
ರಾಯಚೂರು, ಜೂನ್ 30: ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (University of Agricultural Sciences Raichur) ನಡೆದ 14ನೇ ಘಟಿಕೋತ್ಸವದಲ್ಲಿ ಒಟ್ಟು 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ಸ್ನಾತಕ ಪದವೀಧರರಿಗೆ 27 ಚಿನ್ನದ ಪದಕಗಳು ಹಾಗೂ ಇಬ್ಬರು ಸ್ನಾತಕ ಪದವೀಧರರಿಗೆ ನಗದು ಬಹುಮಾನ, ಸ್ನಾತಕೋತ್ತರ ಪದವೀಧರರಿಗೆ 17 ಚಿನ್ನದ ಪದಕಗಳು ಹಾಗೂ 15 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ.
ಸ್ನಾತಕ ಕೃಷಿ ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿ ಪುಟ್ಟರಾಜು ಪೊಲೀಸ್ ಪಾಟೀಲ್ ಹಾಗೂ ಭೀಮರಾಯನಗುಡಿಯ ಬಿಎಸ್‌ಸಿ ಕಾಲೇಜಿನ ಸಾಗರ್ ಅವರು ತಲಾ ಆರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಚಿನ್ನದ ಪದಕ ಪಡೆದ ವಿದ್ಯಾರ್ಥಿ ಪುಟ್ಟರಾಜು ಅವರದ್ದು ಕೃಷಿ ಮನೆತನವಾಗಿದೆ. ಪುಟ್ಟರಾಜು ಅವರ ತಂದೆ ರೈತರಾಗಿದ್ದಾರೆ. ಹೀಗಾಗಿ, ಕೃಷಿಯಲ್ಲೇ ಸಾಧನೆ ಮಾಡಬೇಕೆಂದು ಛಲತೊಟ್ಟಿದ್ದ ಪುಟ್ಟರಾಜು ಅವರು ಈಗ ಆರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಪದಕ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಪುಟ್ಟರಾಜು, ನಮ್ಮ ತಂದೆ ರೈತ, ನಮ್ಮ ತಾಯಿ ಗೃಹಿಣಿ. ನಮಗೆ ಒಂದೂವರೆ ಎಕರೆ ಜಮೀನು ಇದೆ. ಹೈನುಗಾರಿಕೆಯಿಂದ ನಮ್ಮ ಮನೆ ನಡೆಯುತ್ತಿದೆ. ಈಗ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ ಎಂದರು.
ರಾಯಚೂರಿನ ಬಿಎಸ್‌ಸಿ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿಯವರು ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಗಾಯತ್ರಿಯವರು ಮೂಲತಃ ಕೊಪ್ಪಳದವರು. ಗಾಯಿತ್ರಿಯವರ ತಂದೆ ನಿಧನರಾಗಿದ್ದಾರೆ. ತಂದೆ ಸಾವಿನ ಬಳಿಕ ಗಾಯತ್ರಿಯವರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ.
ಆದರೆ, ಗಾಯತ್ರಿಯವರ ಓದಿಗೆ ಯಾವುದೇ ತೊಂದರೆಯಾಗದಂತೆ ಅವರ ತಾಯಿ ಪ್ರಮಿಳಾ ಕುಮಾರಿ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ಗ್ರಾಮದಲ್ಲಿ ಬೀದಿ ಬದಿ ಹೋಟೆಲ್ ನಡೆಸುತ್ತಾ, ಮಗಳನ್ನು ಪದವಿಧರೆಯನ್ನಾಗಿ ಮಾಡಿದ್ದಾರೆ.
ಘಟಿಕೋತ್ಸವದಲ್ಲಿ ಪ್ರಗತಿಪರ ರೈತರೊಬ್ಬರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ರೈತ ದೇವೇಂದ್ರಪ್ಪ ಬಳಟಗಿ ಎಂಬುವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಈ ಮೂಲಕ ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷ ವಿಶೇಷ ಸಾಧಕರನ್ನು ಗೌರವಿಸುತ್ತಾ ಬರುತ್ತಿರುವುದು ಸಂತಸದ ವಿಷಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ