ರಾಯಚೂರು, ಫೆಬ್ರವರಿ 12: ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಜೆಡಿಎಸ್ (JDS) ಶಾಸಕಿ ಕರೆಮ್ಮ ನಾಯಕ್ (Karemma Nayak) ಅವರ ಪುತ್ರ ಸಂತೋಷ್, ಪಿಎ ಇಲಿಯಾಸ್ ಸೇರಿದಂತೆ ಎಂಟು ಜನರು ದೇವದುರ್ಗ ಪೊಲೀಸ್ ಠಾಣೆಯ ಕರ್ತವ್ಯನಿರತ ಕಾನ್ಸ್ಟೇಬಲ್ (Devadurga Police Constable) ಹನುಮಂತರಾಯ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ, ರಾಜಕೀಯ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಹಲ್ಲೆಗೊಳಗಾದ ಕಾನ್ಸ್ಟೇಬಲ್ ಹನುಮಂತರಾಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾನ್ಸ್ಟೇಬಲ್ ಹನುಮಂತರಾಯ ಅವರು ರವಿವಾರ (ಫೆ.11) ರಂದು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದಿದ್ದರು. ಟ್ರ್ಯಾಕ್ಟರ್ ತಡೆಹಿಡಿದ ವಿಚಾರಕ್ಕೆ ಶಾಸಕಿ ಪುತ್ರ ಸಂತೋಷ್ ಕಾನ್ಸ್ಟೇಬಲ್ ಹನುಮಂತರಾಯ ಅವರಿಗೆ ಕರೆ ಮಾಡಿ ಟ್ರ್ಯಾಕ್ಟರ್ ಬಿಡುವಂತೆ ಹೇಳಿದ್ದಾರೆ. ಒತ್ತಡಕ್ಕೆ ಮಣಿಯದ ಕಾನ್ಸ್ಟೇಬಲ್ ಹನುಮಂತರಾಯ ಅವರು ಟ್ರ್ಯಾಕ್ಟರ್ ಅನ್ನು ಪೊಲೀಸ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕಿ ಪುತ್ರ ಸಂತೋಷ್ ಕಾನ್ಸ್ಟೇಬಲ್ ಹನುಮಂತರಾಯ ಅವರನ್ನು ದೇವದುರ್ಗ ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಶಾಸಕಿ ಕರೆಮ್ಮ ನಾಯಕ್ ಪುತ್ರ ಸಂತೋಷ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎ1 ಸಂತೋಷ್, ಎ5 ಶಾಸಕಿ ಪಿಎ ಇಲಿಯಾಸ್ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಹೆಡ್ಕಾನ್ಸ್ಟೇಬಲ್ ಹತ್ಯೆ ಪ್ರಕರಣ, ಆರೋಪಿ ಕಾಲಿಗೆ ಫೈರಿಂಗ್
ಇನ್ನು ಪೊಲೀಸರ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ಬೆಂಬಲಿಗರ ಜೊತೆ ಕಳೆದ ರಾತ್ರಿ ದೇವದುರ್ಗ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಬೇಕಂತಲೆ ಪೊಲೀಸರು ಪಿತೂರಿ ಮಾಡಿ ಈ ರೀತಿ ಆರೋಪ ಮಾಡಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಮುಂದೆ ಬಿಟ್ಟು ಕುತಂತ್ರ ರೂಪಿಸಿದ್ದಾರೆ. ಈ ಕೃತ್ಯ ರಾಜಕೀಯ ಪ್ರೇರಿತ ಎಂದು ಶಾಸಕಿ ಕರೆಮ್ಮ ನಾಯಕ್ ಆರೋಪ ಮಾಡಿದ್ದಾರೆ.
ಕಲಬುರಗಿ: ಕಳೆದ ವರ್ಷ 2023ರ ಜೂನ್ ತಿಂಗಳಿನಲ್ಲಿ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ನಡೆಯುತ್ತಿದ್ದ ದುಷ್ಕರ್ಮಿಗಳು ಭೀಮಾ ನದಿಯಿಂದ ಟ್ರ್ಯಾಕ್ಟರ್ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು. ಇದನ್ನು ತಡೆಯಲು ಹೆಚ್ಸಿ ಮೈಸೂರು ಚೌಹಾಣ್, ಪಿಸಿ ಪ್ರಮೋದ್ ದೊಡ್ಮನಿ ಅವರಿಬ್ಬರು ರಾತ್ರಿ 10 ಗಂಟೆ ಸುಮಾರಿಗೆ ಬೈಕ್ನಲ್ಲಿ ತೆರಳಿದ್ದರು.
ಈ ವೇಳೆ ದುಷ್ಕರ್ಮಿಗಳು ಪೊಲೀಸರಿದ್ದ ಬೈಕ್ ಮೇಲೆ ಮರಳು ಟ್ರ್ಯಾಕ್ಟರ್ ಹತ್ತಿಸಿದ್ದರು. ನೆಲೋಗಿ ಠಾಣೆ ಹೆಡ್ಕಾನ್ಸ್ಟೇಬಲ್ ಮೈಸೂರು ಚೌಹಾಣ್ (51) ಸ್ಥಳದಲ್ಲೇ ಮೃಪಟ್ಟರು. ಇನ್ನು ಕಾನ್ಸ್ಟೇಬಲ್ ಪ್ರಮೋದ್ ದೊಡ್ಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಸಿದ್ದಪ್ಪ, ಸಾಯಿಬಣ್ಣನನ್ನು ನೆಲೋಗಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇಬ್ಬರೂ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:30 am, Mon, 12 February 24