ರಾಯಚೂರು, ಮಾರ್ಚ್ 04: ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಮಲ್ಕಂದಿನ್ನಿ ಗ್ರಾಮದ ಕೂಲಿ ಕಾರ್ಮಿಕನಾಗಿರುವ ಆಂಜನೇಯ ಎಂಬುವರು ಕೂಲಿ ಹಣದಿಂದ ತಮ್ಮ ಸ್ವಗ್ರಾಮದ 8ನೇ ತರಗತಿಯ 11 ವಿದ್ಯಾರ್ಥಿಗಳಿಗೆ ಹೀರೊ ಸೈಕಲ್‌ಗಳನ್ನು (Cycle) ಕೊಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೇವದುರ್ಗ ತಾಲ್ಲೂಕಿನ ಮಲ್ಕಂದಿನ್ನಿ ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದಿರುವುದರಿಂದ ಪ್ರೌಢ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಸುಮಾರು 5 ಕಿ.ಮೀ. ದೂರದಲ್ಲಿರುವ ಹೇಮನೂರಿಗೆ ಕಾಲ್ನಡಿಗೆ ಮೂಲಕ ಹೋಗುತ್ತಾರೆ. ಪ್ರತಿದಿನ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಆಂಜನೇಯ, ನಿತ್ಯ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರು. ಕೊನೆಗೆ 11 ಸೈಕಲ್ ಖರೀದಿಸಿ ಶಾಲೆಗೆ ತೆರಳಿ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂದ ಚಿತ್ರದುರ್ಗದ ಆಟೋ ಚಾಲಕನ ಮಗಳೀಗ ನ್ಯಾಯಾಧೀಶೆ !
ಪ್ರೌಢಶಾಲೆ ಇಲ್ಲ, ಜೊತೆಗೆ ಬಸ್ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡು ಹೋಗಲಾಗದೆ ಸಾಕಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರ ಉಳಿದಿರುವ ಉದಾಹರಣೆಗಳು ಇವೆ. ನಮ್ಮ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ನನ್ನ ಈ ಅಲ್ಪ ಸೇವೆಯಿಂದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಲಿ ಅಂತ ಸೈಕಲ್ ಕೊಡಿಸಿದ್ದೇನೆ ಎಂದು ಕಾರ್ಮಿಕ ಆಂಜನೇಯ ಟಿವಿ9ಗೆ ತಿಳಿಸಿದ್ದಾರೆ.
ದೇವದುರ್ಗ ತಾಲ್ಲೂಕಿನಲ್ಲಿರುವ 186 ಕಂದಾಯ ಗ್ರಾಮಗಳು, 50ಕ್ಕೂ ಹೆಚ್ಚು ತಾಂಡಾಗಳು ಹಾಗೂ 30 ಕ್ಕು ಹೆಚ್ಚು ದೊಡ್ಡಿಗಳಿವೆ. ಅವುಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳಿಗೆ ಇಂದಿಗೂ ಬಸ್ ವ್ಯವಸ್ಥೆ ಇಲ್ಲ. ಇದರಿಂದ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Mon, 4 March 24