ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೇ ಗರ್ಭಿಣಿಯರ ಪರದಾಟ; ತಾತ್ಕಾಲಿಕವಾಗಿ ಹೆರಿಗೆ ತಜ್ಞರನ್ನು ನೇಮಿಸುವಂತೆ ಜನರ ಆಗ್ರಹ
ಸೋಂಕು ಕಾಣಿಸಿದ್ದ ವೈದ್ಯರ ಕ್ವಾರಂಟೈನ್ ಅವಧಿ ಮುಕ್ತಾಯ ಆಗಿದ್ದು, ನಾಳೆಯೇ ಆಸ್ಪತ್ರೆಗೆ ಬರಲಿದ್ದಾರೆ. ಅಲ್ಲಿಯೂ ಹೆರಿಗೆ ಚಿಕಿತ್ಸೆ ಮುಂದುವರೆಸಲಾಗುವುದು. ಹೆಚ್ಚಿನ ಚಿಕಿತ್ಸೆ ಇದ್ದವರಿಗೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿಎಚ್ಒ ಡಾ.ಅನಂತ ದೇಸಾಯಿ ಹೇಳಿದ್ದಾರೆ.
ಬಾಗಲಕೋಟೆ: ಕೊರೊನಾ ಸೋಂಕು ಹೆಚ್ಚಿರುವ ಕಾರಣ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಪಕ್ಕದ ಪಟ್ಟಣದಲ್ಲಿ ಇರುವ ಗುಳೇದಗುಡ್ಡದ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ಹೆರಿಗೆ ಆಸ್ಪತ್ರೆಯಾಗಿ ಪರಿವರ್ತಿಸಲಾಗಿತ್ತು. ಆದರೆ, ಇದೀಗ ಈ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿ ಗರ್ಭಿಣಿಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸಮುದಾಯ ಆರೋಗ್ಯ ಕೇಂದ್ರವನ್ನು ಹೆರಿಗೆ ಆಸ್ಪತ್ರೆ ಹಾಗೂ ಸಾಮಾನ್ಯ ರೋಗಿಗಳಿಗೆ ಮೀಸಲಿಡಲಾಗಿದೆ. ಆದರೆ, ಕೊರೊನಾ ಸೋಂಕು ಈ ಆಸ್ಪತ್ರೆಗೂ ಕಾಲಿಟ್ಟಿದ್ದು, ಆಸ್ಪತ್ರೆಯ ಮುಖ್ಯ ವೈದ್ಯರು ಸೇರಿ ಏಳು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಆಸ್ಪತ್ರೆಯಲ್ಲಿ ಇದ್ದ ರೋಗಿಗಳನ್ನು ಡಿಶ್ಚಾರ್ಜ್ ಮಾಡಿ, ತುರ್ತು ಚಿಕಿತ್ಸೆ ಮಾತ್ರ ಶುರು ಮಾಡಿದೆ. ಹೀಗಾಗಿ ಹೆರಿಗೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇಲ್ಲದೇ ಹೆರಿಗೆಗೆ ಬರುವ ಗರ್ಭಿಣಿಯರು ತೊಂದರೆ ಅನುಭವಿಸುವಂತಾಗಿದೆ.
ಗುಳೇದಗುಡ್ಡ ಪಟ್ಟಣದಲ್ಲಿ 296 ಸೇರಿ ತಾಲೂಕಿನಲ್ಲಿ ಒಟ್ಟು 967 ಗರ್ಭಿಣಿಯರು ಇದ್ದಾರೆ. ಇದೀಗ ಸ್ಥಳೀಯವಾಗಿ ಹೆರಿಗೆ ಆಸ್ಪತ್ರೆ ಸೇವೆ ಸಿಗದೇ ಅವರೆಲ್ಲರೂ ಈಗ ಖಾಸಗಿ ಆಸ್ಪತ್ರೆ ಇಲ್ಲವೇ ಜಿಲ್ಲಾ ಕೇಂದ್ರದ ಕಡೆಗೆ ಮುಖ ಮಾಡಬೇಕಿದೆ. ಹೀಗಾಗಿ ಸೋಂಕು ಕಾಣಿಸಿರುವ ವೈದ್ಯರು ಹಾಗೂ ಸಿಬ್ಬಂದಿ ಕ್ವಾರಂಟೈನ್ ಮುಗಿಸಿ ಬರುವವರೆಗೂ ಆಸ್ಪತ್ರೆಗೆ ತಾತ್ಕಾಲಿಕವಾಗಿ ಹೆರಿಗೆ ವೈದ್ಯರನ್ನು ನೇಮಿಸಬೇಕು. ಗರ್ಭಿಣಿಯರಿಗೆ ಅನುಕೂಲ ಕಲ್ಪಿಸಬೇಕು ಮತ್ತು ಈ ಬಗ್ಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಗಮನ ಹರಿಸಲಿ ಎಂದು ಸ್ಥಳೀಯರಾದ ಅಶೋಕ ಹೆಗಡೆ ತಿಳಿಸಿದ್ದಾರೆ.
ಇದೀಗ ಗುಳೇದಗುಡ್ಡ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಸೋಂಕು ತಾಕಿದ್ದರಿಂದ ಆಸ್ಪತ್ರೆಗೆ ಹೆರಿಗೆಗಾಗಿ ಬಂದವರಿಗೆ ಚಿಕಿತ್ಸೆ ಸಿಗದಾಗಿದೆ. ಇತ್ತ ಜಿಲ್ಲಾ ಆಸ್ಪತ್ರೆಯನ್ನು ಕೊವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಹೆರಿಗೆಗೆ ಬರುವವರನ್ನು ಬಾಗಲಕೋಟೆ ನಗರದಲ್ಲಿ ಇರುವ ಕುಮಾರೇಶ್ವರ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ತಜ್ಞ ವೈದ್ಯರು ಇದ್ದಾರೆ. ಹೀಗಾಗಿ ಇಲ್ಲಿಗೆ ಬರಬೇಕು. ಜೊತೆಗೆ ಸೋಂಕು ಕಾಣಿಸಿದ್ದ ವೈದ್ಯರ ಕ್ವಾರಂಟೈನ್ ಅವಧಿ ಮುಕ್ತಾಯ ಆಗಿದ್ದು, ನಾಳೆಯೇ ಆಸ್ಪತ್ರೆಗೆ ಬರಲಿದ್ದಾರೆ. ಅಲ್ಲಿಯೂ ಹೆರಿಗೆ ಚಿಕಿತ್ಸೆ ಮುಂದುವರೆಸಲಾಗುವುದು. ಹೆಚ್ಚಿನ ಚಿಕಿತ್ಸೆ ಇದ್ದವರಿಗೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿಎಚ್ಒ ಡಾ.ಅನಂತ ದೇಸಾಯಿ ಹೇಳಿದ್ದಾರೆ.
ಒಟ್ಟಾರೆ, ಮಹಾಮಾರಿ ಸೋಂಕು ಎಲ್ಲ ಕಡೆಗೂ ನುಗ್ಗುತ್ತಿರುವುದು ಆತಂಕ ಮೂಡಿಸಿದೆ. ಮತ್ತೊಂದೆಡೆ ವೈದ್ಯರಿಗೆ ಸೋಂಕು ಕಾಣಿಸಿದ್ದರಿಂದ ಇದೀಗ ಗರ್ಭಿಣಿ ಮಹಿಳೆಯರಿಗೆ ತೊಂದರೆ ಆಗಿದೆ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಬಾಗಲಕೋಟೆಯಲ್ಲಿ ಹೆರಿಗೆಗೆ ವ್ಯವಸ್ಥೆ ಮಾಡಿದ್ದರೂ ಗ್ರಾಮೀಣ ಪ್ರದೇಶದಿಂದ ಬರುವ ಗರ್ಭಿಣಿಯರಿಗೆ ಕರೆದುಕೊಂಡು ಬರಲು ಹಾಗೂ ಹೆರಿಗೆ ಬಳಿಕ ಅವರನ್ನು ಅವರ ಊರಿಗೆ ತಲುಪಿಸಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕು. ಜತೆಗೆ ತಾತ್ಕಾಲಿಕವಾಗಿ ಗುಳೇದಗುಡ್ಡ ಆಸ್ಪತ್ರೆಗೆ ನುರಿತ ವೈದ್ಯರನ್ನು ನಿಯೋಜನೆಗೆ ಮುಂದಾಗಬೇಕು. ಆ ಮೂಲಕ ಗರ್ಭಿಣಿಯರು ಪರದಾಟ ತಪ್ಪಿಸಬೇಕಿದೆ ಎಂಬ ಮನವಿ ಕೇಳಿ ಬಂದಿದೆ.
ಇದನ್ನೂ ಓದಿ:
ಹಾವೇರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ: ಜನರ ಪರದಾಟ