ಕೊರೊನಾ ಸದ್ದಡಗಿತು ಅನ್ನೋ ಹೊತ್ತಲ್ಲೇ ಮತ್ತೆ ಸ್ಫೋಟವಾಗ್ತಿದೆ. ಮೂರಂಕಿಯಲ್ಲಿದ್ದ ಸೋಂಕು ದಿಢೀರನೇ ಸಾವಿರದ ಲೆಕ್ಕದಲ್ಲಿ ದಾಳಿ ಮಾಡ್ತಿದೆ. ಇದೀಗ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೊರೊನಾ ಎರಡನೇ ಅಲೆ ಆರ್ಭಟ ತಡೆಗೆ ನ್ಯೂ ರೂಲ್ಸ್ ಜೊತೆಗೆ ದಂಡದ ಅಸ್ತ್ರ ಬಿಟ್ಟಿದೆ. ಆದ್ರೂ ಕೂಡ ನಮ್ಮ ಜನ ಯಾವುದಕ್ಕೂ ಕ್ಯಾರೇ ಅನ್ನದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ.
ಮಾರ್ಕೆಟ್‌ನಲ್ಲಿ ಡೋಂಟ್‌ಕೇರ್
ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿದ್ದರೂ ಜನರ ನಿರ್ಲಕ್ಷ್ಯ ಮಾತ್ರ ಮುಂದುವರೆದಿದೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಜನರು ಓಡಾಡುತ್ತಿರುವ ದೃಶ್ಯಗಳು ಕಾಣಸಿಗುತ್ತವೆ. ಆರೋಗ್ಯ ಇಲಾಖೆ ಕಠಿಣ ನಿಯಮ ಹೊರಡಿಸಿದ್ರೂ ಜನ ತಲೆ ಕೆಡಿಸಿಕೊಂಡಿಲ್ಲ. ಇನ್ನು ಬಾಗಲಕೋಟೆಯ ತರಕಾರಿ ಮಾರ್ಕೆಟ್, ಹುಬ್ಬಳ್ಳಿಯ ತರಕಾರಿ ಮಾರುಕಟ್ಟೆ, ಚಿತ್ರದುರ್ಗದ ತರಕಾರಿ ಮಾರುಕಟ್ಟೆ, ಗದಗ ತರಕಾರಿ ಮಾರುಕಟ್ಟೆ, ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಸೇರಿದಂತೆ ಮೀನು ಮಾರುಕಟ್ಟೆ, ಕೊಪ್ಪಳದ ತರಕಾರಿ ಮಾರುಕಟ್ಟೆ, ರಾಯಚೂರು ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆ, ಚಾಮರಾಜನಗರದ ಎಪಿಎಂಸಿಗಳಲ್ಲಿ, ವಿಜಯಪುರದ ಬಸ್ ನಿಲ್ದಾಣ, ಮಾರುಕಟ್ಟೆ ಜನನಿಬೀಡ ರಸ್ತೆಗಳಲ್ಲಿ ಇದೇ ದೃಶ್ಯಗಳು ಕಂಡು ಬರುತ್ತಿವೆ. ಸರ್ಕಾರದ ನಿಯಮಗಳನ್ನು ಮೀರಿ ಜನ ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ.
ಇನ್ನು ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ರೂಲ್ಸ್ ಜಾರಿಯಾದ್ರೂ ಬಿಎಂಟಿಸಿಯಿಂದಲೂ ನಿರ್ಲಕ್ಷ್ಯ ಕಾಣುತ್ತಿದೆ. ಬಿಎಂಟಿಸಿ ಬಸ್‌ನಲ್ಲಿ ಮಾಸ್ಕ್ ಹಾಕದೆ ಕೆಲ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೈಹಿಕ ಅಂತರ ನಿಯಮ ಉಲ್ಲಂಘನೆಯಾಗುತ್ತಿದೆ. ಮಜೆಸ್ಟಿಕ್ ಬಸ್ ನಿಲ್ದಾಣದಲ್ಲೂ ದೈಹಿಕ ಅಂತರ ಮಾಯವಾಗಿದೆ. ಬಸ್ ಹತ್ತುವುದಕ್ಕೆ ಏಕಾಏಕಿ ಜನರು ಮುಗಿಬೀಳುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾರ್ಷಲ್‌ಗಳೇ ಇಲ್ಲ.
ಇನ್ನು ಮೈಸೂರಿನಲ್ಲೂ ಇದೇ ಪರಿಸ್ಥಿತಿ ಮರುಕಳಿಸಿದೆ. ಮಾಸ್ಕ ಧರಿಸದೆ ಜನರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಾಸ್ಕ್ ಹಾಕದೆ ಬಹುತೇಕ ಸಾರ್ವಜನಿಕರು ಓಡಾಡುತ್ತಿದ್ದಾರೆ. ಕೆಲವರು ಮಾಸ್ಕ್ ಇದ್ದರು ಸಮರ್ಪಕವಾಗಿ ಧರಿಸಿಲ್ಲ. ಬಸ್ ನಿರ್ವಾಹಕರು ಚಾಲಕರಿಂದಲೂ ನಿರ್ಲಕ್ಷ್ಯವಾಗಿದೆ. ಸರ್ಕಾರದ ದಂಡ ಪ್ರಯೋಗಕ್ಕೂ ಬಹುತೇಕ ಮಂದಿ ತಲೆ ಕೆಡಿಸಿಕೊಂಡಿಲ್ಲ. ಇದೇ ಪದ್ದತಿ ಮುಂದುವರೆದರೆ ಮತ್ತೆ ನಾವು ಹಳೆ ದಿನಗಳಿಗೆ ಮರಳಬೇಕಾದ ಪರಿಸ್ಥಿತಿ ಬರಬಹುದು. ಕಳೆದ ವರ್ಷ ಅನುಭವಿಸಿದ ನರಕ ಮುಂದುವರೆಯಬಹುದು.
ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ನಿಯಮಾವಳಿ: ಮಾಸ್ಕ್ ಹಾಕದಿದ್ದರೆ ₹ 250 ದಂಡ!