ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸವಂತೆ ಸಚಿವರಿಗೆ ಪ್ರಾಧಿಕಾರ ಪತ್ರ

| Updated By: ರಮೇಶ್ ಬಿ. ಜವಳಗೇರಾ

Updated on: Sep 09, 2024 | 9:51 PM

ಬಹುತೇಕ ವೈದ್ಯರು ಬರೆಯುವ ಪ್ರಿಸ್ಕ್ರಿಪ್ಶನ್‌ ಇಂಗ್ಲೀಷ್‌ನಲ್ಲಿದ್ದು ಬಹುತೇಕ ವೈದ್ಯರು ಅಸ್ಪಷ್ಟವಾಗಿ ಬರೆಯುತ್ತಾರೆ. ಅದನ್ನು ಓದಲು ಪರದಾಡಬೇಕಾಗುತ್ತದೆ. ಇದರ ಮಧ್ಯ ಬೆಂಗಳೂರಿನ ವೈದ್ಯರೊಬ್ಬರು ಕನ್ನಡದಲ್ಲಿ ಬರೆದಿರುವ ಔಷಧೀಯ ಚೀಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುಲು ಆದೇಶ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪತ್ರ ಬರೆದಿದ್ದಾರೆ.

ಸರ್ಕಾರಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆದೇಶಿಸವಂತೆ ಸಚಿವರಿಗೆ ಪ್ರಾಧಿಕಾರ ಪತ್ರ
ಡಾ.ಪುರುಷೋತ್ತಮ ಬಿಳಿಮಲೆ, ದಿನೇಶ್ ಗುಂಡೂರಾವ್
Follow us on

ಬೆಂಗಳೂರು, (ಸೆಪ್ಟೆಂಬರ್ 09): ಬೆಂಗಳೂರಿನ ಕೆ ವಿ ಡೆಂಟಲ್‌ ಕ್ಲಿನಿಕ್‌ ಆಸ್ಪತ್ರೆಯ ಹರಿಪ್ರಸಾದ್ ಸಿ ಎಸ್ ಅವರು ಬದಲಾವಣೆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ತಮ್ಮ ಆರೋಗ್ಯ ತಪಾಸಣೆಗೆಂದು ಬಂದ ರೋಗಿಗೆ ಕನ್ನಡದಲ್ಲಿ ಔಷಧ ಚೀಟಿಯನ್ನು ಬರೆಯುವ ಮೂಲಕ ಎಲ್ಲಾ ವೈದ್ಯರಿಗೂ ಮಾದರಿಯಾಗಿದ್ದಾರೆ. ಅಲ್ಲದೇ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವಂತೆ ಆದೇಶಿಸಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.

ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಲು ಶೀಘ್ರ ಆದೇಶ ಜಾರಿ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದು, ಭಾಷೆಯ ಬೆಳವಣಿಗೆಯ ದೃಷ್ಠಿಯಿಂದ ಸರ್ಕಾರಿ ವೈದ್ಯರೆಲ್ಲರೂ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ಕಡ್ಡಾಯ ಆದೇಶ ಮಾಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್​ಗೆ ಇರಲಿದೆ ವಾಲಿಡಿಟಿ: ಹೊಸ ಪ್ರಯೋಗಕ್ಕೆ ಮುಂದಾದ ಆರೋಗ್ಯ ಇಲಾಖೆ

ಪತ್ರದಲ್ಲೇನಿದೆ?

ಅಧುನಿಕ ಕಾಲಘಟ್ಟದಲ್ಲಿ ಭಾಷಾಭಿಮಾನ ಎನ್ನುವುದು ನೇಪಥ್ಯಕ್ಕೆ ಸರಿಯುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಠಿಯಿಂದ ಆರೋಗ್ಯಕರ ಬೆಳವಣಿಗೆ ಆಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಂಸ್ಥಿಕ ಪ್ರಯತ್ನಗಳು ಮಾತ್ರ ನಿರೀಕ್ಷಿತ ಪರಿಣಾಮವನ್ನು ದೊರಕಿಸಿ ಕೊಡುವುದಲ್ಲದೇ ರಾಜ್ಯ ಭಾಷೆಯ ಉಳಿವಿಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ. ಇತ್ತೀಚೆಗೆ ರಾಯಚೂರಿಗೆ ಕಾರ್ಯನಿಮಿತ್ತ ತೆರಳಿದ ಸಂದರ್ಭದಲ್ಲಿ ಜಿಲ್ಲೆಯ ವೈದ್ಯರು ತಮ್ಮ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕೆಂದು ಪ್ರೇರೇಪಿಸಿ ಅಲ್ಲಿನ ಜಿಲ್ಲಾಧಿಕಾರಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ಹೊರಡಿಸಲು ನಿರ್ದೇಶನವನ್ನು ನೀಡಿದ್ದೆ. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿ ನೂರಾರು ವೈದ್ಯರು ಸ್ವಯಂಪ್ರೇರಿತರಾಗಿ ತಾವು ಕನ್ನಡ ಭಾಷೆಯನ್ನು ಉಳಿಸಲು ಔಷಧಿ ಚೀಟಿಗಳನ್ನು ಕನ್ನಡದಲ್ಲೇ ಬರೆಯುವ ಕೆಲಸವನ್ನು ಆರಂಭಿಸುತ್ತೇವೆ ಎಂದು ತಮ್ಮ ಭಾಷಾಭಿಮಾನವನ್ನು ನಮ್ಮಲ್ಲಿ ವ್ಯಕ್ತಪಡಿಸಿದ್ದಾರೆ.

ಹಲವಾರು ಜನ ತಾವು ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ನನ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಾಧಿಕಾರದ ಅಧ್ಯಕ್ಷನಾಗಿ ನನಗೆ ರೋಮಾಂಚನಗೊಳಿಸುವ ಸಂಗತಿಯಾಗಿದೆ. ಈ ಪರಿಣಾಕಾರಿಯಾದ ಮಾನಸಿಕತೆಯ ಮೂಲಕ ಕನ್ನಡ ಭಾಷೆಗೆ ಒಂದು ಮಹತ್ವದ ಹಾದಿ ಇದೀಗ ತೆರೆದುಕೊಂಡಿದೆ ಎಂಬ ಅಭಿಪ್ರಾಯ ನನ್ನದಾಗಿದ್ದು, ಇದು ಸರ್ವವ್ಯಾಪಿಯಾಗಬೇಕಾದ ಅನಿವಾರ್ಯತೆ ಇರುತ್ತದೆ. ರಾಜ್ಯದ ಮೂಲೆಗಳಲ್ಲಿರುವ ಆರೋಗ್ಯ ಕೇಂದ್ರಗಳು ಸೇರಿದಂತೆ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ವೈದ್ಯರುಗಳು ತಾವು ಬರೆಯುವ ಔಷಧಿ ಚೀಟಿಗಳಲ್ಲಿ ಕನ್ನಡ ಬಳಕೆಗೆ ಪ್ರಾಧಾನ್ಯತೆಯನ್ನು ನೀಡಿದಲ್ಲಿ ಕನ್ನಡ ಅಸ್ಮಿತೆಯನ್ನು ಉಳಿಸುವ ಮಹತ್ವದ ಹೆಜ್ಜೆಯಾಗುತ್ತದೆ. ಇದು ಕಡ್ಡಾಯವಾಗದೆ ಹೋದಲ್ಲಿ ಇದರ ಅನುಷ್ಠಾನವೂ ನಿರೀಕ್ಷಿತ ಪ್ರಗತಿಯನ್ನು ಹೊಂದುವುದು ಸಾಧ್ಯವಿರುವುದಿಲ್ಲ.

ಇಲ್ಲಿ ರಾಜ್ಯ ಸರ್ಕಾರ ದೃಢ ನಿಲುವು ತನ್ನದೇ ಪರಿಣಾಮವನ್ನು ಹೊಂದುವ ಕಾರಣ, ತಾವು ಈ ನಿಟ್ಟಿನಲ್ಲಿ ವೈಯಕ್ತಿಕ ಗಮನಹರಿಸಿ ರಾಜ್ಯದ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು ಕಡ್ಡಾಯವಾಗಿ ತಮ್ಮ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಲು ಸರ್ಕಾರದ ಆದೇಶವನ್ನು ಜಾರಿ ಮಾಡಬೇಕಾಗಿ ಈ ಮೂಲಕ ಕೋರುತ್ತೇನೆ. ಕನ್ನಡಪ್ರಿಯ ವೈದ್ಯರುಗಳನ್ನು, ಅವರ ಭಾಷಾ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅವರುಗಳನ್ನು ತಾಲಾಕು, ಜಿಲ್ಲೆ, ರಾಜ್ಯ ಹಂತಗಳಲ್ಲಿ ಅಭಿನಂಧಿಸುವ ಕೆಲಸವಾದರೆ ಮತ್ತಷ್ಟು ಉತಮ್ಮ ಎಂಬ ಅಂಶವನ್ನು ಸಹ ನಿಮ್ಮಲ್ಲಿ ಹಂಚಿಕೊಳ್ಳ ಬಯಸುತ್ತೇನೆ ಎಂದು  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಡಾ.ಪುರುಷೋತ್ತಮ ಬಿಳಿಮಲೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.