ಚಿರತೆ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗೆ ​ಖಂಡ್ರೆ ಖಡಕ್​ ಸೂಚನೆ, ಕಠಿಣ ಕ್ರಮದ ಎಚ್ಚರಿಕೆ

ರವಿವಾರ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳು ಗ್ರಾಮದಲ್ಲಿ ನಾಲ್ವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಿ ಶೀಘ್ರದಲ್ಲೆ ವರದಿ ನೀಡುವಂತೆ ಸಚಿವ ಈಶ್ವರ್​ ಖಂಡ್ರೆ ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಚಿರತೆ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗೆ ​ಖಂಡ್ರೆ ಖಡಕ್​ ಸೂಚನೆ, ಕಠಿಣ ಕ್ರಮದ ಎಚ್ಚರಿಕೆ
ಸಚಿವ ಈಶ್ವರ್​ ಖಂಡ್ರೆ
Follow us
|

Updated on:Jul 08, 2024 | 8:14 AM

ಬೆಂಗಳೂರು, ಜುಲೈ 08: ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಕಮದಾಳು ಗ್ರಾಮದಲ್ಲಿ ಚಿರತೆಯನ್ನು (Leopard) ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಸಂಪೂರ್ಣ ವರದಿ ನೀಡುವಂತೆ ಸಚಿವ ಈಶ್ವರ್​ ಖಂಡ್ರೆ (Ehswar Kahandre) ಅರಣ್ಯ ಇಲಾಖೆ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಅರಣ್ಯ ಸಿಬ್ಬಂದಿ ಸಮ್ಮುಖದಲ್ಲೇ ಸಾರ್ವಜನಿಕರು ಚಿರತೆ ಕೊಂದಿದ್ದಾರೆ. ಚಿರತೆ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯುಂಟು ಚಿರತೆಯನ್ನು ಸೆರೆಹಿಡಿಯಲು ಹಾಗೂ ಚಿರತೆಯ ಹತ್ಯೆ ತಡೆಯಲು ವಿಫಲವಾದ ಕುರಿತು ಶೀಘ್ರವಾಗಿ ಇಲಾಖೆ ವತಿಯಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಶೀಘ್ರವಾಗಿ ವರದಿ ಸಲ್ಲಿಸುವಂತೆ ಹೇಳಿದ್ದಾರೆ.

ದೇವದುರ್ಗ ವಲಯದ ಚಿರತೆ ಹತ್ಯೆ

ರವಿವಾರ (ಜು.07) ಬೆಳಗ್ಗೆ 9.30 ದೇವದುರ್ಗ ತಾಲೂಕು ಕಮಾದಳ್ ಗ್ರಾಮದಲ್ಲಿ ಚಿರತೆ ಓರ್ವನ ಮೇಲೆ ದಾಳಿ ಮಾಡಿತ್ತು. ವಿಚಾರ ತಿಳಿದು ಅರಣ್ಯ ಇಲಾಖೆ ವಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಠಾಣದ ಪಕ್ಕದ ಕಲ್ಲು ಬಂಡೆ ಇರುವ ಗುಡ್ಡದಲ್ಲಿ ಚಿರತೆ ಇರುವ ಬಗ್ಗೆ ಖಾತರಿ ಪಡಿಸಿಕೊಂಡಿದ್ದರು. ಚಿರತೆ ಇರುವ ಮಾಹಿತಿ ತಿಳಿದು ಸುತ್ತಮುತ್ತಲಿನ ಗ್ರಾಮದ ಜನರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಚಿರತೆ ಮೂರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಪೋಲೀಸರು ಬಂದಿದ್ದರು.

ಇದನ್ನೂ ಓದಿ:  ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ

ಸಿ.ಪಿ.ಐ ಮತ್ತು ಕಂದಾಯ ಇಲಾಖೆಯ ತಹಸಿಲ್ದಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮತ್ತೊಮ್ಮೆ ಚಿರತೆಯ ಓಡಾಟ ಕಂಡುಬಂದಿತ್ತು. ಈ ವೇಳೆ ಮಾನ್ವಿ ವಲಯದ ಸಿಬ್ಬಂದಿಗಳನ್ನೂ ಕರೆಯಿಸಲಾಗಿತ್ತು. ಅಷ್ಟು ಹೊತ್ತಿಗೆ ವಿಷಯ ತಿಳಿದು ಸಾವಿರಾರು ಜನರು ಗುಡ್ಡದ ಸುತ್ತಾ ಜಮಾಯಿಸಿದ್ದರು. ಮಾನ್ವಿ ವಲಯದಲ್ಲಿ ಲಭ್ಯವಿದ್ದ ಬೊನ್ ಅನ್ನು ಚಿರತೆ ಸೆರೆಹಿಡಿಯಲು ತರಿಸಿ ಸ್ಥಳದಲ್ಲಿ ಅಳವಡಿಸಲಾಗಿತ್ತು ಮತ್ತು ಬಲೆಯನ್ನೂ ಅಳವಡಿಸಲಾಗಿತ್ತು. ನಂತರ ದೇವದುರ್ಗ ಶಾಸಕರು ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಕರಣದ ಎಲ್ಲ ಬೆಳವಣಿಗೆಗಳ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪಡೆದಿದ್ದರು. ಅರವಳಿಕೆ ತಜ್ಞರ ತಂಡಕ್ಕೂ ಮಾಹಿತಿ ನೀಡಲಾಗಿತ್ತು.

ಸ್ಥಳದಲ್ಲಿ ಜಮಾಯಿಸಿದ ಸಾವಿರಾರು ಸಂಖ್ಯೆಯ ಜನರನ್ನು ನಿಯಂತ್ರಿಸಲು ಪೋಲೀಸರು ಹರಸಾಹಸಪಡುತ್ತಿದ್ದರು. ಕೊನೆಗೆ ಸಾಯಂಕಾಲದ ಹೊತ್ತಿಗೆ ಉದ್ವೇಗಗೊಂಡ ಜನರು ಚಿರತೆ ಇರುವ ಸ್ಥಳಕ್ಕೆ ಜನರು ನುಗ್ಗಿ ಅದನ್ನು ಕೋಲು ಮತ್ತು ಆಯುಧದಿಂದ ಹೊಡೆದು ಕೊಂದುಹಾಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Mon, 8 July 24