Protein Powder: ವಿಧಾನಸೌಧದಲ್ಲಿ ಪ್ರತಿಧ್ವನಿಸಿದ ಪ್ರೋಟೀನ್ ಪೌಡರ್ ದಂಧೆ: ಈ ಪುಡಿ ಅದೆಷ್ಟು ಅಪಾಯಕಾರಿ? ಇಲ್ಲಿದೆ ವಿವರ

| Updated By: ನಯನಾ ರಾಜೀವ್

Updated on: Sep 20, 2022 | 1:46 PM

ಜಿಮ್​ಗಳಲ್ಲಿ ಪ್ರೋಟೀನ್ ಪೌಡರ್(Protein Powder) ಬಳಕೆ ಮಾಡುವುದರಿಂದಾಗುವ ಅಡ್ಡಪರಿಣಾಮಗಳ ಕುರಿತು ವಿಧಾನಸಭೆಯಲ್ಲಿ ಬೆಳಕು ಚೆಲ್ಲಲಾಯಿತು.

Protein Powder: ವಿಧಾನಸೌಧದಲ್ಲಿ ಪ್ರತಿಧ್ವನಿಸಿದ ಪ್ರೋಟೀನ್ ಪೌಡರ್ ದಂಧೆ: ಈ ಪುಡಿ ಅದೆಷ್ಟು ಅಪಾಯಕಾರಿ? ಇಲ್ಲಿದೆ ವಿವರ
Protein Powder
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ (ಸೆ 20) ಪ್ರೋಟೀನ್ ಪೌಡರ್​ಗಳ ದುರ್ಬಳಕೆಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಆರಂಭದಲ್ಲಿ ಆಡಳಿತಾರೂಢ ಶಾಸಕರು ಮತ್ತು ಸಚಿವರು ಹೆಚ್ಚು ಗಮನ ನೀಡಲಿಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ಏಯ್ ಯಾರಪ್ಪಾ, ಸ್ವಲ್ಪ ಕೇಳಿಸ್​ಕೊಳ್ರೀ, ಇದು ಇಂಪಾರ್ಟೆಂಟ್ ಸಬ್ಜೆಕ್ಟ್’ ಎಂದು ಆಡಳಿತ ಪಕ್ಷದ ಗಮನ ಸೆಳೆದರು. ನಂತರ ಸದನದಲ್ಲಿ ಗಂಭೀರ ವಾತಾವರಣ ನೆಲೆಸಿತು. ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್​ ರೆಡ್ಡಿ ಜಿಮ್​ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್ (Protein Powder)ನ ಅಡ್ಡಪರಿಣಾಮಗಳ ಕುರಿತು ವಿಧಾನಸಭೆಯಲ್ಲಿ ಬೆಳಕು ಚೆಲ್ಲಿದರು. ಜಿಮ್​ಗಳಲ್ಲಿ ಪ್ರೊಟೀನ್ ಪೌಡರ್ ನೀಡುತ್ತಾರೆ, ದೇಹವನ್ನು ಸಣ್ಣ ಅಥವಾ ದಪ್ಪ ಮಾಡಲು ಹಾಗೂ ಬಾಡಿ ಬಿಲ್ಡಿಂಗ್​ಗೆ ಇದನ್ನು ಬಳಸಲಾಗುತ್ತದೆ ಎಂದು ಹೇಳಿದರು.

ಪ್ರೋಟೀನ್ ಪೌಡರ್​ಗಳನ್ನು ಜಿಮ್​ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಂತೋಷ್ ಎಂಬ ಯುವಕನಿದ್ದಾನೆ, ಈ ಪ್ರೋಟೀನ್ ಸೇವನೆಯಿಂದ ಅವನ ಎಲ್ಲ ಅಂಗಗಳು ವಿಫಲವಾದವು. ಚಿಕಿತ್ಸೆಗಾಗಿ ಆತನಿಗೆ ಈಗಾಗಲೇ 50 ಲಕ್ಷ ಖರ್ಚು ಮಾಡಿದ್ದಾರೆ. ರಾಜ್ಯದಲ್ಲಿ ಕೂಡಲೇ ಪ್ರೋಟೀನ್ ಪೌಡರ್ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಉತ್ತರ

ಶಾಸಕರ ಆಕ್ಷೇಪಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ, ಪ್ರೋಟೀನ್ ಪೌಡರ್​ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೆ ಕ್ರಮ ಜರುಗಿಸುತ್ತೇವೆ, ಇದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಮಧ್ಯಪ್ರವೇಶಿಸಿ ಮಾತನಾಡಿದ ಸ್ಪೀಕರ್ ಕಾಗೇರಿ, ‘ಇದು ಗಂಭೀರ ಪ್ರಕರಣ. ಆರೋಗ್ಯ, ಗೃಹ, ಹಾಗೂ ಆಹಾರ ಇಲಾಖೆಗಳ ಸಚಿವರು ಸಭೆ ಮಾಡಿ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ನೀಡಿದರು. ದಪ್ಪ ಇದ್ದೋರು ಸಣ್ಣ ಆಗ್ತಾರೆ ಎಂದರೆ ಯಾರಿಗೆ ತಾನೇ ಆಸೆ ಇರಲ್ಲ? ಇಲ್ಲಿ ಯಾರಾದರೂ ದಪ್ಪ ಇರುವವರಿಗೆ ಆ ಪೌಡರ್ ಕೊಟ್ಟು ಪರಿಣಾಮ ನೋಡಿ ಎಂದು ನಗೆಚಟಾಕಿ ಹಾರಿಸಿದರು.

ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮಾತನಾಡಿ, ‘ಅಕ್ರಮವಾಗಿ ಪ್ರೋಟೀನ್ ಪುಡಿ ಮಾರುತ್ತಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಅದರ ಬಗ್ಗೆ ನಮ್ಮ ಇಲಾಖೆ ಗಮನಹರಿಸಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಆ ಪೌಡರ್ ವೈಜ್ಞಾನಿಕವಾಗಿ ಇದೆಯೋ, ಇಲ್ವೋ ಎಂಬುದರ ಬಗ್ಗೆ ಪತ್ತೆ ಹಚ್ಚುತ್ತೇವೆ’ ಎಂದು ಭರವಸೆ ನೀಡಿದರು.

ಪ್ರೋಟೀನ್ ಪೌಡರ್ ಅಡ್ಡಪರಿಣಾಮಗಳು

ಪ್ರೋಟೀನ್ ಪೌಡರ್ ಅಡ್ಡಪರಿಣಾಮಗಳ ಬಗ್ಗೆ ವಿವಿಧೆಡೆ ಲಭ್ಯವಿರುವ ಮಾಹಿತಿ ಇಲ್ಲಿದೆ…

-ದೇಹಕ್ಕೆ ಯಾವ ಎಷ್ಟು ಪ್ರಮಾಣದಲ್ಲಿ ಪ್ರೋಟೀನ್ ಬೇಕು ನಿಮ್ಮ ತೂಕವನ್ನು ಪೌಂಡ್ಸ್​ ಮೂಲಕ ಕಾಲ್ಕ್ಯೂಲೇಟ್ ಮಾಡಿ ಅಂದರೆ ಒಂದೊಮ್ಮೆ ನಿಮ್ಮ ಕೆಜಿ ನಿಮಗೆ 50 ವರ್ಷ ವಯಸ್ಸಾಗಿದ್ದು ನಿಮ್ಮ ತೂಕ 63 ಕೆಜಿ ಇದ್ದರೆ(140 ಪೌಂಡ್ಸ್) ಅಂತವರಿಗೆ 53ಗ್ರಾಂನಷ್ಟು ಪ್ರೋಟೀನ್​ನ ಅಗತ್ಯವಿದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದ ಪ್ರೋಟೀನ್ ದೇಹಕ್ಕೆ ಸೇರಿದರೆ ಅಡ್ಡಪರಿಣಾಮಗಳು ಉಂಟಾಗುತ್ತವೆ. ಇದು ಜೀವಕಂಟಕವಾಗಬಹುದು.

– ಪ್ರೋಟೀನ್ ಪೌಡರ್​ ಅನ್ನು ಸೋಯಾಬೀನ್, ಅಕ್ಕಿ, ಆಲೂಗಡ್ಡೆ ಇಂದ ತಯಾರಿಸಿರಬಹುದು, ಅದಕ್ಕೆ ಸಕ್ಕರೆ, ಆರ್ಟಿಫಿಷಿಯಲ್ ಫ್ಲೇವರ್, ವಿಟಮಿನ್ ಹಾಗೂ ಮಿನರಲ್ಸ್​ ಬೆರಕೆ ಮಾಡಲಾಗುತ್ತದೆ.

-ಹಾಲಿನಿಂದ ಮಾಡಲ್ಪಡುವ ಪ್ರೋಟೀನ್ ಶೇಕ್ ನಲ್ಲಿ ಹಾಲಿನ ಸಕ್ಕರೆ ಲ್ಯಾಕ್ಟೋಸ್ ಇರುವುದು. ಇದು ಹೊಟ್ಟೆಯ ನೋವಿಗೆ ಕಾರಣವಾಗಬಹುದು. ಲ್ಯಾಕ್ಟೋಸ್ ಸೂಕ್ಷ್ಮತೆ ಇರುವವರಲ್ಲಿ ಇದು ಕಂಡುಬರಬಹುದು. ಇದರಿಂದಾಗಿ ಗ್ಯಾಸ್, ಹೊಟ್ಟೆ ಉಬ್ಬರ, ಭೇದಿ, ಹೊಟ್ಟೆಯಲ್ಲಿ ಭಾರವಾದ ಅನುಭವ ಉಂಟಾಗುವುದು.

-ಅಲರ್ಜಿ ಭೇದಿ, ವಾಂತಿ ಮತ್ತು ನಿರ್ಜಲೀಕರಣ ಉಂಟಾಗಬಹುದು. ಇದು ಪ್ರೋಟೀನ್ ಪಾನೀಯದ ದೊಡ್ಡ ಅಪಾಯ. ಸೋಯಾ, ಹಾಲು ಮತ್ತು ಮೊಟ್ಟೆಯ ಪ್ರೋಟೀನ್ ಶೇಕ್ ನಿಂದಾಗಿ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ.

-ವಿವಿಧ ಅಂಗಗಳಿಗೆ ಹಾನಿ ಅತಿಯಾದ ಪ್ರೋಟೀನ್ ನಿಂದಾಗಿ ಕಿಡ್ನಿ ಮತ್ತು ಯಕೃತ್ ಮೇಲೆ ಪರಿಣಾಮ ಬೀರಬಹುದು. ಈಗಾಗಲೇ ಕಿಡ್ನಿ ಅಥವಾ ಯಕೃತ್ ಸಮಸ್ಯೆ ಇರುವವರಿಗೆ ಇದು ಮಾರಕ. ಇದು ಪ್ರೋಟೀನ್ ಪೌಡರ್​ನ ಹಾನಿಕಾರಕ ಪರಿಣಾಮ ಬೀರುತ್ತದೆ.

ಪ್ರೋಟೀನ್ ಪೌಡರ್ ಬದಲು ಯಾವುದನ್ನು ಬಳಕೆ ಮಾಡಬಹುದು?

ಯೋಗರ್ಟ್​, ಹಾಲು, ತುಪ್ಪ, ಮೀನು, ಮೊಟ್ಟೆ ಹಾಗೂ ಮಾಂಸವನ್ನು ಸೇವಿಸುವುದು ನೈಸರ್ಗಿಕವಾಗಿ ದೇಹದ ಬೆಳವಣಿಗೆಗೆ ಸಹಕಾರಿ. ಅತಿ ವೇಗವಾಗಿ ದಪ್ಪ ಅಥವಾ ಸಣ್ಣಗಾಗುವುದು ಆರೋಗ್ಯಕ್ಕೆ ಮಾರಕ ಎನ್ನುವುದು ಸದಾ ನೆನಪಿನಲ್ಲಿರಲಿ.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 1:05 pm, Tue, 20 September 22