ಮಹಿಳೆಯರೇ ಎಚ್ಚರ: ಬಿರಿಯಾನಿ ಎಲೆ ಅಂತ ನೀಲಗಿರಿ ಎಲೆ, ಪಪ್ಪಾಯಿ ಬೀಜ ಮಿಶ್ರಿತ ಕಾಳು ಮೆಣಸು ಮಾರಾಟ!

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 846 ಕೆಜಿ ಕಲಬೆರಕೆ ಮಸಾಲೆ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ದನಿಯಾ, ಮೆಣಸು, ಬಿರಿಯಾನಿ ಎಲೆ, ಚಿಕನ್ ಮತ್ತು ಸಾಂಬಾರ್ ಮಸಾಲೆಗಳಲ್ಲಿ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತಿತ್ತು. ಪಪ್ಪಾಯಿ ಬೀಜಗಳನ್ನು ಮೆಣಸಿನ ಕಾಳುಗಳಲ್ಲಿ ಬೆರೆಸಿ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳು ಪರಾರಿಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರೇ ಎಚ್ಚರ: ಬಿರಿಯಾನಿ ಎಲೆ ಅಂತ ನೀಲಗಿರಿ ಎಲೆ, ಪಪ್ಪಾಯಿ ಬೀಜ ಮಿಶ್ರಿತ ಕಾಳು ಮೆಣಸು ಮಾರಾಟ!
ನೀಲಗಿರಿ ಎಲೆ
Updated By: ವಿವೇಕ ಬಿರಾದಾರ

Updated on: Jul 11, 2025 | 9:49 PM

ರಾಯಚೂರು, ಜುಲೈ 11: ರಾಯಚೂರು (Raichur) ಜಿಲ್ಲೆಯ ಮಾನ್ವಿ ಪಟ್ಟಣದ ಇಸ್ಲಾಂ ನಗರದಲ್ಲಿನ ಪಾಳು ಬಿದ್ದ ಮನೆಯೊಂದರ ಬಳಿ ಈ ಕಲಬೆರಕೆ ಮಸಾಲೆ (Masala) ಪದಾರ್ಥಗಳನ್ನು ತಯಾರಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಒಟ್ಟು 846 ಕೆಜಿ ಕಲಬೆರಿಕೆ ಮಸಾಲೆ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.

ಆರೋಪಿಗಳು ದನಿಯಾ ಕಾಳು, ಮೆಣಸಿನ ಕಾಳು, ಬಿರಿಯಾನಿ ಎಲೆ, ಚಿಕನ್ ಮಸಾಲೆ, ಸಾಂಬರ್ ಮಸಾಲೆಯನ್ನು ಕೆಮಿಕಲ್​ ಬಳಸಿ ತಯಾರು ಮಾಡುತ್ತಿದ್ದರು. ಬಿರಿಯಾನಿ ಎಲೆ ಅಂತ ನೀಲಗಿರಿ ಮರದ ಎಲೆಗಳಿಗೆ ಬಣ್ಣ ಹಾಕಿ ತಯಾರಿಸಿದ್ದರು. ಅಲ್ಲದೆ, ಪಪ್ಪಾಯಿ ಹಣ್ಣಿನ ಬೀಜಗಳನ್ನು ಮೆಣಿಸಿನ ಕಾಳುಗಳಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದರು. ದನಿಯಾ ಬೀಜಗಳಿಗೆ‌ ವಿವಿಧ ಕೆಮಿಕಲ್​ಗಳನ್ನು ಬಳಕೆ ಮಾಡಲಾಗಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ. ಬಟಾಣಿಗಳಿಗೆ ಹಸಿರು ಬಣ್ಣ ಮಿಶ್ರಣ ಮಾಡಿ, ಜವಾರಿ ಅಂತ ಗ್ರಾಹಕರನ್ನು ನಂಬಿಸುತ್ತಿದ್ದರು ಎಂದು ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಕಲಿ ಎಲೆಕ್ಟ್ರಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಯಚೂರಿನ ಪ್ರಸಿದ್ಧ ಮಳಿಗೆಗಳ ಮೇಲೆ ದಾಳಿ

ಅಧಿಕಾರಿಗಳ ದಾಳಿ ಮಾಡುತ್ತಿದ್ದಂತೆ, ಕಲಬೆರಕೆ ದಂಧೆ ನಡೆಸುತ್ತಿದ್ದ ಆರೋಪಿ ಗಫೂರ್ ಹಾಗೂ ಈತನ ಜೊತೆಗಾರರು ಪರಾರಿಯಾಗಿದ್ದಾರೆ. ದಾಳಿ ವೇಳೆ ಒಟ್ಟು‌ 846 ಕೆಜಿ ವಿವಿಧ ನಕಲಿ ಮಸಾಲೆ ಪದಾರ್ಥಗಳು ಜಪ್ತಿ ಮಾಡಲಾಗಿದೆ. ಈ ಪೈಕಿ 367 ಕೆಜಿ ಬಣ್ಣ ಮಿಶ್ರಿತ ದನಿಯಾ ಕಾಳು, 220 ಕೆಜಿ ಅರಿಶಿನ ಹಾಗೂ ಕಡಲೆಕಾಯಿ, 150 ಕೆಜಿ ಕೆಂಪು ಕಡಲೆ, 16 ಕೆಜಿ ಕೆಂಪು ಕೊಬ್ಬರಿ, 6.5 ಕೆಜಿ ನೀಲಗಿರಿ ಎಲೆ, 43 ಕೆಜಿ ಕಾಳು ಮೆಣಸಿನಂತಿರುವ ಪಪ್ಪಾಯ ಬೀಜ, 42 ಕೆಜಿ ಚಕ್ಕೆ, 500 ಗ್ರಾಂ ಹಳದಿ ಹಾಗೂ ಕೆಂಪು ಬಣ್ಣದ ಕೆಮಿಕಲ್ ಪೌಡರ್ ಜಪ್ತಿ ಮಾಡಲಾಗಿದೆ.

ಸದ್ಯ ಆಹಾರ ಸುರಕ್ಷತಾ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 pm, Fri, 11 July 25