ಆರ್​ಎಸ್​ಎಸ್​ ಕಾರ್ಯಾಲಯಗಳಿಗೆ ಪೊಲೀಸ್ ಭದ್ರತೆ: ಬೆದರಿಕೆ ಸಂದೇಶ ಕಳಿಸಿದವನ ಬಂಧನ

ಆರ್​ಎಸ್​ಎಸ್​ ಕಾರ್ಯಾಲಯಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಾಲಯಗಳಿಗೂ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಆರ್​ಎಸ್​ಎಸ್​ ಕಾರ್ಯಾಲಯಗಳಿಗೆ ಪೊಲೀಸ್ ಭದ್ರತೆ: ಬೆದರಿಕೆ ಸಂದೇಶ ಕಳಿಸಿದವನ ಬಂಧನ
ಗೃಹ ಸಚಿವ ಆರಗ ಜ್ಞಾನೇಂದ್ರ
Edited By:

Updated on: Jun 07, 2022 | 3:43 PM

ಶಿವಮೊಗ್ಗ: ಕರ್ನಾಟಕದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevak Sangh – RSS) ಆರ್​ಎಸ್​ಎಸ್​ ಕಾರ್ಯಾಲಯಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಾಲಯಗಳಿಗೂ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ. ಬೆದರಿಕೆಯ ಸಂದೇಶ ಕಳಿಸಿದ್ದ ವ್ಯಕ್ತಿಯನ್ನು ಸೆಂಥಿಲ್ ಎಂದು ಗುರುತಿಸಲಾಗಿದ್ದು, ಆತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಈ ರೀತಿ ಬೆದರಿಕೆ ಕರೆ ಅಥವಾ ಸಂದೇಶಗಳನ್ನು ಕಳಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು. ಉತ್ತರ ಪ್ರದೇಶದ ಎರಡು ಹಾಗೂ ಕರ್ನಾಟಕದ ನಾಲ್ಕು ಆರ್​ಎಸ್ಎಸ್ ಕಾರ್ಯಾಲಯಗಳನ್ನು ಧ್ವಂಸಗೊಳಿಸುವುದಾಗಿ ತಮಿಳುನಾಡಿನ ವ್ಯಕ್ತಿಯೊಬ್ಬ ಉತ್ತರ ಪ್ರದೇಶ ನಿವಾಸಿಗೆ ಬೆದರಿಕೆ ಸಂದೇಶ ಕಳಿಸಿದ್ದ.

ಇದನ್ನೂ ಓದಿ: ಲಕ್ನೋ, ಉನ್ನಾವೋದಲ್ಲಿನ ಆರ್‌ಎಸ್‌ಎಸ್ ಕಚೇರಿಗಳಿಗೆ ಬಾಂಬ್ ಬೆದರಿಕೆ

ಶಂಕಿತ ಉಗ್ರನ ಬಂಧನ, ತನಿಖೆ ಚುರುಕು

ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕನ ಬಂಧನ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯದ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ. ಶಂಕಿತ ಉಗ್ರನಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳು, ಸಂಸ್ಥೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಶಂಕಿತ ಉಗ್ರನಿಗೆ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ, ಮೊಬೈಲ್ ಫೋನ್ ಪಡೆಯಲು ದಾಖಲೆ ಪತ್ರ ಒದಗಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳೀಯರು ಒದಗಿಸಿರುವ ಸಹಾಯದ ಬಗ್ಗೆಯೂ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಶಂಕಿತ ಉಗ್ರನ ಬಂಧನದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಕರ್ನಾಟಕ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಶಂಕಿತರ ಮೇಲೆ ಹದ್ದಿನ ಕಣ್ಣು

ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಶಂಕಿತರ ಮೇಲೆ ಪೊಲೀಸ್ ಇಲಾಖೆ ನಿರಂತರ ಕಣ್ಣಿಟ್ಟಿದೆ. ಹಿಂದೆಯೂ ಭಟ್ಕಳ, ಶಿರಸಿಯಲ್ಲಿ ಶಂಕಿತರನ್ನು ಬಂಧಿಸಲಾಗಿತ್ತು. ಕಾಶ್ಮೀರ ಪೊಲೀಸರಿಗೆ ಕರ್ನಾಟಕ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದರು.

ಉಗ್ರನ ಬಂಧನದ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Prathap Reddy), ಜಮ್ಮು-ಕಾಶ್ಮೀರ ಪೊಲೀಸರು ಶಂಕಿತ ಉಗ್ರನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ನಮ್ಮ ಜೊತೆ ಜಮ್ಮು ಪೊಲೀಸರು ಸಂಪರ್ಕದಲ್ಲಿದ್ದಾರೆ. ಆದರೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ವಿನಿಮಯವಾಗಿಲ್ಲ. ಮುಂದಿನ ಹಂತದಲ್ಲಿ ನಮ್ಮ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:38 pm, Tue, 7 June 22