ಪೊಲೀಸರೇ ಮುಂದೆ ನಿಂತು ಮಟ್ಕಾ ಆಡಿಸುತ್ತಿದ್ದಾರೆ, ದಿನಕ್ಕೆ ಲಕ್ಷ ಕಲೆಕ್ಷನ್: ಜೆಡಿಎಸ್ ನಾಯಕ ಎಚ್​ಡಿ ರೇವಣ್ಣ ಗಂಭೀರ ಆರೋಪ

ರೇಣುಕಾ ಪ್ರಸಾದ್ ಅವರು ಸರ್ಕಲ್ ಇನ್​ಸ್ಪೆಕ್ಟರ್​ ಆಗಿ ಹಾಸನಕ್ಕೆ ಬಂದ ನಂತರ ನಗರ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಎಂದು ಜೆಡಿಎಸ್ ನಾಯಕರು ದೂರಿದ್ದರು.

ಪೊಲೀಸರೇ ಮುಂದೆ ನಿಂತು ಮಟ್ಕಾ ಆಡಿಸುತ್ತಿದ್ದಾರೆ, ದಿನಕ್ಕೆ ಲಕ್ಷ ಕಲೆಕ್ಷನ್: ಜೆಡಿಎಸ್ ನಾಯಕ ಎಚ್​ಡಿ ರೇವಣ್ಣ ಗಂಭೀರ ಆರೋಪ
ಹೆಚ್.ಡಿ ರೇವಣ್ಣ
Edited By:

Updated on: Jun 02, 2022 | 11:45 AM

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಹಾಸನ ಪೊಲೀಸರ ನಿರ್ಲಕ್ಷ್ಯ ಧೋರಣೆ ಮತ್ತು ಕರ್ತವ್ಯ ಲೋಪದ ಬಗ್ಗೆ ದೊಡ್ಡಮಟ್ಟದ ಚರ್ಚೆ ಆರಂಭವಾಗಿದೆ. ಈ ಸಂಬಂಧ ಜೆಡಿಎಸ್​ ಶಾಸಕ ಎಚ್​.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಆರೋಪ ಆಧರಿಸಿ ಹಾಸನ ನಗರ ವೃತ್ತದ ಸರ್ಕಲ್ ಇನ್​ಸ್ಪೆಕ್ಟರ್ (ಸಿಪಿಐ) ರೇಣುಕಾ ಪ್ರಸಾದ್​ಗೆ ನೊಟೀಸ್ ಜಾರಿ ಮಾಡಲಾಗಿದೆ. ಡಿವೈಎಸ್​​ಪಿ ಮತ್ತು ಸಿಪಿಐ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಎಸ್​​ಪಿ, ವಿಸ್ತೃತ ತನಿಖೆಗೆ ಆದೇಶಿಸಿದ್ದಾರೆ. ರೇಣುಕಾ ಪ್ರಸಾದ್ ಅವರು ಸರ್ಕಲ್ ಇನ್​ಸ್ಪೆಕ್ಟರ್​ ಆಗಿ ಹಾಸನಕ್ಕೆ ಬಂದ ನಂತರ ನಗರ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ಹೆಚ್ಚಾಗಿದೆ ಎಂದು ಜೆಡಿಎಸ್ ನಾಯಕರು ದೂರಿದ್ದರು.

ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಚ್​.ಡಿ.ರೇವಣ್ಣ, ಹಾಸನದಲ್ಲಿ ಮಟ್ಕಾ ಮತ್ತು ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಸ್ವತಃ ಪೊಲೀಸರೇ ಮುಂದೆ ನಿಂತು ಮಟ್ಕಾ ಆಡಿಸುತ್ತಿದ್ದಾರೆ. ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ಕಲೆಕ್ಷನ್ ಮಾಡುತ್ತಾರೆ. ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಫೋನ್ ರೆಕಾರ್ಡ್ ಬೇಕಿದ್ದರೆ ಕೊಡುತ್ತೇನೆ. ಸಿಪಿಐ ಕೆಲವೇ ದಿನಗಳಲ್ಲೇ 3 ಕೋಟಿ ರೂಪಾಯಿ ಬೆಲೆಬಾಳುವ ಮನೆ ಕಟ್ಟಿಸಿದ್ದಾರೆ. ಅಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂತು? ಅವರೇನಾದರೂ ಹಣ ಬಿಡುವ ಗಿಡ ಬೆಳೆದಿದ್ದಾರಾ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹಾಸನ ನಗರಸಭಾ ಸದಸ್ಯನ ಹತ್ಯೆ: ಎಸ್​ಪಿ ವಿರುದ್ಧ ಹರಿಹಾಯ್ದ ಜೆಡಿಎಸ್, ಪೊಲೀಸರಿಗೆ ರಜೆ ಮೇಲೆ ತೆರಳಲು ಸೂಚನೆ

ಪ್ರಶಾಂತ್ ಪತ್ನಿ ಸೌಮ್ಯಾರಿಂದ ದೂರು

ಹಾಸನ ನಗರಸಭೆಯ ಜೆಡಿಎಸ್ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬೆಸ್ತರಬೀದಿಯ ಪೂರ್ಣಚಂದ್ರ ಎನ್ನುವವರ ವಿರುದ್ಧ ಕೊಲೆ ಆರೋಪದ ದೂರು ದಾಖಲಾಗಿದೆ. ಪ್ರಶಾಂತ್ ಪತ್ನಿ ಸೌಮ್ಯಾ ಈ ಸಂಬಂಧ ಪೆನ್ಷನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದಾರೆ. ಆಟೊದಲ್ಲಿ ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿಗಳು ಪತಿಯನ್ನು ಹತ್ಯೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸೌಮ್ಯಾ ದೂರಿನಲ್ಲಿ ಹೇಳಿದ್ದಾರೆ. ಈ ದೂರು ಆಧರಿಸಿ ಪೂರ್ಣಚಂದ್ರ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾರುಕಟ್ಟೆ ಬಂದ್

ಹಾಸನದಲ್ಲಿ ತಮ್ಮ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪ್ರಶಾಂತ್ ಅವರನ್ನು ಬೆನ್ನಟ್ಟಿದ್ದ ದುಷ್ಕರ್ಮಿಗಳು ನಿನ್ನೆ (ಜೂನ್ 1) ಸಂಜೆ 6:45ರ ಸುಮಾರಿಗೆ ಹತ್ಯೆ ಮಾಡಿದ್ದರು. ಮಾರುಕಟ್ಟೆಯಲ್ಲಿ ಹೂವು, ಹಣ್ಣಿನ ಅಂಗಡಿ ನಡೆಸುತ್ತಿದ್ದ ಪ್ರಶಾಂತ್​ ಹೂವು, ಹಣ್ಣಿನ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಆಗಿದ್ದರು. ಹಾಸನ ನಗರಸಭೆಯ 16ನೇ ವಾರ್ಡ್​ನ ಜೆಡಿಎಸ್ ಸದಸ್ಯರಾಗಿದ್ದರು. ಪ್ರಶಾಂತ್ ನಿಧನದ ಹಿನ್ನೆಲೆಯಲ್ಲಿ ವರ್ತಕರು ಬೆಳಗ್ಗೆಯಿಂದ ವ್ಯಾಪಾರ ಬಂದ್​ ಮಾಡಿ ಸಂತಾಪ ಸೂಚಿಸಿದರು.

ರಾಜ್​ ಕುಟುಂಬಕ್ಕೆ ಆಪ್ತವಾಗಿದ್ದ ಪ್ರಶಾಂತ್ ಕುಟುಂಬ

ನಿನ್ನೆ ಹಾಸನದಲ್ಲಿ ಕೊಲೆಯಾದ ನಗರಸಭೆ ಸದಸ್ಯ ಪ್ರಶಾಂತ್ ಅವರ ಕುಟುಂಬ ವರನಟ ಡಾ.ರಾಜ್ ಕುಮಾರ್ ಅವರ ಕುಟುಂಬಕ್ಕೆ ಆಪ್ತವಾಗಿತ್ತು. ಪ್ರಶಾಂತ್ ಅವರ ತಂದೆ ಹಾ.ರಾ.ನಾಗರಾಜ್ ಅವರಿ ರಾಜ್​ ಕುಮಾರ್ ಅವರೊಂದಿಗೆ ಆಪ್ತ ಒಡನಾಟವಿತ್ತು. ಈ ಹಿಂದೆ ಪುನೀತ್ ರಾಜ್ ಕುಮಾರ್ ಹಾಸನಕ್ಕೆ ಬಂದಾಗಲೆಲ್ಲಾ ಹಾರಾನಾ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದರು. ರಾಜ್ ಕುಮಾರ್ ಅಭಿಮಾನದ ಮೇಲೆ ಹಾರಾನಾ ತಮ್ಮ ಮೂರನೇ ಮಗನಿಗೆ ಮಯೂರ ಎಂದು ಹೆಸರಿಟ್ಟಿದ್ದರು. ಪುನೀತ್ ರಾಜ್ ಕುಮಾರ್ ಸಾವಿನಿಂದ ನೊಂದು ಐದು ತಿಂಗಳ ಹಿಂದೆ ಮಯೂರ ಆತ್ಮಹತ್ಯೆ ಮಾಡಿಕೊಂಡಿದ್ದರು.

Published On - 11:45 am, Thu, 2 June 22