ಹಾಸನದ ಬಳಿಕ ರಾಯಚೂರಿನ ಶಾಲೆಯೊಂದರಲ್ಲಿ ನಮಾಜ್ ಮಾಡಿಸಿದ ಆರೋಪ; ಹಿಂದೂ ಸಂಘಟನೆಗಳ ಆಕ್ರೋಶ

| Updated By: ಆಯೇಷಾ ಬಾನು

Updated on: Jul 04, 2023 | 12:49 PM

ರಾಯಚೂರು ನಗರದಲ್ಲಿರುವ ಖಾಸಗಿ ಪ್ರಿಸ್ಕೂಲ್ ಶಾಲೆಯೊಂದರಲ್ಲಿ ಮಕ್ಕಳಿಗೆ ನಮಾಜ್ ಮಾಡಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಶಾಲೆಯಲ್ಲಿ ಮಕ್ಕಳಿಗೆ ನಮಾಜ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಸನದ ಬಳಿಕ ರಾಯಚೂರಿನ ಶಾಲೆಯೊಂದರಲ್ಲಿ ನಮಾಜ್ ಮಾಡಿಸಿದ ಆರೋಪ; ಹಿಂದೂ ಸಂಘಟನೆಗಳ ಆಕ್ರೋಶ
ಶಿಕ್ಷಕಿ ಹೇಳಿಕೊಟ್ಟಂತೆ ದೇವರ ಪ್ರಾರ್ಥನೆ ಮಾಡುತ್ತಿರುವ ಮಕ್ಕಳು
Follow us on

ರಾಯಚೂರು: ರಾಜ್ಯದಲ್ಲೀಗ ಮತ್ತೊಂದು ವಿವಾದ ತಲೆ ಎತ್ತಿದೆ. ಶಾಲೆಗಳಲ್ಲಿ ನಮಾಜ್(Namaz) ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಹಾಸನದಲ್ಲಿ(Hassan) ಶಾಲೆಯೊಂದರಲ್ಲಿ ನಮಾಜ್ ಮಾಡಿಸಲಾಗಿದೆ ಅನ್ನೋ ವಿವಾದ ಭುಗಿಲೆದ್ದಿತ್ತು. ಇದಾದ ಬಳಿಕ ಈಗ ಬಿಸಿಲುನಾಡು ರಾಯಚೂರಿನಲ್ಲಿ(Raichur) ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ.

ರಾಯಚೂರು ನಗರದಲ್ಲಿರುವ ಖಾಸಗಿ ಪ್ರಿಸ್ಕೂಲ್ ಶಾಲೆಯೊಂದರಲ್ಲಿ ಪುಟ್ಟ ಮಕ್ಕಳಿಗೆ ನಮಾಜ್ ಮಾಡಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅದಕ್ಕೆ ಪೂರಕವೆಂಬಂತೆ ಶಾಲೆಯಲ್ಲಿ ಮಕ್ಕಳಿಗೆ ನಮಾಜ್ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ಐದು ಜನ ಮಕ್ಕಳನ್ನ ಕರೆದು ನಮಾಜ್ ಮಾಡಿಸಿದ್ದಾರೆ. ನಮಾಜ್ ಮಾಡುತ್ತಿರುವ ಮಕ್ಕಳ ಹಿಂದಿರುವ ಬ್ಲಾಕ್ ಬೋರ್ಡ್ ಮೇಲೆ ಬಕ್ರೀದ್ ಹಬ್ಬದ ಕುರಿತು ಬರೆಯಲಾಗಿದೆ. ಮೊನ್ನೆಯಷ್ಟೆ ನಡೆದ ಬಕ್ರೀದ್ ಹಬ್ಬದ ವೇಳೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸದ್ಯ ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಘಟನೆ ಬಗ್ಗೆ ರಾಯಚೂರಿನ ಹಿಂದು ಸಂಘಟನೆಗಳು ಖಂಡಿಸಿದ್ದು, ಹೋರಾಟಕ್ಕೆ ಮುಂದಾಗಿವೆ.

ಮಕ್ಕಳ ನಮಾಜ್ ವಿಡಿಯೋ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

ಶಾಲೆಯಲ್ಲಿ ಅಪ್ರಾಪ್ತ ಮಕ್ಕಳಿಗೆ ನಮಾಜ್ ಮಾಡಿಸುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಯಚೂರಿನಲ್ಲಿ ಭಜರಂಗದಳ ಕಾರ್ಯಕರ್ತರು ಘಟನೆ ನಡೆದ ಖಾಸಗಿ ಪ್ರಿ ಸ್ಕೂಲ್ ಗೆ ಭೇಟಿ ನೀಡಿದ್ದಾರೆ. ನಂತರ ಅಲ್ಲಿದ್ದ ಆಡಳಿತ ವರ್ಗದವರನ್ನ ತರಾಟೆಗೆ ತೆಗೆದುಕೊಂಡು ಎಚ್ಚರಿಕೆಯನ್ನ ನೀಡಿದ್ದಾರೆ. ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಭಜರಂಗದಳದ ಕಾರ್ಯಕರ್ತರು ಈ ಬಗ್ಗೆ ಸ್ಪಷ್ಟನೆಯನ್ನ ಕೇಳಿದ್ದಾರೆ. ನಂತರ ಘಟನೆ ಬಗ್ಗೆ ಭಜರಂಗದಳ ಸಂಚಾಲಕ ಶರಣಬಸವ ಪ್ರತಿಕ್ರಿಯಿಸಿದ್ದು ಶಾಲೆಯಲ್ಲಿ ನಮಾಜ್ ಮಾಡಿಸಿದ್ದನ್ನ ವಿರೋಧಿಸುತ್ತೇವೆ. ಇದು ಹಿಂದೂ ಭಾವನೆಗೆ ದಕ್ಕೆ ತರುವ ವಿಚಾರ. ಇದೇ ರೀತಿ ಘಟನೆ ಇತ್ತೀಚೆಗೆ ಹಾಸನದಲ್ಲೂ ನಡೆದಿದೆ. ಆ ಶಾಲೆಯ ಆಫ್ರೀನ್ ಎಂಬ ಶಿಕ್ಷಕಿ ನಮಾಜ್ ಮಾಡಿಸಿದ್ದಾರೆ. ಬಕ್ರೀದ್ ಆದ ಮಾರನೆ ದಿನ ಈ ಘಟನೆ ನಡೆದಿದೆ. ಈ ಮೂಲಕ ಹಿಂದೂಗಳ ತುಷ್ಟೀಕರಣ ಮಾಡಲಾಗ್ತಿದೆ. ಮಕ್ಕಳಿಗೆ ಪಠ್ಯದಲ್ಲಿರುವ ಸಮಾನತೆ ಕಲಿಸಬೇಕು. ಅಲ್ಲಿ ಎಲ್ಲಾ ಧರ್ಮದ ಕುರಿತು ಹೇಳಲಾಗಿರುತ್ತೆ ಅದನ್ನ ಬಿಟ್ಟು ಹಿಂದೂಗಳ ಬಗ್ಗೆ ತುಷ್ಟೀಕರಣ ಮಾಡಲಾಗುತ್ತಿದೆ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ.

ಓರಿಯೆಂಟೇಶನ್ ಮಾಡೋವಾಗ ರಾಷ್ಟ್ರೀಯ ಭಾವೈಕ್ಯತೆ ಕುರಿತು ಎಲ್ಲಾ ಹಬ್ಬಗಳನ್ನ ಆಚರಣೆ ಮಾಡುತ್ತೇವೆ. ಆ ಬಗ್ಗೆ ಮಕ್ಕಳಿಗೆ ತಿಳಿಸುತ್ತೇವೆ. ಆ ಬಗ್ಗೆ ಕಲಿಸುತ್ತೇವೆ. ವಿಡಿಯೋ ನೋಡಿದ ಬಳಿಕ ಸ್ವಲ್ಪ ಈ ವಿಚಾರ ಹೆಚ್ಚಾಗಿದೆ ಅಂತ ಅನ್ನಿಸ್ತು. ಅದು ಆಗಬಾರದಿತ್ತು ಆದರೆ ಆಗಿದೆ. ಆ ಬಗ್ಗೆ ಯಾರಿಗಾದ್ರೂ ನೋವಾಗಿದ್ರೆ ಕ್ಷಮೆಯಾಚಿಸುತ್ತೇನೆ ಅಂತ ಖಾಸಗಿ ಶಾಲೆ ಆಡಳಿತ ವರ್ಗದ ಅಧಿಕಾರಿ ಮಂಜುಳಾ ಪಾಟೀಲ್ ತಿಳಿಸಿದ್ದಾರೆ.

ರಾಯಚೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ