
ರಾಯಚೂರು, ಮೇ 23: ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನಲ್ಲಿರೊ ಆರ್ಚ್ ಕ್ಯಾಂಪ್ 2 ರಲ್ಲಿ (ಬಂಗಾಳ ಮೂಲದ ಹಿಂದುಗಳಿಗೆ ಪುರ್ವಸತಿ ಕಲ್ಪಿಸಿರುವ ಪ್ರದೇಶ. ಸುಮಾರು ನಾಲ್ಕೈದು ಕ್ಯಾಂಪ್ಗಳಿವೆ) ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ (Prathamika Krushi Pattina Sahakara Sangha) ಸಂಘವಿದೆ. ಇದೇ ಸಹಕಾರಿ ಸಂಘದಲ್ಲಿ ಈಗ ಕೋಟಿ ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ. 2021 ನೇ ಸಾಲಿನಲ್ಲಿ ಈ ಸಹಕಾರಿ ಸಂಘದಿಂದ ಕೆಲ ರೈತರು ಭತ್ತ ಅಡಮಾನ ಇಟ್ಟುಕೊಂಡು ಸಾಲ ಪಡೆದಿದ್ದರು. ಆನಂದ್ ಎಂಬ ರೈತ 1500 ಚೀಲ ಭತ್ತವನ್ನು ಅಡಮಾನ ಇಟ್ಟು,16 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ, ಇತ್ತೀಚೆಗೆ ಆ ರೈತ ಸಾಲ ಮರುವಾಪತಿ ಮಾಡಲು ಹೋಗಿದ್ದಾಗ ಆಡಳಿತ ಮಂಡಳಿಯ ಅವ್ಯವಹಾರ ಬಯಲಾಗಿದೆ. ರೈತ ಆನಂದ್ ಅಡಮಾನ ಇಟ್ಟಿದ್ದ 1500 ಚೀಲ ಭತ್ತವೇ ಗೋಡೌನ್ನಿಂದ ಕಾಣೆಯಾಗಿತ್ತು. ಇದು ಸಹಕಾರಿ ಸಂಘದ ಈಗಿನ ಹೊಸ ಆಡಳಿತ ಮಂಡಳಿಯನ್ನು ಕೆರಳಿಸಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ರೈತರು ಅಡಮಾನ ಇಟ್ಟಿದ್ದ ಭತ್ತವನ್ನೇ ಬಳಸಿಕೊಂಡು ಹಳೆ ಆಡಳಿತ ಮಂಡಳಿ ಗೋಲ್ಮಾಲ್ ಮಾಡಿರುವ ಸತ್ಯ ಬಯಲಾಗಿದೆ.
ಈ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದಲ್ಲಿ 1000ಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದಾರೆ. ವರ್ಷಕ್ಕೆ ಇಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದ್ದ ಸಹಕಾರಿ ಸಂಘ ಈಗ ರೈತರಿಗೇ ವಂಚನೆ ಎಸಗಿದೆ. ರೈತ ಆನಂದ್ ಸೇರಿ ಕೇವಲ ಆರೇಳು ರೈತರಿಂದ ಸುಮಾರು 3000 ಸಾವಿರ ಚೀಲ ಭತ್ತವನ್ನು ಅಡಮಾನ ಇರಿಸಿಕೊಳ್ಳಲಾಗಿದ್ದು, ಹೆಚ್ಚುವರಿ ಭತ್ತ ಅಡಮಾನ ಇಟ್ಟುಕೊಳ್ಳಲಾಗಿದೆ ಎಂದು ಬಿಂಬಿಸಲಾಗಿದೆ ಎಂಬ ಆರೋಪವಿದೆ. ಆದರೆ, ಅಸಲಿಗೆ ನಡೆದಿದ್ದೇ ಬೇರೆ ಎನ್ನುತ್ತಾರೆ ರೈತರು. ಹೆಚ್ಚಿನ ಸಂಖ್ಯೆಯ ರೈತರಿಂದ ಅಪಾರ ಪ್ರಮಾಣದ ಭತ್ತ ಅಡಮಾನ ಇಟ್ಟುಕೊಂಡು ಸುಮಾರು 3 ಕೋಟಿ 61 ಲಕ್ಷ ರೂ. ಸಾಲ ಮಂಜೂರು ಮಾಡಲಾಗಿದೆ ಎಂದು ಹಳೆ ಆಡಳಿತ ಮಂಡಳಿ ದಾಖಲೆ ಸೃಷ್ಟಿಸಿದೆ ಎಂಬುದು ಹೊಸ ಆಡಳಿತ ಮಂಡಳಿಯ ಆರೋಪ.
ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆಯೇ ಸಹಕಾರಿ ಸಂಘದ ಹೊಸ ಆಡಳಿತ ಮಂಡಳಿ, ಗೋಲ್ಮಾಲ್ ಆರೋಪದ ದಾಖಲೆಗಳನ್ನು ನೀಡಿ ಎಂದು ಹಳೆ ಆಡಳಿತ ಮಂಡಳಿಯನ್ನು ಆಗ್ರಹಿಸಿದೆ. ಆದರೂ ಹಳೆ ಆಡಳಿತ ಮಂಡಳಿ ದಾಖಲೆಗಳನ್ನೇ ನೀಡುತ್ತಿಲ್ಲ. ಕೇವಲ ರೈತರನ್ನು ವಂಚಿಸಿರೋದಷ್ಟೇ ಅಲ್ಲದೆ, ವಿವಿಧ ರೀತಿಯಲ್ಲೂ ಹಳೆ ಆಡಳಿತ ಮಂಡಳಿ ಕೋಟಿ ಕೋಟಿ ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಹೊಸ ಆಡಳಿತ ನಿರ್ದೇಶಕ ಆರೋಗ್ಯಸ್ವಾಮಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಔಷಧ ಕೇಂದ್ರ ನಿರ್ಬಂಧಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ
ದೊಡ್ಡ ಮಟ್ಟದ ಅವ್ಯವಹಾರ ಆರೋಪವನ್ನು ಸದ್ದಿಲ್ಲದೇ ಮುಚ್ಚಿ ಹಾಕುವ ಯತ್ನವೂ ನಡೆಯುತ್ತಿದ್ದು, ಈ ಬಗ್ಗೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಬೇಕಿದೆ. ಅಲ್ಲದೇ ಕಾಣೆಯಾಗಿರುವ ಭತ್ತದ ಚೀಲಗಳ ನಿಗೂಢತೆಯನ್ನು ಬೇಧಿಸಬೇಕಿದೆ.