ಅಕಾಲಿಕ ಮಳೆಗೆ ರಾಯಚೂರಿನಲ್ಲಿ ಕೊಚ್ಚಿ ಹೋದ ಭತ್ತ; ಬರಗಾಲದ ಮಧ್ಯೆ ಚಿನ್ನದಂತೆ ಬೆಳೆದಿದ್ದ ಬೆಳೆ ನಾಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 12, 2023 | 8:42 PM

ಬರಗಾಲಕ್ಕೆ ಬಿಸಿಲುನಾಡಿನ ರೈತರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಮಳೆ ಅಭಾವ, ಕಾಲುವೆಗೆ ನೀರು ಬಾರದೇ ಇರುವುದು ಕೊನೆಗೆ ವಿದ್ಯುತ್ ಸಮಸ್ಯೆಯಿಂದ ರೈತರು ಅಕ್ಷರಶಃ ಕಂಗಾಲಾಗಿದ್ದರು. ಆದ್ರೆ, ರಾಯಚೂರು ಜಿಲ್ಲೆಯ ಹಲವು ಕಡೆ ಕಾಲುವೆಯ ಅಲ್ಪ ಸ್ವಲ್ಪ ನೀರಲ್ಲೇ ಭರ್ಜರಿ ಭತ್ತ ಬೆಳೆದಿದ್ದರು. ಆದ್ರೆ, ಇತ್ತೀಚೆಗೆ ಸುರಿದ ಮಳೆಗೆ ಭತ್ತ ಕೊಚ್ಚಿ ಹೋಗಿದೆ.

ಅಕಾಲಿಕ ಮಳೆಗೆ ರಾಯಚೂರಿನಲ್ಲಿ ಕೊಚ್ಚಿ ಹೋದ ಭತ್ತ; ಬರಗಾಲದ ಮಧ್ಯೆ ಚಿನ್ನದಂತೆ ಬೆಳೆದಿದ್ದ ಬೆಳೆ ನಾಶ
ರಾಯಚೂರಿನಲ್ಲಿ ಮಳೆಯ ಅಬ್ಬರಕ್ಕೆ ಭತ್ತ ನಾಶ
Follow us on

ರಾಯಚೂರು, ನ.12: ಜಿಲ್ಲೆಯಲ್ಲಿ ನೀರಿಲ್ಲದೇ ಭತ್ತದ ಗದ್ದೆಗಳಂತು ಬಿಸಿಲ ಬೇಗೆಗೆ ಒಣಗಿ ಹೋಗಿವೆ. ಎಕೆರೆಗೆ 40 ರಿಂದ 50 ಸಾವಿರ ರೂಪಾಯಿ ಖರ್ಚು ಮಾಡಿದ್ದ ರೈತರು, ಭತ್ತ ಒಣಗುತ್ತಿರುವುದನ್ನು ನೋಡಿ ಮರಗುತ್ತಿದ್ದಾರೆ. ಬರೀ ಭತ್ತ(Paddy ) ಮಾತ್ರವಲ್ಲ, ಅದರ ಜೊತೆ ಹತ್ತಿ, ಜೋಳ, ತೊಗರಿ, ಮೆಣಸಿನಕಾಯಿ ಬೆಳೆಗಳು ಕೂಡ ಹಾಳಾಗಿದ್ದು, ಅದರಲ್ಲೂ ಹತ್ತಿ ಬೆಳೆ ಕೂಡ ನೀರಿಲ್ಲದೇ ಗುಣಮಟ್ಟದ ಫಸಲು ನೀಡಿಲ್ಲ. ಭತ್ತದ ಗದ್ದೆಗಳು ಒಣಗಿ ಬಿರುಕುಬಿಟ್ಟಿವೆ. ಈ ಮಧ್ಯೆ ಜಿಲ್ಲೆಯ ವಿವಿಧೆಡೆ ಕಾಲುವೆ ನೀರನ್ನು ನಂಬಿ ರೈತರು ಭತ್ತ ಬೆಳೆದಿದ್ದು, ಭರ್ಜರಿ ಬೆಳೆ ಬಂದಿತ್ತು. ಆದ್ರೆ, ಇತ್ತೀಚೆಗೆ ಸುರಿದ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಗದ್ದೆಗಳು ಕೊಚ್ಚಿ ಹೋಗಿವೆ.

ಜಿಲ್ಲೆಯ ಸಿಂಧನೂರು, ಸಿರವಾರ, ಮಸ್ಕಿ ತಾಲ್ಲೂಕುಗಳಲ್ಲಿನ ಗ್ರಾಮಗಳಲ್ಲಿ ಬೆಳೆಯಲಾಗಿದ್ದ ಭತ್ತ ಅಕಾಲಿಕ ಮಳೆಗೆ ಕೊಚ್ಚಿ ಹೋಗಿದೆ. ಸಿಂಧನೂರು ತಾಲ್ಲೂಕಿನ ಹೂಡಾ, ಮುಕ್ಕುಂದ, ಸೋಮಲಾಪುರ ಗ್ರಾಮಗಳಲ್ಲಿ ವ್ಯಾಪ್ತಿಯ ಜಮೀನುಗಳಲ್ಲಿ ಮಳೆಗೆ ಭತ್ತ ಕೊಚ್ಚಿ ಹೋಗಿದ್ರೆ, ಸಿರವಾರ ತಾಲ್ಲೂಕಿನ ಮಲ್ಲಟ, ಮುಗುಡೋಣಿ, ಹೊಸೂರು ಗ್ರಾಮಗಳಲ್ಲಿನ ಭತ್ತ ಸಂಪೂರ್ಣ ನೆಲಕಚ್ಚಿದೆ. ಅಕಾಲಿಕ ಮಳೆಯಿಂದ ಭತ್ತದ ಬೆಳೆ ನೆಲ ಕಚ್ಚಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದೆ, ಅಕಾಲಿಕ ಮಳೆ ಹೊಡೆತಕ್ಕೆ ಸದ್ಯ ರೈತರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

ಇದನ್ನೂ ಓದಿ:30 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆ ಜಲಾಶಯದಲ್ಲಿ 22 ಟಿಎಂಸಿ ನೀರಿದೆ, ಬರಗಾಲದ ರೈತಾಪಿ ವರ್ಗ ಫುಲ್ ಖುಷ್​!

ಈ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಇಲ್ಲದೆ ಬರ ಆವರಿಸಿದ್ದು, ಇಂತಹ ಸಂದರ್ಭಗಳಲ್ಲಿ ಇನ್ನೇನೂ ಭತ್ತದ ಬೆಳೆ ಕಟಾವಿಗೆ ಬಂದಿತ್ತು. ಅಕಾಲಿಕ ಮಳೆಗೆ ರೈತರು ಬೆಳೆದ ನೂರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಭತ್ತ ನೆಲಕ್ಕುರುಳಿದ್ದು, ರೈತರು ಅಪಾರ ಪ್ರಮಾಣದ ನಷ್ಟಕ್ಕೆ ಗುರಿಯಾಗಿದ್ದಾರೆ. ಹೀಗೆ ಜಿಲ್ಲೆಯ ರೈತರು ಒಂದಾದ ಮೇಲೊಂದರಂತೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಅಕಾಲಿಕ ಮಳೆಗೆ ಕೊಚ್ಚಿ ಹೋಗಿರುವ ಬೆಳೆಗಳ ಸರ್ವೆ ಮಾಡಿಸಿ, ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ