Raichur News: ನಾನ್ ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ; ಸಾರಿಗೆ ಬಸ್ ಕಂಡೆಕ್ಟರ್ ಜೊತೆ ಅಜ್ಜಿ ಕಿರಿಕ್

200 ಯುನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಹಿನ್ನೆಲೆ ಬಿಲ್ ಕಟ್ಟಲು ಜನರು ನಿರಾಕರಿಸುತ್ತಿರುವ ನಡುವೆ ಇದೀಗ ಸರ್ಕಾರಿ ಬಸ್​ನಲ್ಲೂ ಕಿರಿಕ್ ಶುರವಾಗಿದೆ. ಉಚಿತ ಪ್ರಯಾಣದ ಗ್ಯಾರಂಟಿ ಹಿನ್ನೆಲೆ ವೃದ್ಧೆ ಬಸ್ ನಿರ್ವಾಹಕನ ಜೊತೆ ಕಿರಿಕ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.

Follow us
Rakesh Nayak Manchi
|

Updated on: May 23, 2023 | 6:00 PM

ರಾಯಚೂರು: 200 ಯುನಿಟ್ ಉಚಿತ ವಿದ್ಯುತ್ ಗ್ಯಾರಂಟಿ (Free electricity guarantee) ಹಿನ್ನೆಲೆ ಬಿಲ್ ಕಟ್ಟಲು ಜನರು ನಿರಾಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ (Viral Video) ಆಗಲು ಆರಂಭವಾಗಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ನೀಡಿತ್ತು. ಈ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣವೂ (Free travel for women) ಒಂದು. ನಮ್ಮ ಸರ್ಕಾರ ಬಂದ ನಂತರ ಮಹಿಳೆಯರು ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಹೇಳಿದ ಹಿನ್ನೆಲೆ ವೃದ್ಧೆಯೊಬ್ಬರು ಸರ್ಕಾರಿ ಬಸ್​ನಲ್ಲಿ ಟಿಕೆಟ್​ಗೆ ಹಣ ಕೊಡಲ್ಲ ಎಂದು ಕಿರಿಕ್ ಮಾಡಿಕೊಂಡಿದ್ದಾರೆ.

ಸರ್ಕಾರಿ ಬಸ್​ನಲ್ಲಿ ವಿಂಡೋ ಪಕ್ಕ ಕುಳಿತಿದ್ದ ವೃದ್ಧೆಯೊಬ್ಬರಿಗೆ ನಿರ್ವಾಹಕರು ಟಿಕೆಟ್ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಆದರೆ ಇದನ್ನು ವೃದ್ಧೆ ನಿರಾಕರಿಸಿದ್ದಾರೆ. ಒಂದು ಕಡೆಯಲ್ಲಿ ಕಂಡೆಕ್ಟರ್, ನಮಗೆ ಆದೇಶ ಬಂದಲ್ಲಿ, ಆದೇಶ ಬಂದನ ನಂತರ ಉಚಿತವಾಗಿ ಪ್ರಯಾಣಿಸಿ, ಈಗ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರೆ, ಇದನ್ನು ನಿರಾರಿಸಿದ ವೃದ್ಧೆ ತಾನು ಯಾವುದೇ ಕಾರಣಕ್ಕೂ ಟಿಕೆಟ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವುದನ್ನು ವೈರಲ್ ವಿಡಿಯೋದಲ್ಲಿ ಕೇಳಬಹುದು.

ಇದನ್ನೂ ಓದಿ: ಕಾಂಗ್ರೆಸ್​​ 200 ಯುನಿಟ್ ಉಚಿತ ವಿದ್ಯುತ್ ಪ್ರಣಾಳಿಕೆ; ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಆವಾಜ್, ವಿಡಿಯೋ ನೋಡಿ

ಮಸ್ಕಿಯಿಂದ ಸಿಂಧನೂರಿಗೆ ಹೋಗುವ ಬಸ್​ನಲ್ಲಿ ನಡೆದ ಘಟನೆ ಇದಾಗಿದ್ದು, “ನಾನ್ ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ. ಆದೇಶ ಮಾಡ್ಯಾರಂತ ನಮಗೆಲ್ಲ ಹೇಳ್ಯಾರ. ಮಸ್ಕಿ ಶಾಸಕ ತುರುವಿಹಾಳ ಬಸನಗೌಡ ಟಿಕೆಟ್ ಕೊಡಬ್ಯಾಡ ಅಂದಾನ. ಟಿಕೆಟ್ ಕೊಡಲ್ಲ ಬೇಕಾದರೆ ಬಸ್​ನಿಂದ ಇಳಿಸು. ನಾನ್ ಗೆದ್ದವನ ಕೇಳ್ತಿನಿ. ನೀ ಫ್ರೀ ಅಂದ್ರಿ. ಬಸ್​ನಲ್ಲಿ ನಡುವೆ ಇಳಿಸಿದ್ರೆ, ನಾವು ಏನ್ ಅಡವಿ ಹೆಣ ಆಗಬೇಕಾ ಅಂತ ಕೇಳ್ತಿನಿ. ಬಿಲ್ ಇಲ್ಲ, ಬಸ್​ಗೆ ರೊಕ್ಕ ಇಲ್ಲ ಅಂದ್ರು, ಅದ್ಕ್ ವೋಟ್ ಹಾಕಿದ್ದೀನಿ” ಅಂತ ಅಜ್ಜಿ ನೇರಾನೇರವಾಗಿ ನಿರ್ವಾಹಕನಿಗೆ ಹೇಳಿದ್ದಾರೆ.

ಅಜ್ಜಿಯನ್ನ ಮನವೊಲಿಸಲು ನಿರ್ವಾಹಕ ಹೈರಾಣಾಗಿದ್ದಾರೆ. ಆದೇಶ ಬಂದಿಲ್ಲ ಬಂದ ನಂತರ ಉಚಿತವಾಗಿ ಪ್ರಯಾಣಿಸುವಂತೆ ಸಾರಿಸಾರಿ ಹೇಳಿದ ನಂತರ ಅಜ್ಜಿ ಕೊನೆಗೆ ಹಣಕೊಟ್ಟು ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಸದ್ಯ ಮಹಿಳೆ ನಿರ್ವಾಹಕ ನಡುವಿನ ಸಂಭಾಷಣೆ ವಿಡಿಯೋ ವೈರಲ್ ಆಗುತ್ತಿದೆ.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಜನರಿಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣ ಸೇರಿದಂತೆ ಒಟ್ಟು ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಯಾವಾಗ ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂತೋ ಅಂದಿನಿಂದಲೇ ಕೆಲವು ಕಡೆಗಳಲ್ಲಿ ಜನರು ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕಲು ಆರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಅಂತ ಹೇಳಿದ್ದಾರೆ, ಹೀಗಾಗಿ ನಾವು ವಿದ್ಯುತ್ ಬಿಲ್ ಕಟ್ಟಲ್ಲ ಅಂತ ಚೆಸ್ಕಾಂ ಸಿಬ್ಬಂದಿ ಜೊತೆ ಜನರು ಕಿರಿಕ್ ಮಾಡಿಕೊಂಡ ವಿಡಿಯೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ