
ರಾಯಚೂರು, (ಜನವರಿ 20): ಅಕ್ರಮ ಮರಳು ದಂಧೆ (illegal sand mining )ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ದೇವದುರ್ಗ (Devadurga) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ (Karemma Nayak) ಮನೆಗೆ ನುಗ್ಗಿ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ. ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲಿಸರಿಗೆ ಶಾಸಕಿ ಕರೆಮ್ಮ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಪೊಲೀಸರು, ಅಕ್ರಮ ಮರಳು ದಂಧೆ ಮೇಲೆ ದಾಳಿ ಮಾಡಿದ್ದು, ಜೆಸಿಬಿ,ಟಿಪ್ಪರ್, ಟ್ರಾಕ್ಟರ್ ಗಳು ಸೇರಿದಂತೆ ಏಳು ವಾಹನಗಳನ್ನು ಜಪ್ತಿ ಮಾಡಿ ಕೇಸ್ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡ ದಂಧೆಕೋರರು ಶಾಸಕಿ ಕರೆಮ್ಮ ನಿವಾಸಕ್ಕೆ ನುಗ್ಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಸ್ವತಃ ಶಾಸಕಿ ಕರೆಮ್ಮ ಆರೋಪಿಸಿದ್ದು, ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕರೆಮ್ಮ ಗೆದ್ದ ಮೇಲಿಂದಲೂ ಸಹ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರುತ್ತಲೇ ಬಂದಿದ್ದಾರೆ. ಈ ಸಂಬಂಧ ದೇವದುರ್ಗ ಠಾಣೆಯಲ್ಲಿ ಏಳು ಪ್ರತ್ಯೇಕ ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣ ಸಂಬಂಧ ಪೊಲೀಸರು ಜನವರಿ 18ರಂದು ಜೆಸಿಬಿ,ಟಿಪ್ಪರ್,ಟ್ರಾಕ್ಟರ್ ಗಳು ಸೇರಿ ಏಳು ವಾಹನಗಳನ್ನು ಜಪ್ತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ದಂಧೆಕೋರರು, ಶಾಸಕಿ ಕರೆಮ್ಮ ಮನೆಗೆ ನುಗ್ಗಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಶಾಸಕಿ ಕರೆಮ್ಮ ಸಹ ರಾಯಚೂರು ಎಸ್ ಪಿ ಅರುಣಾಂಗ್ಷುಗಿರಿ ಅವರಿಗೆ ದೂರು ನೀಡಿದ್ದು, ಬೆದರಿಕೆ ಹಾಕಿರುವವರು ಹಾಗೂ ಅಕ್ರಮ ಮರಳು ದಂಧೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟಿವಿ9ಗೆ ಶಾಸಕಿ ಕರೆಮ್ಮಾ ನಾಯಕ್ ಪ್ರತಿಕ್ರಿಯಿಸಿದ್ದು, ನಿರಂತರವಾಗಿ ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕ್ಕೆ ಸೂಚಿಸುತ್ತಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಪೊಲೀಸರು ಅಕ್ರಮ ಮರಳು ದಂಧೆ ಬಗ್ಗೆ ಕ್ರಮಕೈಗೊಂಡಿದ್ದಾರೆ. ಹೀಗಾಗಿ ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬಗ್ಗೆ ನನ್ನ ಬೆಂಬಲಿಗರೊಬ್ಬರು ದೇವದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಶಿವನಗವಡ ನಾಯಕ್ ಅವರನ್ನು ಕರೆಮ್ಮ ಮಣಿಸಿದ್ದು, ಅಂದಿನಿಂದಲೂ ಇಬ್ಬರ ನಡುವೆಯೂ ಒಂದಲ್ಲ ಒಂದು ಕಾರಣಕ್ಕೆ ರಾಜಕೀಯ ಕಿತ್ತಾಟಗಳು ನಡೆಯುತ್ತಲೇ ಇವೆ. ಅದರಲ್ಲೂ ಮುಖ್ಯವಾಗಿ ಶಿವನಗೌಡ ನಾಯಕ್ ಬೆಂಬಲಿಗರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಪೊಲೀಸರು ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಈ ಹಿಂದೆಯೇ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಸಂಬಂಧ ಪ್ರತಿಭಟನೆ ಸಹ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.