. ನಾನು ಗೋಪಾಲ್ ಜೋಷಿ ಬೇರೆಯಾಗಿ 35 ವರ್ಷ ಆಗಿದೆ. ದುರ್ದೈವದಿಂದ‌ ಅವರ ಮೇಲೆ ಹಿಂದೆಯೂ ಆರೋಪ ಬಂದಿತ್ತು. ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಇಂತಹದ್ದೆ ವಿಚಾರ ಬಂದಿತ್ತು. ನನ್ನ ಸಹೋದರನೊಂದಿಗೆ ನನ್ನ ಹೆಸರು ತಳುಕು ಹಾಕಲಾಗುತ್ತೆ. ನನ್ನ ಸಹೋದರನ ಜೊತೆ ನನ್ನ ಹೆಸರು ತಳುಕು ಹಾಕದಂತೆ ಕೋರ್ಟ್ ನಿಂದ‌ ತಡೆ ತರಲಾಗಿದೆ. ನನ್ನ ಹಾಗೂ ಗೋಪಾಲ್ ಜೋಷಿ ಮಧ್ಯೆ ಯಾವುದೆ ವ್ಯವಹಾರ ಇಲ್ಲ ಎಂದು ಹೇಳಿದರು.

ನನ್ನ ಸಹೋದರನ ಜೊತೆ ವ್ಯವಹಾರ ಅಥವಾ ಅವ್ಯವಾಹಾರ ಇಲ್ಲ. ಸಾಮಾಜಿಕ ಅಥವಾ ಆರ್ಥಿಕವಾಗಿ ಯಾವುದೆ ಸಂಬಂಧ ಇಲ್ಲ. ಕೋರ್ಟ್ ಗೂ ಇದನ್ನೆ‌ ಹೇಳಿದ್ದೇನೆ. 2012ರಲ್ಲೆ ಇದನ್ನು ಜಾಹಿರಾತು ಸಹ ನೀಡಿದ್ದು, ನನ್ನ ಹೆಸರು ತಳುಕು ಹಾಕದಂತೆ ಜಾಹಿರಾತು ನೀಡಲಾಗಲಿದೆ. ವಿಜಯಲಕ್ಷ್ಮಿ ಯಾರು ಎಂದು ನನಗೆ ಗೊತ್ತಿಲ್ಲ. ನಾನು 35 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಯಾರಾದ್ರೂ ಫೋಟೊ ತೆಗೆಸಿಕೊಂಡಿದ್ರೆ ನನಗೆ ಗೊತ್ತಿಲ್ಲ. ನನ್ನ ಸಹೋದರ ಜೊತೆ ಕುಟುಂಬ ವ್ಯವಸ್ಥಾಪನ ಪತ್ರ ಮಾಡಿಸಿಕೊಳ್ಳಲಾಗಿದೆ. ನನ್ನ ಹಾಗೂ ಸಹೋದರನ ಜೊತೆ ಯಾವುದೇ ಮಾತುಕತೆ ನಡೆಸುತ್ತಿಲ್ಲಎಂದು ತಿಳಿಸಿದರು.

ದುಡ್ಡು ಕಳೆದುಕೊಂಡಿರುವುದಕ್ಕೆ ವಿಷಾಧವಿದೆ. ನನ್ನ ಬಂಧಿಸಬೇಕು ಎನ್ನುವುದು ಹಾಸ್ಯಾಸ್ಪದ. ಯಾರು ಹಣ ಪಡೆದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಕಲ್ಲಿದ್ದಲು ಸಚಿವನಾಗಿ ಕೆಲಸ ಮಾಡಿದ್ದೇನೆ. ಬೇರೆ ಸಚಿವರು ಕಲ್ಲಿದ್ದಲು ಮಸಿ ಹತ್ತಿಸಿಕೊಂಡು ಹೋಗಿದ್ದಾರೆ. ನಾನು ಆ ರೀತಿಯ ಯಾವುದೇ ಕೆಲಸ ಮಾಡಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.

ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ:

ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸಹ ಸಂಬಂಧವಿಲ್ಲ. ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ತನಿಖೆ ಆಗಬೇಕಿದೆ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ತನಿಖೆಯಿಂದ ಸಾಬೀತಾಗಬೇಕಿದೆ ಅಷ್ಟೇ.  ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ಒಂದು ರೀತಿ ಹುಂಬತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು.

ನನ್ನ ಕೈ ಮಸಿ ಬಳಿದುಕೊಂಡಿಲ್ಲ:

ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಒಂದು ಕಾಲದಲ್ಲಿ “ಕೋಲ್ ಎಂದರೆ ಭ್ರಷ್ಟಾಚಾರ, ಹಗರಣದ್ದೇ ಸದ್ದು ಮಾಡುತ್ತಿತ್ತು”. ಇಂಥ ಒಂದು ಖಾತೆ ನಿರ್ವಹಿಸಿದಾಗ್ಯೂ ಯಾವತ್ತೂ ಕೈ ಮಸಿ ಮಾಡಿಕೊಂಡಿಲ್ಲ. ಇಂದಿಗೂ ಶುದ್ಧ ಹಸ್ತನಾಗಿದ್ದೇನೆ ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ಏನಿದು ಪ್ರಕರಣ?

ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡಿ ವಿಜಯಪುರ ನಾಗಠಾಣ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಚವ್ಹಾಣ್​ ಅವರಿಂದ 2 ಕೋಟಿ ರೂ. ಸುಲಿಗೆ ಮಾಡಿದ್ದ ಆರೋಪದಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ, ಸಹೋದರಿ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಸುನಿತಾ ಚೌವ್ಹಾಣ್ ಎನ್ನುವರು ನೀಡಿರುವ ದೂರಿನ ಮೇರೆಗೆ ಗೋಪಾಲ ಜೋಶಿ, ವಿಜಯಲಕ್ಷ್ಮೀ ಜೋಶಿ ಹಾಗೂ ಅಜಯ್ ಜೋಶಿ ವಿರುದ್ಧ ಪ್ರಕರಣ ದಾಖಲಾಗಿದೆ. ಆದ್ರೆ, ಇದೀಗ ಕೇಂದ್ರ ಸಚಿವ ಜೋಶಿ ಅವರು ತಮಹೆ ಸಹೋದರಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಸಹೋದರ ಗೋಪಾಲ ಅವರ ಜೊತೆ ಯಾಉವದೇ ವ್ಯವಹಾರ ಇಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ