ರಫೇಲ್ ಯುದ್ಧ ವಿಮಾನ, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ರಾಯಚೂರಿನಲ್ಲಿ ವ್ಯಕ್ತಿಯ ಬಂಧನ
ರಾಯಚೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಫೇಲ್ ಯುದ್ಧವಿಮಾನದ ಬಗ್ಗೆ ಅವಹೇಳನಕಾರಿ ಸಂದೇಶ ಪ್ರಕಟಿಸಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ತುರ್ವಿಹಾಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.

ರಾಯಚೂರು, ಮೇ 15: ಭಾರತ ಮತ್ತು ಪಾಕಿಸ್ತಾನದ (India Pakistan War) ನಡುವೆ ಉದ್ವಿಗ್ನ ಪರಿಸ್ಥಿತಿ ಹಾಗೂ ಸೇನಾ ಸೆಣಸಾಟ ನಡೆದ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ಪಾಕಿಸ್ತಾನ ಪರ ಘೋಷಣೆ ಕೂಗುವುದು, ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸುವಂಥ ಪ್ರತ್ಯಗಳು ಹೆಚ್ಚಾಗತೊಡಗಿವೆ. ಇದೀಗ ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಫೇಲ್ ಯುದ್ಧವಿಮಾನ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪೊಲೀಸರು ಆರೋಪಿ ಅಜ್ಮೀರ್‌ನನ್ನು (37) ವಶಕ್ಕೆ ಪಡೆದು ವಿಚಾರ ನಡೆಸಿದ್ದಾರೆ.
ಚಕ್ಕಡಿ ಮೇಲೆ ಅಳುತ್ತಾ ಕುಳಿತುಕೊಂಡಿರುವ ಪ್ರಧಾನಿ ಮೋದಿ, ಅದರ ಮೇಲೆ ರಫೇಲ್ ಯುದ್ಧ ವಿಮಾನವನ್ನು ಸಾಗಿಸುತ್ತಿರುವ ಚಿತ್ರವುಳ್ಳ ಪೋಸ್ಟ್ ಅನ್ನು ಅಜ್ಮೀರ್ ಪ್ರಕಟಿಸಿದ್ದ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿರುವ ತುರ್ವಿಹಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಧರ್ಮ ಹಾಗೂ ಜನಾಂಗಗಳ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಬುಧವಾರವಷ್ಟೇ ಯಾದಗಿರಿಯಲ್ಲಿ ಜಾಫರ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಅದಾದ ಒಂದು ದಿನದಲ್ಲಿ ರಾಯಚೂರಿನಲ್ಲಿ ಅಂಥದ್ದೇ ಕೃತ್ಯ ಬೆಳಕಿಗೆ ಬಂದಿದೆ.
ಕಲ್ಮಾ ಪಠಣಕ್ಕೆ ಸಬಂಧಿಸಿದ ಬರಹದ್ದು ಎನ್ನಲಾದ ಕರಪತ್ರಗಳನ್ನು ಕೆಲವರು ಕಾಲಿನಿಂದ ಒದೆಯುತ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ, ‘ಕಲ್ಮಾಗೆ ಅವಮಾನ ಮಾಡಿದರೆ ನಾನು ಜೀವ ಕೊಡುವುದಕ್ಕೂ ಸಿದ್ಧನಿದ್ದೇನೆ. ಜೀವ ತೆಗೆಯಲೂ ಸಿದ್ಧನಿದ್ದೇನೆ’ ಎಂದು ಪೋಸ್ಟ್ ಮಾಡಿದ್ದ. ‘ನಮ್ಮವರೇ ಆದರೇನು, ಬೇರೆಯವರು ಆದರೇನು, ಜಗತ್ತಿನಲ್ಲಿ ಬೇರೆ ಯಾರ ಜೊತೆಗೆ ಬೇಕಾದರೂ ಪ್ರತೀಕಾರ ತೆಗೆದುಕೊಳ್ಳಿ. ಆದರೆ ಕಲ್ಮಾ ಜೊತೆ ಅಲ್ಲ. ಕಲ್ಮಾಗೆ ಅವಮಾನ ಮಾಡಿದರೆ ಜೀವ ತೆಗೆಯಲು ಸಿದ್ಧನಿದ್ದೇನೆ’ ಎಂದು ಆರೋಪಿ ವಿಡಿಯೋದಲ್ಲಿ ಹೇಳಿದ್ದ. ತಕ್ಷಣವೇ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದರು.
ಕರ್ನಾಟಕದಲ್ಲಿ ಹೆಚ್ಚುತ್ತಿದೆ ಕೋಮು ಅಸಹಿಷ್ಣುತೆ
ಕರ್ನಾಟಕದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ, ಧರ್ಮಗಳ ನಡುವೆ ದ್ವೇಷ ಹುಟ್ಟಿಸುವಂತಹ ಪೋಸ್ಟ್ ಮಾಡಿದ ಹಾಗೂ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರನೇ ಪ್ರಕರಣ ಇದಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ ಎಂಬ ವಿಡಿಯೋ ವೈರಲ್: ಬೆಂಗಳೂರಿನಲ್ಲಿ ಯುವಕನ ಬಂಧನ
- ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ: ಛತ್ತೀಸ್‌ಗಢ ಮೂಲದ 26 ವರ್ಷದ ಶುಭಾಂಶು ಶುಕ್ಲಾ ಬಂಧನ.
- ಧರ್ಮ, ಜನಾಂಗದ ನಡುವೆ ದ್ವೇಷ ಹಬ್ಬಿಸುವ ವಿಡಿಯೋ ಪೋಸ್ಟ್ ಮಾಡಿದ ಆರೋಪದಲ್ಲಿ ಯಾದಗಿರಿ ನಿವಾಸಿ ಜಾಫರ್ ಖಾನ್ ಬಂಧನ.
- ಇನ್ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ದಿಕ್ಕಾರ ಆಪರೇಷನ್ ಸಿಂದೂರ್” ಎಂಬ ಪೋಸ್ಟ್ ಹಾಕಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿಯ ಬಂಧನ.
- ಕಾರ್ಕಳ ತಾಲೂಕಿನ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ “ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”, “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” ಎಂದು ಬರೆದಿದ್ದ ವಿದ್ಯಾರ್ಥಿನಿ ಪೊಲೀಸ್ ವಶಕ್ಕೆ.
- ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ ಎಂಬ ವಿಡಿಯೋ ವೈರಲ್ ಮಾಡಿದ್ದ ಯುವಕ ಬೆಂಗಳೂರಿನಲ್ಲಿ ಅರೆಸ್ಟ್.
- ಈಗ ರಾಯಚೂರಿನಲ್ಲಿ ಪ್ರಧಾನಿ ಮೋದಿ ಹಾಗೂ ರಫೇಲ್ ಕುರಿತ ಅವಹೇಳನಕಾರಿ ಸಂದೇಶ ಪ್ರಕಟಿಸಿದ ಆರೋಪದಲ್ಲಿ ವ್ಯಕ್ತಿಯ ಬಂಧನವಾಗಿರುವುದು ಇತ್ತೀಚಿನ ದಿನಗಳಲ್ಲಿ ವರದಿಯಾದ ಆರನೇ ಪ್ರಕರಣವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Thu, 15 May 25







