ತಡರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಗೆ KSRTC ಬಸ್​ನಲ್ಲಿ ಕಂಡಕ್ಟರ್​ನಿಂದ ಲೈಂಗಿಕ ಕಿರುಕುಳ

| Updated By: ಆಯೇಷಾ ಬಾನು

Updated on: Mar 12, 2024 | 9:14 AM

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವುದು ಹೆಚ್ಚಾಗಿದೆ. ಆದರೆ ರಾಯಚೂರಿನಲ್ಲಿ ನಡೆದಿರುವ ಘಟನೆ ಮಹಿಳೆಯರು ತಡ ರಾತ್ರಿ ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸಲೂ ಭಯಪಡುವಂತಾಗಿದೆ. ರಾತ್ರಿ ರಾಯಚೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ತಡರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಗೆ KSRTC ಬಸ್​ನಲ್ಲಿ ಕಂಡಕ್ಟರ್​ನಿಂದ ಲೈಂಗಿಕ ಕಿರುಕುಳ
ಸಾಂದರ್ಭಿಕ ಚಿತ್ರ
Follow us on

ರಾಯಚೂರು, ಮಾರ್ಚ್​.12; ಸರ್ಕಾರಿ ಬಸ್​ನಲ್ಲಿ ತಡ ರಾತ್ರಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಂಡಕ್ಟರ್ ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರಾಯಚೂರಿನಿಂದ ಬೆಂಗಳೂರಿಗೆ (Raichur To Bengaluru Bus) ಪ್ರಯಾಣಿಸುವಾಗ ಕಂಡಕ್ಟರ್ ತನ್ನ ಸೊಂಟ ಮುಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಕಂಡಕ್ಟರ್ ವಿರುದ್ಧ ರಾಯಚೂರು ವಿಭಾಗದ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಕಂಡಕ್ಟರ್ ಆರೋಪವನ್ನು ತಳ್ಳಿ ಹಾಕಿದ್ದಾನೆ.

ಫೆಬ್ರವರಿ 18ರ ರಾತ್ರಿ ಕೆಎ-36,ಎಫ್-1532 ನಂಬರ್​ನ ಬಸ್​ನಲ್ಲಿ ಮಹಿಳೆಯೋರ್ವರು ರಾಯಚೂರು ಟು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತಡ ರಾತ್ರಿ ಬಸ್​ ಒಳಗಿನ ಲೈಟ್ ಆಫ್ ಆದಾಗ ರಾಯಚೂರು ನಗರ ಘಟಕದ ಕಂಡಕ್ಟರ್ ಲಕ್ಷ್ಮಿಕಾಂತ್ ರೆಡ್ಡಿ ಮಹಿಳೆಯ ಖಾಸಗಿ ಅಂಗಾಂಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತ ಮಹಿಳೆ ಡ್ರೈವರ್ ಸೀಟ್ ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡ್ತಿದ್ದರು. ಡ್ರೈವರ್ ಮಲಗೋಕೆ ಇರುವ ಸೀಟ್​ನಲ್ಲಿ ಕಂಡಕ್ಟರ್ ಮಲಗಿದ್ದ. ಪಕ್ಕದಲ್ಲಿದ್ದ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದ. ಫ್ರೀ ಟಿಕೆಟ್ ಹರಿದು ತನ್ನ ಜೇಬ್​ನಲ್ಲಿ ಇಟ್ಟುಕೊಂಡು ಟಿಕೆಟ್ ಬೇಕಾದ್ರೆ ಲೈಂಗಿಕವಾಗಿ ಸಹಕರಿಸು, ಇಲ್ಲ ಫೈನ್ ಬೀಳುತ್ತೆ ಎಂದು ಹೇಳಿ ಪಟ್ಟು ಹಿಡಿದಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಮಗಳಿಗೆ ಬಾಲ್ಯವಿವಾಹ ಬೇಡ ಅಂದಿದ್ದಕ್ಕೆ ಪತ್ನಿ ಕಾಲು ಮುರಿದ ಪತಿ, ಮಹಿಳೆ ಆಸ್ಪತ್ರೆಗೆ ದಾಖಲು

ನನ್ನ ಕಡೆ ತಿರುಗಿ ಮಲಕೊಂಡು ನನ್ನ ಸೊಂಟಕ್ಕೆ ಕೈಹಾಕಿದ್ದ. ನಾನು ಹಾರ್ಟ್ ಪೇಶೆಂಟ್, ಹುಷಾರ್ ಇಲ್ಲ ಕಿರುಕುಳ ಕೊಡಬೇಡಿ ಅಂದ್ರು ಬಿಡಲಿಲ್ಲ. ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆ ವರೆಗೂ ಕಿರುಕುಳ ಕೊಟ್ಟ. ಕೂಡಲೇ ಕಂಡಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಟಿವಿ9 ಎದುರು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಇನ್ನು ಈ ಆರೋಪದ ಬಗ್ಗೆ ಟಿವಿ9ಗೆ ಕಂಡಕ್ಟರ್ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟನೆ ನೀಡಿದ್ದು ಆ ದಿನ ಬಸ್ ರಷ್ ಇತ್ತು. ನಾನು ಯಾರ ಜೊತೆಯೂ ಈ ರೀತಿ ವರ್ತಿಸಿಲ್ಲ. ಇಲಾಖೆಯಲ್ಲಿ ನನಗೆ ಆಗದೇ ಇರೋರು, ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ