ಸರ್ಕಾರದ ಏಪಿಎಂಸಿ ಗೊಡೌನ್ಗಳು ಖಾಸಗಿ ಪಾಲು, ಕೋಟ್ಯಂತರ ಮೌಲ್ಯದ ಗೊಡೌನ್ ಲಕ್ಷಕ್ಕೆ ಮಾರಾಟ, ಕಿಕ್ಬ್ಯಾಕ್ ಆರೋಪ
ರಾಯಚೂರು ಏಪಿಎಂಸಿ ಅಧೀನದ ಒಂದು 1000 ಮೆಟ್ರಿಕ್ ಟನ್, ಮೂರು 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳ ಮಾರಾಟ ಮಾಡಲಾಗಿದೆ.. ಇವುಗಳನ್ನ ಶೈಲೇಶ್ವರ ಕಾಟನ್ ಟ್ರೇಡರ್ಸ್, ರೇಣುಕಾ ಟ್ರೇಡರ್ಸ್, ಶ್ರೀನಾಥ್ ಇಂಡಸ್ಟ್ರೀಸ್ ಹಾಗೂ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಗೆ ಮಾರಾಟ ಮಾಡಲಾಗಿದೆ -ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಆರೋಪ

ರೈತರ ಹಿತ ಕಾಪಾಡಬೇಕಿದ್ದ ಏಪಿಎಂಸಿ, ಸರ್ಕಾರದ ಆಸ್ತಿಯನ್ನೇ ಮಾರಾಟ ಮಾಡಿರೋ ಗಂಭೀರ ಆರೋಪ ಕೇಳಿಬಂದಿದೆ. ಕೋಟಿ ಕೋಟಿ ಮೌಲ್ಯದ ಗೊಡೌನ್ಗಳನ್ನ ಅತೀ ಕಡಿಮೆ ಬೆಲೆಗೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಕಿಕ್ ಬ್ಯಾಕ್ ಪಡೆಯಲಾಗಿದೆ ಅನ್ನೋ ಆರೋಪ ಸಂಚಲನಕ್ಕೆ ಕಾರಣವಾಗಿದೆ. ಹೌದು.. ಇದು ರಾಯಚೂರು ನಗರದಲ್ಲಿರೊ ಏಪಿಎಂಸಿ.. ಸುತ್ತಲಿನ ಜಿಲ್ಲೆಗಳು, ಗಡಿ ಭಾಗದ ಆಂಧ್ರ, ತೆಲಂಗಾಣ ರೈತರ ಪಾಲಿಗೂ ಇದೇ ಏಪಿಎಂಸಿ ಆಧಾರವಾಗಿದೆ.. ಏಪಿಎಂಸಿ ಅಧೀನದ ಗೊಡೌನ್ಗಳು ರೈತರು ಹೊತ್ತು ತರುವ ಭತ್ತ, ಹತ್ತಿ, ತೊಗರಿ ಸೇರಿ ವಿವಿಧ ಮಾಲುಗಳನ್ನ ಸಂರಕ್ಷಿಸಿಡಲು ಬಳಕೆ ಮಾಡಲಾಗತ್ತೆ. ಇದರ ಸಾಧಕ ಭಾದಕಗಳನ್ನ ಏಪಿಎಂಸಿ ಹಾಗೂ ಅಲ್ಲಿನ ಆಡಳಿತಾಧಿಕಾರಿಗಳು ನೋಡಿಕೊಳ್ಳಬೇಕು.. ರೈತರ ಹಿತ ಕಾಪಾಡಬೇಕಿದ್ದ ಏಪಿಎಂಸಿ ಅಧಿಕಾರಿಗಳು, ಆಡಳಿತ ವರ್ಗ ರೈತರ ಬಳಕೆಯ ಗೊಡೌನ್ಗಳನ್ನ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರೋ ಗಂಭೀರ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ರಾಯಚೂರು ಜಿಲ್ಲೆ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಅನ್ನೋರು ದಾಖಲೆಗಳ ಸಮೇತ ಏಪಿಎಂಸಿ ಕರ್ಮಕಾಂಡವನ್ನ ಬಯಲಿಗೆಳೆದಿದ್ದಾರೆ. ವ್ಯವಸ್ಥಿತವಾಗಿ ನಿಯಮಗಳನ್ನ ದುರುಪಯೋಗ ಪಡಿಸಿಕೊಂಡು ನಾಲ್ಕು ಗೊಡೌನ್ಗಳನ್ನ ಖಾಸಗಿ ವ್ಯಕ್ತಿಗಳ ಒಡೆತನದ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಆರೋಪಿಸಿದ್ದಾರೆ.
ಹೌದು..ಏಪಿಎಂಸಿ ಅಧೀನದ ಒಂದು 1000 ಮೆಟ್ರಿಕ್ ಟನ್, ಮೂರು 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳ ಮಾರಾಟ ಮಾಡಲಾಗಿದೆ.. ಇವುಗಳನ್ನ ಶೈಲೇಶ್ವರ ಕಾಟನ್ ಟ್ರೇಡರ್ಸ್, ರೇಣುಕಾ ಟ್ರೇಡರ್ಸ್, ಶ್ರೀನಾಥ್ ಇಂಡಸ್ಟ್ರೀಸ್ ಹಾಗೂ ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಗೆ ಮಾರಾಟ ಮಾಡಲಾಗಿದೆಯಂತೆ..
ಆದ್ರೆ ಈ ಗೋದಾಮುಗಳನ್ನ APMC ಕಾನೂನಿನಲ್ಲಿ ಮಾರಾಟ ಮಾಡಲು ಅವಕಾಶ ಇಲ್ಲ.. ಅಂಗಡಿ ಹಾಗೂ ಗೋದಾಮು ಹೊಂದಿಕೊಂಡಿದ್ದರೇ ಮಾತ್ರ ಮಾರಾಟ ಮಾಡಬಹುದು.. ಆದ್ರೆ ಇದೇ ನಿಯಮವನ್ನ ದುರುಪಯೋಗಪಡಿಸಿಕೊಂಡು ಈ ನಾಲ್ಕು ಗೋದಾಮುಗಳನ್ನ ಮಾರಾಟ ಮಾಡಲಾಗಿದೆಯಂತೆ. ಸುಮಾರು ಐದು ಕೋಟಿ ಮೌಲ್ಯದ ಗೋದಾಮುಗಳನ್ನ ಕೇವಲ 34 ಲಕ್ಷ, 64 ಲಕ್ಷ, 57 ಲಕ್ಷಕ್ಕೆ ಮಾರಾಟ ಮಾಡಿ ಸರಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದೆ.
Also Read: 156 ವರ್ಷಗಳ ಸರ್ಕಾರಿ ಪ್ರಾಥಮಿಕ ಶಾಲೆ ಈಗ ಮಲ್ಟಿಪ್ಲೆಕ್ಸ್ ಪಾರ್ಕಿಂಗ್ ಗಾಗಿ ನೆಲಸಮ! ಎಲ್ಲಿ?
ಈ ಅಕ್ರಮದಲ್ಲಿ ಏಪಿಎಂಸಿ ಅಧಿಕಾರಿಗಳು, ಆಡಳಿತ ವರ್ಗ ಕಾರಣ.. ಅಧಿಕಾರಿಗಳನ್ನ ಅಮಾನತ್ತು ಮಾಡಿ ಅವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಬೇಕು ಅಂತ ಆಗ್ರಹಿಸಲಾಗಿದೆ..ಮಾರಾಟವಾದ ಒಂದೊಂದು ಗೋದಾಮಿನಿಂದ ಸುಮಾರು 3 ಕೋಟಿಯಷ್ಟು ಕಿಕ್ಬ್ಯಾಕ್ ಪಡೆಯಲಾಗಿದೆ ಅಂತ ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ ಆರೋಪಿಸಿದ್ದಾರೆ.. ಆದ್ರೆ ಯಾವುದೂ ಅಕ್ರಮವಾಗಿಲ್ಲ.. ಖಾಲಿ ಬಿದ್ದಿದ್ದ ಗೋದಾಮುಗಳನ್ನ ಎಸ್ಟಿಮೇಶನ್ ನಂತೆ ಮಾರಾಟ ಮಾಡಲಾಗಿದೆ ಅಂತ ಏಪಿಎಂಸಿ ಸೆಕ್ರೆಟರಿ ಆದಮ್ಮ ಹೇಳ್ತಿದ್ದಾರೆ.
ಅದೆನೇ ಇರ್ಲಿ ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆಯಾಗಿ, ಭ್ರಷ್ಟಾಚಾರ ನಡೆದಿದೆ ಅಂತ ವಿರೂಪಾಕ್ಷ ಖುದ್ದು ಕೃಷಿ ಮಾರುಕಟ್ಟೆ ಉತ್ಪನ್ನಗಳ ಸಚಿವ ಶಿವಾನಂದ್ ಪಾಟೀಲ್ಗೆ ದೂರು ನೀಡಿದ್ದಾರೆ.. ಒಂದು ವೇಳೆ ಕೂಡಲೇ ಗೋದಾಮುಗಳನ್ನ ಮತ್ತೆ ಸ್ವಾಧೀನ ಪಡಿಸಿಕೊಳ್ಳದಿದ್ರೆ, ರೈತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತೆ ಅಂತ ಹೋರಾಟಗಾರರು ಎಚ್ಚರಿಸಿದ್ದಾರೆ.. ಅದೇನೆ ಇರಲಿ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಗೋದಾಮು ಮಾರಾಟದ ಕಿಕ್ಬ್ಯಾಕ್ ಬಗ್ಗೆ ತನಿಖೆ ನಡೆಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:36 am, Sat, 13 January 24