Black Day Of Raichur: ಮಾನ್ವಿ ಸ್ಕೂಲ್ ಬಸ್​ ಅಪಘಾತಕ್ಕೆ ರಸ್ತೆ ಗುಂಡಿಯೇ ವಿಲನ್

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2024 | 6:50 PM

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ಕಂದಮ್ಮಗಳು ಉಸಿರು ಚೆಲ್ಲಿವೆ. ಶಿಕ್ಷಕರ ದಿನಾಚರಣೆಯಂದು ರೆಡಿಯಾಗಿ ಬೆಳ್ಳಂಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಕೆಎಸ್​ಆರ್​ಟಿಸಿ ಬಸ್ ಅಪಘಾತ ಸಂಭವಿಸಿದ್ದು, ಆ ದೃಶ್ಯ, ಫೋಟೋಗಳನ್ನು ನೋಡಿದರೆ ಕರಳು ಹಿಂಡುವಂತಿದೆ. ರಕ್ತ ಸಿಕ್ತವಾಗಿದ್ದ ಚಿಕ್ಕ ಪುಟ್ಟ ಮಕ್ಕಳನ್ನು ನೋಡಿದರೆ ಎಂತವರಿಗೂ ಕಣ್ಣಲ್ಲಿ ನೀರು ಬರುತ್ತೆ. ಇನ್ನು ಈ ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವರು ಮಮ್ಮಲ ಮರುಗಿದ್ದಾರೆ. ಇನ್ನು ಇದಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮಾಜಿ ಸಿಎಂ ಬೊಮ್ಮಾಯಿ ಸಹ ಪ್ರತಿಕ್ರಿಯಿಸಿದ್ದಾರೆ.

Black Day Of Raichur: ಮಾನ್ವಿ ಸ್ಕೂಲ್ ಬಸ್​ ಅಪಘಾತಕ್ಕೆ ರಸ್ತೆ ಗುಂಡಿಯೇ ವಿಲನ್
ಸ್ಕೂಲ್ ಬಸ್ ಅಪಘಾತ
Follow us on

ರಾಯಚೂರು, (ಸೆಪ್ಟೆಂಬರ್ 05): ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆ ಆ ಮಕ್ಕಳೆಲ್ಲಾ ನೆಚ್ಚಿನ ಶಿಕ್ಷಕರಿಗೆ ವಿಷ್ ಮಾಡಬೇಕಿತ್ತು. ಆದ್ರೆ ವಿಧಿಯಾಟ ಬೇರೆಯದ್ದೇ ಇತ್ತು. ಜವರಾಯನ ಅಟ್ಟಹಾಸಕ್ಕೆ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಡಿಕ್ಕಿಯಾಗಿ ಎರಡು ಮಕ್ಕಳು ಸಾವನ್ನಪ್ಪಿದ್ದರೆ, ಇನ್ನಿಬ್ಬರ ಕಾಲುಗಳು ಕಟ್ ಆಗಿವೆ. ಘಟನೆಗೆ ರಸ್ತೆ ಗುಂಡಿಯೇ ವಿಲನ್ ಆಗಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಎಂದಿನಂತೆ ಇಂದು ಖಾಸಗಿ ಶಾಲಾ ವಾಹನದಲ್ಲಿ ಮಾನ್ವಿ ಸುತ್ತಲಿನ ಕಪಗಲ್,ಕುರ್ಡಿ ಸೇರಿ ವಿವಿಧ ಹಳ್ಳಿಗಳ ಪ್ರಾಥಮಿಕ ಶಾಲಾ ಮಕ್ಕಳು ಶಾಲೆಗೆ ಹೊರಟ್ಟಿತ್ತು. ಈ ವೇಳೆ ಮಾನ್ವಿ ಪಟ್ಟಣದ ಮಾರ್ಗ ಮಧ್ಯೆ ಕಪಗಲ್ ಬಳಿ ರಾಯಚೂರು ಮಾರ್ಗವಾಗಿ ಹೊರಟಿದ್ದ ಕೆಎಸ್ ಆರ್​ಟಿಸಿ ಬಸ್ ನಡುವೆ ಡಿಕ್ಕಿಯಾಗಿದೆ‌. ಅಪಘಾತದ ಹೊಡೆತಕ್ಕೆ ಶಾಲಾ ಬಸ್ ಮುಂಭಾಗ ಛಿದ್ರಛಿದ್ರವಾಗಿದೆ.

ಘಟನೆಗೆ ರಸ್ತೆ ಗುಂಡಿಯೇ ಪ್ರಮುಖ ಕಾರಣ

ಘಟನೆ ನಡೆದ ಸ್ಥಳದಲ್ಲಿ ರಸ್ತೆ ಗುಂಡಿ ಇದೆ. ಅದನ್ನ ತಪ್ಪಿಸಲು ಹೋಗಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಕಟ್ ಹೊಡೆದಿದ್ದಾನೆ. ಆಗ ಎದುರಿಗೆ ಮಕ್ಕಳನ್ನ ತುಂಬಿಕೊಂಡು ಬರುತ್ತಿದ್ದ ಸ್ಕೂಲ್​ ಬಸ್​ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಲ್​ ಬಸ್​ನಲ್ಲಿದ್ದ ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ಎರಡು ಮಕ್ಕಳ ಕಾಲುಗಳು ಕಟ್ ಆಗಿದ್ದು, ಇತರೆ ವಿದ್ಯಾರ್ಥಿಗಳಿಗೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ. ಓಟ್ಟು 32 ಮಕ್ಕಳ ಪೈಕಿ 11 ಜನ ಮಕ್ಕಳನ್ನ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.17 ಮಕ್ಕಳನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಜನರನ್ನ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ರಾಯಚೂರು: ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು, ಕೈಕಾಲು ಛಿದ್ರಗೊಂಡ ಮಕ್ಕಳ ನೋಡಿ ಬಿಕ್ಕಿ ಬಿಕ್ಕಿ ಅತ್ತ ಪೋಷಕರು

ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ಇಡೀ ಜಿಲ್ಲಾಡಳಿತವೇ ರಿಮ್ಸ್ ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿದೆ. ಮೃತ ಮಕ್ಕಳಿಗೆ ಐದು ಲಕ್ಷ, ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ತಲಾ ಮೂರು ಲಕ್ಷ ಪರಿಹಾರವನ್ನ ಸಿಎಂ ಸೂಚನೆಯಂತೆ ಜಿಲ್ಲಾಧಿಕಾರಿ ನಿತೀಶ್ ಘೋಷಿಸಿದ್ದಾರೆ.

ಇನ್ನು ಘಟನೆಯಲ್ಲಿ ಎರಡು ಕಾಲು ಕಳೆದುಕೊಂಡಿದ್ದ ಏಳು ವರ್ಷದ ಸಮರ್ಥ ಹಾಗೂ ಮತ್ತೋರ್ವ 12 ವರ್ಷದ ಶ್ರೀಕಾಂತ್ ಮೃತಪಟ್ಟಿದ್ದಾರೆ..ದುರಂತ ಅಂದ್ರೆ ಇಬ್ಬರು ಮಕ್ಕಳು ಬಡಕುಟುಂಬದವರು. ಕೂಲಿ ನಾಲಿ ಮಾಡಿ ಮಕ್ಕಳನ್ನ ಓದಿಸುತ್ತಿದ್ರು‌..ಈ ಇಬ್ಬರು ಮಕ್ಕಳು ತಮ್ಮ ತಂದೆ ತಾಯಿಗೆ ಓಬ್ಬರೋಬ್ಬರೇ ಗಂಡು ಮಕ್ಕಳಾಗಿದ್ರು. ಹೀಗಾಗಿ ಮೃತರ ಕುಟುಂಬಸ್ಥರು ಅಕ್ಷರಶಃ ಕಣ್ಣೀರಿಡ್ತಿದ್ದಾರೆ.

ಸರ್ಕಾರಿ ಬಸ್ ನಲ್ಲಿದ್ದ ಕೆಲವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನೂ ಸ್ಥಳೀಯ ಮಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ತನಿಖೆ ನಡೆಯುತ್ತಿದೆ.

ಸಿಎಂ ಸಿದ್ದರಾಮಯ್ಯ ಟ್ವೀಟ್


ಕಪಗಲ್​ ಬಳಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್​ ಬಳಿ ಅಪಘಾತ ಸಂಭಿಸಿದ್ದು, ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಸುದ್ದಿ ಕೇಳಿ ಸಂಕಟವಾಯಿತು. ಮೃತ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡುತ್ತೇವೆ. ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುತ್ತೇವೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ದುಃಖದಲ್ಲಿ ನಾನೂ ಭಾಗಿ ಎಂದು ಬರೆದುಕೊಂಡಿದ್ದಾರೆ.

Black Day Of Raichur

ಈ ಅಪಘಾತ ಇಡೀ ರಾಯಚೂರು  ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.  ಭೀಕರ ಅಪಘಾತದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ನೋಡಿ ಮಮ್ಮಲ ಮರುಗಿದ್ದಾರೆ. ಇನ್ನು ರಕ್ತ ಸಿಕ್ತವಾಗಿದ್ದ ಮಕ್ಕಳ ಸ್ಥಿತಿ ನೋಡಿದರೆ ಕರಳು ಚುರ್ ಎನ್ನುತ್ತೆ. ಹಲವರು Black Day Of Raichur ಎಂದು ವಾಟ್ಸಪ್ ಸ್ಟೇಟಸ್​ ಹಾಕಿಕೊಂಡು ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ ಮಕ್ಕಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:44 pm, Thu, 5 September 24