ಆಸ್ತಿ ನೋಂದಣಿ ಮಾರ್ಗಸೂಚಿ ದರ ಅಕ್ಟೋಬರ್ 1 ರಿಂದ ಹೆಚ್ಚಳ: ಕೃಷ್ಣ ಬೈರೇಗೌಡ
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಹಣದ ಕ್ರೂಢೀಕರಣಕ್ಕೆ ಹರಸಾಹರಪಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಅದರಂತೆ, ಆಸ್ತಿಗಳ ನೋಂದಣಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ಮುಂದಾಗಿದ್ದು, ಅಕ್ಟೋಬರ್ 1 ರಿಂದ ಜಾರಿಯಾಗಲಿದೆ. ಶೇಕಡಾ 30ರಷ್ಟು ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರು, ಸೆ.21: ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಹಣದ ಕ್ರೋಢೀಕರಣಕ್ಕೆ ಹರಸಾಹರಪಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಈಗಾಗಲೇ ಹಾಲು ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ಆಸ್ತಿಗಳ ನೋಂದಣಿ ಮಾರ್ಗಸೂಚಿ ದರ (Guideline rate for registration of properties) ಹೆಚ್ಚಳಕ್ಕೆ ಮುಂದಾಗಿದೆ. ಈ ಪರಿಷ್ಕೃತ ದರ ಅಕ್ಟೋಬರ್ 1 ರಿಂದ ಜಾರಿಯಾಗಲಿದ್ದು, ಶೇಕಡಾ 30ರಷ್ಟು ದರ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.
ಪ್ರತಿ ವರ್ಷ ದರ ಪರಿಷ್ಕರಣೆ ಮಾಡುವ ನಿಯಮವಿದೆ. ಹೀಗಾಗಿ ಅಕ್ಟೋಬರ್ 1 ರಿಂದ ಪರಿಷ್ಕೃತ ದರವನ್ನು ಜಾರಿ ಮಾಡುತ್ತಿದ್ದೇವೆ ಎಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೃಷ್ಣ ಬೈರೇಗೌಡ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದಾಗ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೆದ್ದಾರಿಗಳು, ವಿಮಾನ ನಿಲ್ದಾಣ, ಐಟಿ ಬಿಟಿ ಬಂದಿರುವ ಕಡೆ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇಕಡಾ 30ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆಯನ್ನು ನಂತರ ಪ್ರಕಟ ಮಾಡಲಾಗುವುದು. ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದರು.
ನೋಂದಣಿ ಇಲಾಖೆಯು ಕಾನೂನು ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಬೇಕು. ಆದರೆ, ಕಳೆದ ಐದು ವರ್ಷಗಳಿಂದ ಮಾರ್ಗದರ್ಶಿ ಮೌಲ್ಯವನ್ನು ಪರಿಷ್ಕರಿಸಲಾಗಿಲ್ಲ. ಮಾರ್ಗಸೂಚಿ ಮೌಲ್ಯದ ಪರಿಷ್ಕರಣೆ ಮಾಡದಿರುವುದು ಪರೋಕ್ಷವಾಗಿ ಕಪ್ಪುಹಣದ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ, ಹೊಸ ಮಾರ್ಗಸೂಚಿ ಮೌಲ್ಯವನ್ನು ಜಾರಿಗೆ ತರಲಾಗುವುದು ಎಂದರು.
ಇದನ್ನೂ ಓದಿ: ಸರ್ಕಾರಿ ಭೂಮಿ ಬಗ್ಗೆ ಮಾಹಿತಿ ಪಡೆದು ಒತ್ತುವರಿ ತೆರವಿಗೆ ಕ್ರಮ: ಕೃಷ್ಣ ಬೈರೇಗೌಡ
ಮಾರ್ಗದರ್ಶಿ ಮೌಲ್ಯದ ಪರಿಷ್ಕರಣೆ ಕುರಿತು ವಿವರಿಸಿದ ಸಚಿವರು, ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ಮೌಲ್ಯವು ಸಮಾನವಾಗಿರುವ ಪ್ರದೇಶಗಳಲ್ಲಿ ಮಾರ್ಗಸೂಚಿ ಮೌಲ್ಯವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ ಮತ್ತು ಮಾರುಕಟ್ಟೆ ದರವು ಮಾರ್ಗಸೂಚಿ ಮೌಲ್ಯಕ್ಕಿಂತ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ.20 ರಿಂದ ಶೇ.25 ರಷ್ಟು ಹೆಚ್ಚಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿದ್ದರೆ ಅಂತಹ ಪ್ರದೇಶಗಳಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅಕ್ಟೋಬರ್ 1 ರಂದು, ಮೊದಲ ಹಂತವಾಗಿ, ಬೆಂಗಳೂರಿನಲ್ಲಿ ಪರಿಷ್ಕೃತ ದರವನ್ನು ಜಾರಿಗೆ ತರಲಾಗುತ್ತದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಉಪಸಮಿತಿ ಚರ್ಚಿಸಿ ಹಂತಹಂತವಾಗಿ ಹೊಸ ಮಾರ್ಗಸೂಚಿ ಮೌಲ್ಯವನ್ನು ಜಾರಿಗೊಳಿಸಲಿದೆ ಎಂದು ಸಚಿವರು ತಿಳಿಸಿದರು.
ಆಸ್ತಿ ನೋಂದಣಿ ಮಾಡುವ ಕಾವೇರಿ-2 ಸಾಫ್ಟ್ವೇರ್ನಲ್ಲಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ. ನಿತ್ಯ ಸರಾಸರಿ 10,000ದಿಂದ 13,000 ಆಸ್ತಿ ನೋಂದಣಿಯಾಗುತ್ತಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ 800 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:15 am, Thu, 21 September 23