ಬೆಂಗಳೂರು, ಮಾರ್ಚ್ 6: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan) ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಓರ್ವ ವ್ಯಕ್ತಿಯನ್ನು ಪೊಲೀಸ್ ವಶಕ್ಕೆ ನೀಡಿ ಬೆಂಗಳೂರಿನ 39ನೇ ಎಸಿಎಂಎಂ ಕೋರ್ಟ್ನಿಂದ ಆದೇಶ ಹೊರಡಿಸಲಾಗಿದೆ. ಮೂವರು ಆರೋಪಿಗಳನ್ನ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ನಾಶಿಪುಡಿನನ್ನು 1 ದಿನ ಪೊಲೀಸ್ ಕಸ್ಟಡಿಗೆ ನೀಡಿ ಮುನಾವರ್ ಹಾಗೂ ಇಲ್ತಾಜ್ಗೆ ನ್ಯಾಯಾಂಗ ಬಂಧನ ಆದೇಶಿಸಲಾಗಿದೆ. ವಿಧಾನಸೌಧ ಠಾಣೆ ಪೊಲೀಸರು ಆರೋಪಿಗಳ ಪೂರ್ವಾಪರ ವಿಚಾರಣೆ ಮಾಡಿದ್ದಾರೆ. ಈಗಾಗಲೇ ಆರೋಪಿಗಳ ಧ್ವನಿ ಪರೀಕ್ಷೆ ವರದಿಯನ್ನು ಎಫ್ಎಸ್ಎಲ್ ನೀಡಿದೆ. ಆದರೂ ಹೆಚ್ಚಿನ ಮಾಹಿತಿಗಾಗಿ ಅಹಮದಾಬಾದ್ FSLಗೆ ಸ್ಯಾಂಪಲ್ ರವಾನೆ ಮಾಡಲಾಗಿದೆ.
ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಿದೆ. ಆರೋಪಿಗಳ ಹೇಳಿಕೆ ಹೊರತಾಗಿ ಮತ್ತಷ್ಟು ಮಾಹಿತಿಗಾಗಿ ತನಿಖೆ ಮಾಡಲಾಗುತ್ತಿದೆ. ಆರೋಪಿಗಳ ಅವಶ್ಯಕತೆ ಇಲ್ಲದ ಕಾರಣ ವೈಜ್ಞಾನಿಕ ವಿಚಾರಗಳು ಬಂದ ನಂತರ ಹೆಚ್ಚಿನ ತನಿಖೆಗೆ ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಹಿನ್ನೆಲೆ: ಪಾಕಿಸ್ತಾನಕ್ಕೆ ಹೋಗಿ ಬಂದಿದ್ನಾ ಪ್ರಮುಖ ಆರೋಪಿ?
ಪ್ರಕರಣ ನಡೆದು 6 ದಿನದ ಬಳಿಕ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದರು. ಇಲ್ತಾಜ್, ಮುನಾವರ್, ಮೊಹಮ್ಮದ್ ನಾಶಿಪುಡಿಯನ್ನ ವಿಧಾನಸೌಧ ಪೊಲೀಸರು ಅರೆಸ್ಟ್ ಮಾಡಿದ್ದರು. ಬಂಧಿತರಾಗಿರುವ ಮೂವರ ಪೈಕಿ, ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ನಾಶಿಪುಡಿ ಮೊದಲ ಆರೋಪಿ ಆಗಿದ್ದಾನೆ. ಮುನಾವರ್ 2ನೇ ಆರೋಪಿಯಾಗಿದ್ದು, ದೆಹಲಿಯ ಕಿಶನ್ಗಂಜ್ ನಿವಾಸಿ ಮೊಹಮ್ಮದ್ ಇಲ್ತಾಜ್ 3ನೇ ಆರೋಪಿಯನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ: ಪಾಕ್ ಪರ ಘೋಷಣೆ: ರಾಜ್ಯಸಭೆ ಕಾಂಗ್ರೆಸ್ ಸದಸ್ಯ ನಾಸೀರ್ ಹುಸೇನ್ ವಿರುದ್ಧ ಬಿಜೆಪಿ ದೂರು; ಬಂಧನಕ್ಕೆ ಒತ್ತಾಯ
ಬಂಧಿತರ ಪೈಕಿ ಒಬ್ಬ ಪಾಕಿಸ್ತಾನ ಅಂತಾ ಕೂಗಿದ್ದರೆ, ಉಳಿದ ಇಬ್ಬರು ಜಿಂದಾ ಬಾದ್, ಜಿಂದಾಬಾದ್ ಅಂತಾ ಕೂಗಿದ್ದಾರೆ ಅನ್ನೋದು ಪೊಲೀಸ್ ಮೂಲಗಳಿಂದ ಗೊತ್ತಾಗಿತ್ತು. ಆರೋಪಿಗಳ ಹೇಳಿಕೆ, ತನಿಖೆ ವೇಳೆ ಸಿಕ್ಕಿದ ಸಾಕ್ಷ್ಯಗಳು, FSL ವರದಿ, ಸಾಂದರ್ಭಿಕ ಸಾಕ್ಷ್ಯ ಆಧರಿಸಿ ಬಂಧನ ಮಾಡಿರುವುದಾಗಿ ಕೇಂದ್ರ ವಿಭಾಗದ ಪೊಲೀಸರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.
ಆರೋಪಿಗಳ ಬಂಧನಕ್ಕೂ ಮುನ್ನವೇ ಬಿಜೆಪಿ ಬಾಂಬ್ ಸಿಡಿಸಿತ್ತು. ಖಾಸಗಿ FSL ವರದಿ ಬಿಡುಗಡೆ ಮಾಡಿ, ಪಾಕ್ ಪರ ಘೋಷಣೆ ಕೂಗಿರುವುದು ಸಾಬೀತಾಗಿದೆ ಅಂತಾ ಆರೋಪ ಮಾಡಿತ್ತು. ಖಾಸಗಿ ಸಂಸ್ಥೆಯ ಎಫ್ಎಸ್ಎಲ್ ತಜ್ಞ ಫಣೀಂದ್ರ ತಯಾರಿಸಿರುವ ವರದಿಯನ್ನು ರಾಜ್ಯ ಬಿಜೆಪಿ ಘಟಕ ಟ್ವಿಟರ್ನಲ್ಲಿ ಹಂಚಿಕೊಂಡಿತ್ತು. ಬಳಿಕ ಆರೋಪಿಗಳ ಬಂಧನದ ಬಳಿಕ ಸರ್ಕಾರದ ವಿರುದ್ಧ ಬಿಜೆಪಿ ಕಲಿಗಳು ಕಿಡಿಕಾರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Wed, 6 March 24