Rohith Chakratirtha: ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಹೊರಕ್ಕೆ
ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ.
ಬೆಂಗಳೂರು: ದ್ವಿತೀಯ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ (PUC Textbook Revision) ಸಮಿತಿಯಿಂದ ರೋಹಿತ್ ಚಕ್ರತೀರ್ಥ (Rohith Chakratirtha) ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಅವರನ್ನು ಈ ಮೊದಲು ಸರ್ಕಾರವು ನೇಮಿಸಿತ್ತು. ಆದರೆ ಸಾಲುಸಾಲು ವಿವಾದಗಳು ಎದುರಾಗಿತ್ತು. ಇದೀಗ ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡಲು ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ತಿಳಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಅಧ್ಯಾಯ 4.2ರ ಹೊಸ ಧರ್ಮಗಳ ಉದಯ ಪಠ್ಯಭಾಗದ ಪರಿಷ್ಕರಣೆ ಈ ಮೊದಲು ಸರ್ಕಾರ ಮುಂದಾಗಿತ್ತು. ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥ ಅವರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯದ ಪರಿಷ್ಕರಣೆ ವಿವಾದ ಹಿನ್ನಲೆಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೈಬಿಡಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಂದಾಗಿದ್ದಾರೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಶಾಲಾ ಪಠ್ಯಪುಸ್ತಕ ಸಮಿತಿ ವಿಸರ್ಜನೆ
ಹಿಂದುತ್ವ ಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಚಿಂತಕ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ (ಜೂನ್ 3) ವಿಸರ್ಜಿಸಿದ್ದರು. ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ ಎಂಬ ಸೂಚನೆಯನ್ನೂ ಪತ್ರಿಕಾ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ನೀಡಿದ್ದರು. ಪರೋಕ್ಷವಾಗಿ ಸಮಿತಿಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದರು ‘ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ’ ಎಂದು ಹೇಳಿದ್ದರು. ಈ ಪತ್ರಿಕಾ ಹೇಳಿಕೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಸಹಿಯೂ ಇತ್ತು.
ಸರ್ಕಾರದ ಈ ಕ್ರಮದೊಂದಿಗೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವಿವಾದವೊಂದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಂತೆ ಆಗಿದೆ. ಆದರೆ, ಮುಖ್ಯಮಂತ್ರಿಯ ಈ ಕ್ರಮವು ಪಠ್ಯಪರಿಷ್ಕರಣೆ ವಿವಾದವನ್ನು ಸಂಪೂರ್ಣ ಶಮನ ಮಾಡಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಆಗಿರುವ ಪಠ್ಯ ಪರಿಷ್ಕರಣೆ ತಿರಸ್ಕರಿಸಬೇಕು. ಅಂಬೇಡ್ಕರ್, ಕನ್ನಡ ಧ್ವಜ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ಈ ಹಿಂದೆ ಅವಮಾನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯ ಮುಂದುವರಿಸಿದ್ದಾರೆ.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದಾರೆ. ಆದರೆ ಅದು ಉಂಟು ಮಾಡಿದ ಅವಾಂತರಗಳು, ವಿವಾದಗಳು ಇನ್ನೂ ಜೀವಂತವಾಗಿವೆ. ಶಾಲೆಗಳು ಆರಂಭವಾದರೂ ಪಠ್ಯಪುಸ್ತಕಗಳು ಈವರೆಗೆ ಸಿಕ್ಕಿಲ್ಲ. ಕೊರೊನಾ ಕಾರಣದಿಂದ ಹಿಂದಿನ ಎರಡು ವರ್ಷ ಶಾಲೆಗಳು ಮುಚ್ಚಿದ್ದವು. ಈಗ ತಾನೆ ಶಾಲೆಗೆ ಹೊರಟಿರುವ ಮಕ್ಕಳಿಗೆ ತುರ್ತಾಗಿ ಬರಗೂರು ಸಮಿತಿ ರೂಪಿಸಿದ, ಈಗಾಗಲೇ ಲಭ್ಯವಿರುವ ಪಠ್ಯಪುಸ್ತಕಗಳನ್ನೇ ಒದಗಿಸಬೇಕಾಗಿ ವಿನಂತಿ. ದಯವಿಟ್ಟು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬೇಡಿ. ಈಗ ವಿವಾದಕ್ಕೆ ಒಳಗಾಗಿರುವ ಪರಿಷ್ಕೃತ ಪುಸ್ತಕಗಳನ್ನು ಗೋದಾಮಿಗೆ ಕಳಿಸಿ. ನಂತರ ಅವುಗಳ ಪರಿಶೀಲನೆಗೆ ಸಮಿತಿ ಮಾಡಿ. ಮೊದಲು ಮಕ್ಕಳಿಗೆ ಮೊದಲಿನ ಪಠ್ಯಪುಸ್ತಕ ತುರ್ತಾಗಿ ಒದಗಿಸಿ’ ಎಂದು ಅಂಕಣಕಾರ ಸನತ್ ಕುಮಾರ ಬೆಳಗಲಿ ಒತ್ತಾಯಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪಠ್ಯಪರಿಷ್ಕರಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ವೇಳೆ ಪಠ್ಯವನ್ನು ಓದದೇ ಕೇವಲ ವ್ಯಕ್ತಿಯನ್ನೇ ಗುರಿಯಾಗಿಸಿ ನಡೆಯುತ್ತಿದ್ದ ಟೀಕೆಯನ್ನು ಹಲವು ಆಕ್ಷೇಪಿಸಿದ್ದರು. ‘ಪಠ್ಯದಲ್ಲಿ ಏನಿದೆ, ಏನಿಲ್ಲ ಎನ್ನುವುದನ್ನು ಓದದೇ ಟೀಕೆಯ ಸುರಿಮಳೆ ಹರಿಸಲಾಗುತ್ತಿದೆ. ರೋಹಿತ್ ಚಕ್ರತೀರ್ಥ ಎನ್ನುವ ವ್ಯಕ್ತಿಯೇ ನಿಮ್ಮ ವಿರೋಧವಾದರೆ ಅಜಾತಶತ್ರುವನ್ನು ಹುಡುಕಿಕೊಂಡು ಪುಸ್ತಕ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ’ ಎಂದು ಪತ್ರಕರ್ತ ರಾಜೀವ್ ಹೆಗಡೆ ಫೇಸ್ಬುಕ್ನಲ್ಲಿ ಮಾಡಿದ್ದ ಪಬ್ಲಿಕ್ ಪೋಸ್ಟ್ನಲ್ಲಿ ಅಭಿಪ್ರಾಯಪಟ್ಟಿದ್ದರು.
ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿರುವ ಅಂಶ ಮುಖ್ಯಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿದುಬರುತ್ತದೆ. ಪರಿಷ್ಕರಣೆ ಸಮಿತಿಯ ವಿವಿಧ ನಿರ್ಣಯಗಳಿಗೆ ಎದ್ದ ಆಕ್ಷೇಪಗಳು ಮತ್ತು ಸಮಿತಿಯ ಅಧ್ಯಕ್ಷರ ಬಗ್ಗೆ ಹಲವರು ವ್ಯಕ್ತಪಡಿಸಿದ್ದ ಆಕ್ರೋಶಗಳನ್ನೂ ಪರೋಕ್ಷವಾಗಿ ಪತ್ರಿಕಾ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಹಲವು ಆಕ್ಷೇಪಗಳಿಗೆ ಉತ್ತರ, ಸ್ಪಷ್ಟನೆಯನ್ನೂ ಕೊಟ್ಟಿದೆ
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Tue, 7 June 22