ರಾಯಚೂರಿನಲ್ಲಿ ರೈತರ ಬೆಳೆ ಪರಿಹಾರದ ಹಣ ಗೋಲ್ಮಾಲ್! 36 ದುರುಳರಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 17, 2024 | 10:51 PM

ಅದು ಬಡ ರೈತರ ಪಾಲಿಗೆ ವರವಾಗಬೇಕಿದ್ದ ಯೋಜನೆ. ಆದರೆ, ರೈತರ ಖಾತೆಗೆ ಸೇರಬೇಕಿದ್ದ ಬರ ವಿಮೆಯ ಕೋಟ್ಯಾಂತರ ರೂ. ಹಣ ದುರುಳರ ಪಾಲಾಗಿದೆ. ರೈತರು ಮತ್ತು ಸರ್ಕಾರವನ್ನ ವಂಚಿಸಿರುವ 36 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ರಾಯಚೂರಿನಲ್ಲಿ ರೈತರ ಬೆಳೆ ಪರಿಹಾರದ ಹಣ ಗೋಲ್ಮಾಲ್! 36 ದುರುಳರಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ
ರಾಯಚೂರಿನಲ್ಲಿ ರೈತರ ಬೆಳೆ ಪರಿಹಾರದ ಹಣ ಗೋಲ್ಮಾಲ್
Follow us on

ರಾಯಚೂರು, ಮೇ.17: ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಬೆಳೆ ವಿಮೆ ಪರಿಹಾರದ ಹಣ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಈಗಾಗಲೇ ರೈತರನ್ನ ವಂಚಿಸಿ ರೈತರ ಪಾಲಾಗಬೇಕಿದ್ದ ಕೋಟ್ಯಾಂತರ ರೂಪಾಯಿ ಬೆಳೆ ವಿಮೆ ಪರಿಹಾರದ ಹಣವನ್ನ ಮಧ್ಯವರ್ತಿಗಳು, ಹಣವಂತರು, ಪ್ರಭಾವಿಗಳು ಭಾಗಿಯಾಗಿ ವಂಚಿಸಿರುವ ಪ್ರಕರಣಗಳು ನಡೆದಿದ್ದು, ತನಿಖೆ ನಡೆಯುತ್ತಿದೆ. ಈ ಮಧ್ಯೆ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹಾಗೂ ಗಾಣದಾಳ ಗ್ರಾಮಗಳಲ್ಲಿ ವಂಚನೆ ಪ್ರಕರಣ ನಡೆದಿದೆ.

ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ನ್ಯಾಯಕ್ಕಾಗಿ ಈ ಹಿಂದೆ ಪ್ರತಿಭಟನೆ ಮಾಡಿದ್ದ ರೈತರು

ಹೌದು, ಭತ್ತ ಬೆಳೆದಿದ್ದ ರೈತರು ಬೆಳೆ ವಿಮೆ ಮಾಡಿಸಿದ್ದರು. 2021-22 ನೇ ಸಾಲಿನಲ್ಲಿ ಬೇಸಿಗೆ ಹಂಗಾಮಿನ ಬೆಳೆ ವಿಮೆಗಾಗಿ ಸುಮಾರು 273 ರೈತರು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 1 ಕೋಟಿ 39 ಲಕ್ಷ 57 ಸಾವಿರ ಹಣ 106 ಜನರಿಗೆ ಜಮೆ ಆಗಿತ್ತು. ಆಗಲೇ ಪರಿಹಾರದ ಹಣದಲ್ಲಿ ಗೋಲ್ಮಾಲ್​ ಆಗಿರೋದು ಬೆಳಕಿಗೆ ಬಂದಿತ್ತು. ಪರಿಹಾರ ಕೈ ಸೇರದ ರೈತರು ಈ ಬಗ್ಗೆ ಮಾಹಿತಿ ಕಲೆ ಹಾಕುವುದಕ್ಕೆ ಶುರು ಮಾಡಿದ್ದರು. ಆಗ ಅಸಲಿ ರೈತರಿಗೆ ಪರಿಹಾರವೇ ಬಂದಿರಲಿಲ್ಲ. ಹೀಗಾಗಿ ಕೃಷಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ನ್ಯಾಯಕ್ಕಾಗಿ ಈ ಹಿಂದೆ ರೈತರು ಪ್ರತಿಭಟನೆಯನ್ನೂ ನಡೆಸಿದ್ದರು. ಇದಾದ ಬಳಿಕ ಕೃಷಿ ಅಧಿಕಾರಿಗಳು ಸಂರಕ್ಷಣಾ ಪೋರ್ಟಲ್​​ನಲ್ಲಿ ಪರಿಶೀಲನೆ ನಡೆಸಿದಾಗ ಬೆಚ್ಚಿ ಬೀಳಿಸುವ ಸತ್ಯ ಬಯಲಾಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಅಧಿಕಾರಿಗಳ ನಿರ್ಲಕ್ಷ್ಯ; ರೈತರಿಗೆ ಬೆಳೆವಿಮೆ ನೀಡದೇ ದೋಖಾ!

ರೈತರು ನೀಡಿದ ದೂರಿನನ್ವಯ ಕೃಷಿ ಇಲಾಖೆ ಅಧಿಕಾರಿಗಳು 273 ಅರ್ಜಿಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಕಲೆ ಹಾಕಿದ್ದರು. ನಿಯಮದನುಸಾರ ಕಾಮನ್ ಸರ್ವಿಸ್ ಸೆಂಟರ್​ಗಳಲ್ಲಿನ ಅರ್ಜಿ ವೇಳೆ ಪಹಣಿ ಜೊತೆ ರೈತರು ಹೆಸರು ಲಿಂಕ್ ಆಗಿರುವುದು ಹಾಗೂ ಎರಡಕ್ಕೂ ಹೊಂದಾಣಿಕೆ ಆಗುತ್ತಿದೆಯಾ ಎನ್ನುವುದನ್ನ ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ, ಅರ್ಜಿ ತಿರಸ್ಕರಿಸುವ ಪ್ರಕ್ರಿಯೆ ಇರತ್ತೆ. ಆದ್ರೆ, ಇಲ್ಲಿ ಕಾಮನ್ ಸರ್ವಿಸ್ ಸೆಂಟರ್​ನಲ್ಲಿ ಅರ್ಜಿ ವೇಳೆಯೇ ಆರೋಪಿಗಳು ಮಸಲತ್ತು ಮಾಡಿ, ಅಸಲಿ ರೈತರ ಹೆಸರಿನಲ್ಲಿನ ಪಹಣಿಯಲ್ಲೇ ವಿಮೆ ಕಂತನ್ನ ಕಟ್ಟಿದ್ದಾರೆ.

36 ದುರುಳರಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ; ಎಫ್​ಐಆರ್​ ದಾಖಲು

36 ಜನ ಆರೋಪಿಗಳು 116 ರೈತರ ಹೆಸರಿನಲ್ಲಿ ಕಂತು ಕಟ್ಟಿದ್ದಾರೆ. ಬಳಿಕ ವಿಮೆ ಪರಿಹಾರದ ಹಣವನ್ನ ಅಸಲಿ ರೈತರಿಗೆ ಸೇರದ ರೀತಿ ಮಾಡಿ, ತಮ್ಮ ಹೆಸರಿಗೆ ಒಟ್ಟು 75 ಲಕ್ಷ 91 ಸಾವಿರ ಹಣವನ್ನ ವರ್ಗಾಯಿಸಿಕೊಂಡಿರುವ ಸತ್ಯ ಬಯಲಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿ ಶ್ರೀನಿವಾಸ್ ನೀಡಿರುವ ದೂರಿನ್ವಯ ಜಾಲಹಳ್ಳಿ ಠಾಣೆಯಲ್ಲಿ 36 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ಚುರುಕುಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ