
ರಾಯಚೂರು, ಜುಲೈ 28: ರಾಯಚೂರು (Raichur) ಜಿಲ್ಲೆಯ ಮಸ್ಕಿಯಲ್ಲಿ (Maski) ಇತ್ತೀಚಿಗೆ ನಡೆದ ಉತ್ಖನನದಲ್ಲಿ 4 ಸಾವಿರ ವರ್ಷಗಳ ಹಿಂದೆಯೇ ಇಲ್ಲಿ ಜನವಸತಿ ಇತ್ತು ಎಂಬುವುದಕ್ಕೆ ಹಲವು ಸಾಕ್ಷಾಧಾರಗಳು ದೊರೆತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹರಪ್ಪ ಮತ್ತು ಮೊಹೆಂಜೋದಾರೋ ನಾಗರಿಕತೆಗಳು ಕ್ರಿ.ಪೂ. 3300 ರಿಂದ 1300 ರವರೆಗೆ ಅಸ್ತಿತ್ವದಲ್ಲಿತ್ತು ಎಂದು ಇತಿಹಾಸದ ಪುಟಗಳಲ್ಲಿ ಅಡಕವಾಗಿದೆ. ಈ ಕಾಲಘಟ್ಟದಲ್ಲೇ ಮಸ್ಕಿಯಲ್ಲೂ ಕೂಡ ಜನವಸತಿ ಇತ್ತು ಎಂಬುವುದು ಉತ್ಖನನ ಬಳಿಕ ಗೊತ್ತಾಗಿದೆ.
ಈ ಕಾರಣದಿಂದ ಮಸ್ಕಿ ಪಟ್ಟಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಬಾಲ ಆಂಜನೇಯನ ದೇವಸ್ಥಾನಗಳ ಬೆಟ್ಟದ ಪ್ರದೇಶದಲ್ಲಿ ಉತ್ಖನನ ನಡೆಯುತ್ತಿದೆ. ಈ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಬೆಟ್ಟದಲ್ಲಿ ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ.
ಮಲ್ಲಿಕಾರ್ಜುನ ದೇವಸ್ಥಾನದ ಕಲ್ಲುಗಳ ಮೇಲೆ ನೂರಾರು ವರ್ಷಗಳ ಹಿಂದೆ ಕೆತ್ತನೆ ಮಾಡಿದ ವಿವಿಧ ಕಲಾಕೃತಿಗಳಿವೆ. ಕರ್ನಾಟದ ರಾಜ್ಯದ ಗಂಡಭೇರುಂಡ ಲಾಂಛನ ಕೂಡ ದೇವಸ್ಥಾನದ ಕಲ್ಲುಗಳ ಮೇಲೆ ಕೆತ್ತಲಾಗಿದೆ. ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT)ನ ಲಾಂಛನ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಮೇಲೆ ಕೆತ್ತಲಾಗಿರುವ ಮೂರು ಮುಖದ ಹಂಸ ಪಕ್ಷಿಯನ್ನು ಹೋಲುತ್ತದೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮಸ್ಕಿಯಲ್ಲಿ ಕೆತ್ತನೆ ಮಾಡಲಾಗಿರುವ ಈ ಮೂರು ಮುಖದ ಹಂಸ ಪಕ್ಷಿಯನ್ನ NCERT ತನ್ನ ಲಾಂಛನವನ್ನಾಗಿ ಮಾಡಿಕೊಂಡಿದೆ. ಇದರ ಅರ್ಥ ಶ್ರದ್ಧೆ, ಶಿಕ್ಷಣ ಹಾಗೂ ಆರ್ಥಿಕತೆ.
ರಾಜ್ಯದ ವಿವಿಧಡೆ ಪತ್ತೆಯಾಗಿರುವ ಗಂಡಭೇರುಂಡ ಕೆತ್ತನೆಯಲ್ಲಿ ಬರೀ ಎರಡು ಆನೆಗಳಿವೆ. ಆದರೆ, ಮಸ್ಕಿ ಮಲ್ಲಿಕಾರ್ಜುನ ದೇವಸ್ಥಾನದ ಒಳಗಿರುವ ಗಂಡಭೇರುಂಡ ಕೆತ್ತನೆಯಲ್ಲಿ ನಾಲ್ಕು ಆನೆಗಳು ಇರುವುದು ವಿಶೇಷವಾಗಿದೆ. ಗಂಡಭೇರುಂಡ ಕರ್ನಾಟಕ ರಾಜ್ಯ ಲಾಂಛನವಾಗಿದೆ. ಮೈಸೂರು ಒಡೆಯರು ಕೂಡ ಗಂಡಭೇರುಂಡವನ್ನು ರಾಜ್ಯ ಲಾಂಛನವಾಗಿಸಿಕೊಂಡಿದ್ದರು.
ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸುಮಾರು 1400 ಸಾವಿರ ವರ್ಷಗಳಷ್ಟು ಇತಿಹಾಸವಿದೆ. ಇದು ಜಗದೇಕ ಮಲ್ಲರ ಕಾಲದಲ್ಲಿ ನಿರ್ಮಾಣವಾಗಿತ್ತು. ಬಳಿಕ ಜಯಸಿಂಹರು ದೇವಸ್ಥಾನವನ್ನ ಜೀರ್ಣೋದ್ಧಾರ ಮಾಡಿದರು. ಎರಡು ಕಡೆ ಉಬ್ಬು ಶೀಲ್ಪಗಳು, ಒಳಗಡೆ ಗಂಡಭೇರುಂಡ, ಬೇಡರ ಕಣ್ಣಪ್ಪ, ಪೂರ್ಣ ಕುಂಬ, ಬಸವ ಚಿತ್ರ, ಆನೆ ಮತ್ತು ಎತ್ತು ದೇಹ ಪ್ರಸ್ತುತ ಪಡಿಸುವ ಉಬ್ಬು ಕೆತ್ತನೆಗಳು ದೇವಸ್ಥಾನದಲ್ಲಿವೆ.
ಅಮೆರಿಕ, ಕೆನಡಾ ಹಾಗೂ ಭಾರತದ 20 ಸಂಶೋಧಕರ ತಂಡ ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಾಲ ಆಂಜನೇಯ ದೇವಸ್ಥಾನದ ಬೆಟ್ಟ ಹಾಗೂ ಸುತ್ತಲೂ ಉತ್ಖನನ ನಡೆಸಿದೆ. ವಿವಿಧ ವೈಜ್ಞಾನಿಕ ಮಾರ್ಗಗಳ ಮೂಲಕ ನಡೆದ ಉತ್ಖನನ, ಸಂಶೋಧನೆಯಲ್ಲಿ 4 ಸಾವಿರ ವರ್ಷಗಳ ಹಳೆಯ ಪೂರ್ವ ಇತಿಹಾಸದ ಬಗ್ಗೆ ಸಾಕ್ಷಗಳು, ಪುರಾವೆಗಳು ದೊರೆತಿವೆ.
ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಪೀಟರ್ ಜಿ. ಜೋಹಾನ್ಸನ್ ಹಾಗೂ ದೆಹಲಿ ಮೂಲದ ವಿಶ್ವವಿದ್ಯಾಲಯದ ಹೇಮಂತ್ ಕಡಾಂಬಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ತಂಡ, ಈ ಭಾಗದಲ್ಲಿ ಉತ್ಪನನ ಮಾಡಿ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪಳಿಯುಳಿಕೆಗಳನ್ನು ಸಂಗ್ರಹಿಸಿದೆ. ಒಟ್ಟು 271 ಸ್ಥಳದಲ್ಲಿ ಹಂತಹಂತವಾಗಿ ಒಂದೊಂದೇ ಕಡೆಗಳಲ್ಲಿ ಈ ಉತ್ಖನನ ಕಾರ್ಯ ನಡೆಯುತ್ತಿದೆ.
2010 ರಿಂದಲೇ ಮಸ್ಕಿಯಲ್ಲಿ ಪೂರ್ವ ಇತಿಹಾಸದ ಬಗೆಗಿನ ಸಂಶೋಧನೆಗಳು ನಡೆಯುತ್ತಿವೆ. ಅಮೆರಿಕಾದರ ಸ್ಟ್ಯಾನ್ ಫೋರ್ಡ್ ವಿಶ್ವ ವಿದ್ಯಾಲಯದ ಮಾನವ ಶಾಸ್ತ್ರ ವಿಭಾಗ ಹಾಗೂ ಕೆನಡಾದ ಮೆಕ್ಗಿನ್ ವಿವಿಯ ಮಾನವಶಾಸ್ತ್ರ ವಿಭಾಗದಿಂದ ರಾಯಚೂರಿನ ಮಸ್ಕಿಯಲ್ಲಿ ಸಂಶೋಧನೆಗಳು ನಡೀತಿವೆ. 2010 ರಿಂದ 2025 ವರೆಗೆ ಕೇಂದ್ರದ ಪುರಾತತ್ವ ಇಲಾಖೆಯ ಅನುಮತಿ ಪಡೆದು ಇಲ್ಲಿ ಉತ್ಖನನ ಮಾಡಲಾಗುತ್ತಿದೆ.
ಈ ಭಾಗದಲ್ಲಿನ ಕಲಾಕೃತಿಗಳ ಚದುರುವಿಕೆಗಳು, ಧಾನ್ಯದ ಕೇಂದ್ರಗಳು, ಸ್ಮಶಾನಗಳು, ಕಬ್ಬಿಣ-ಕೆಲಸ ಮಾಡುವ ಸ್ಥಳಗಳು, ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಪ್ರದೇಶ, ಶಿಲಾ-ಕಲಾ ಫಲಕಗಳು, ಆಕ್ರಮಿತ ಶಿಲಾ ಆಶ್ರಯಗಳು, ದೇವಾಲಯಗಳು ಸೇರಿ ಒಟ್ಟು 271 ಸ್ಥಳಗಳಲ್ಲಿ ಉತ್ಖನನವನ್ನ ಹಂತಹಂತವಾಗಿ ಮಾಡಲಾಗುತ್ತಿದೆ.
ನವಶಿಲಾಯುಗದ ಅಂತ್ಯದ ಅವಧಿಯಲ್ಲಿ ದಕ್ಷಿಣ ಭಾರತದ ಕೃಷಿ ಪಶುಪಾಲನಾ ಚಟುವಟಿಕೆಗಳು, ಶವಸಂಸ್ಕಾರ ಪದ್ಧತಿಗಳ ಮೂಲಕ ಸಾಮಾಜಿಕ ವ್ಯತ್ಯಾಸಗಳ ಕುರುಹುಗಳು ಇಲ್ಲಿ ಸಿಕ್ಕಿವೆ. 11 ರಿಂದ 14ನೇ ಶತಮಾನದಲ್ಲಿ ಇಲ್ಲಿ ಸ್ಥಿತಿ ಗತಿಯ ಹೇಗಿತ್ತು ಎಂಬುವುದರ ಬಗ್ಗೆ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಅಂದಿನ ಸಾಮಾನ್ಯ ಜನರ ಜೀವನ ಮಟ್ಟ, ಆಹಾರ ಪದ್ಧತಿ ಹೇಗಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಅವರು ಬಳಸುತ್ತಿದ್ದ ಪದಾರ್ಥಗಳು, ವಸ್ತುಗಳು, ಮನೆಯ ಆಕಾರ, ಮಣ್ಣು ಮತ್ತು ಕಲ್ಲಿನಿಂದ ಕಟ್ಟಿದ ಮನೆಗಳು, ಮಣ್ಣಿನ ಪಾತ್ರೆಗಳು ಉತ್ಖನನದ ವೇಳೆ ಪತ್ತೆಯಾಗಿವೆ. ಮಡಿಕೆಯಲ್ಲಿಟ್ಟಿದ್ದ ದವಸ-ಧಾನ್ಯಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಈ ಪ್ರದೇಶದಲ್ಲಿ ಜನವಸತಿ ಇತ್ತು ಅನ್ನೋದಕ್ಕೆ ಸಾಕ್ಷಿಯಾಗಿದೆ.
ಈ ಸಂಶೋಧನೆಯ ಮೂಲ ಉದ್ದೇಶವೇ ಆ ಕಾಲದ ಜನಸಾಮಾನ್ಯರ ಅಂದಿನ ವ್ಯವಸ್ಥೆ, ಅವರ ಸಂಸ್ಕೃತಿ, ದಿನ ನಿತ್ಯದ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದಾಗಿದೆ. ಉತ್ಖನನದ ಮೇಲ್ಮೈಯಲ್ಲಿ ಸಿಗುವ ಅವಶೇಷಗಳು ಇತ್ತೀಚಿನವು. ಆಳಕ್ಕೆ ಹೋದಂತೆಲ್ಲ ಸಿಕ್ಕಿರುವ ಕುರುಹುಗಳೆಲ್ಲ ನಾಲ್ಕು ಸಾವಿರ ವರ್ಷಗಳ ಹಿಂದೆ ಅನ್ನೋದು ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Mon, 28 July 25