ರಾಯಚೂರು: ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ಸರ್ಕಾರದ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಅವರ ಸಂಬಂಧಿಯಾದ ಡಿ.ಸಿ.ತಮ್ಮಣ್ಣ (DC Tamanna) ವಿರುದ್ಧ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ (SR Hiremath) ವಾಗ್ದಾಳಿ ನಡೆಸಿದರು. ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಡಿಸಿ ತಮ್ಮಣ್ಣ ಹಾಗೂ ಹೆಚ್.ಡಿ ದೇವೆಗೌಡರ ನಾದಿನಿ ಸಾವಿತ್ರಮ್ಮ 20 ಎಕರೆ ಮತ್ತು ಹೆಚ್ ಡಿ ಕುಮಾರಸ್ವಾಮಿ 20 ಎಕರೆ ಭೂಮಿ ಕಬಳಿಸಿದ್ದಾರೆ ಎಂದು ಹೇಳಿದರು.
ಇದು ತುಂಬಾ ಅನ್ಯಾಯ, ಇದು ಸಂವಿಧಾನ ವಿರೋಧಿ. ಈ ಹಿಂದೆ ತನಿಖೆ ನಡೆಸಿ ಲೋಕಾಯುಕ್ತ ನಮ್ಮ ಪರವಾಗಿ ತೀರ್ಪು ಕೊಟ್ಟಿತ್ತು. ಆದರೆ ಅದನ್ನು ಯಾರೂ ಜಾರಿಗೆ ತರಲು ತಯಾರಿಲ್ಲ. ಅಷ್ಟೊಂದು ಪ್ರಭಾವವಿದೆ.
2020ರಲ್ಲಿ ಹೈಕೋರ್ಟ್ ಲೋಕಾಯುಕ್ತ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಇವರಿಂದ ಆ ಭೂಮಿಯನ್ನು ವಾಪಸ್ ತೆಗೆದುಕೊಳ್ಳಬೇಕು. ಆದರೆ ಅಧಿಕಾರಿಗಳು ಜಮೀನು ಪಡೀತಿಲ್ಲ. ಅದಕ್ಕೆ ನಾವು ಕಂಟೆಂಪ್ಟ್ ಹಾಕಿದ್ದೀವಿ, ಇನ್ನೂ ನಡೆಯುತ್ತಿದೆ. ಇಂದಲ್ಲ ನಾಳೆ ಗೊಮಾಳ ಜಾಗ ವಾಪಸ್ ಪಡಿತಿವಿ ಎಂದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ಸೇರಿ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 14 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಕಂದಾಯ ಇಲಾಖೆಗೆ ಲೋಕಾಯುಕ್ತ 2014ರಲ್ಲಿ ಆದೇಶಿಸಿತ್ತು.
ಇದನ್ನೂ ಓದಿ: ಕರ್ನಾಟಕದಲ್ಲೂ ಸೃಷ್ಟಿಯಾಗ್ತಾರಾ ಅಜಿತ್ ಪವಾರ್? ಹೆಚ್ ಡಿ ಕುಮಾರಸ್ವಾಮಿ ಮಾತಿನ ಮರ್ಮವೇನು?
ಲೋಕಾಯುಕ್ತರ ಆದೇಶವನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಆದರೆ, ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ದೂರಿ ಎಸ್ ಆರ್ ಹಿರೇಮಠ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಜು.03 ರಂದು ಹೈಕೋರ್ಟ್ ಒಂದು ವಾರದಲ್ಲಿ ನ್ಯಾಯಾಲಯದ ಆದೇಶ ಕುರಿತು ಅನುಪಾಲನಾ ವರದಿ ಸಲ್ಲಿಸಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Mon, 31 July 23