ರಾಯಚೂರು: ಮನೆ ಖಾಲಿ ಮಾಡು ಎಂದ ಮಾಲೀಕಿಯನ್ನೇ ಕೊಂದ ಬಾಡಿಗೆದಾರ, ಕೊಲೆ ಸುಳಿವು ಸಿಕ್ಕಿದ್ದೇ ರೋಚಕ
ಬಾಡಿಗೆ ಮನೆಯಲ್ಲಿದ್ದ ಶಿವು ಎಂಬ ಆರೋಪಿಯನ್ನು ಬಾಕಿ ಇರುವ ಮನೆ ಬಾಡಿಗೆ ಕೊಟ್ಟು ಮನೆ ಖಾಲಿ ಮಾಡುವಂತೆ ಮನೆ ಮಾಲೀಕೆ ಹೇಳಿದ್ದರು. ಇದಕ್ಕೆ ಕೋಪಗೊಂಡ ಆರೋಪಿ ಆಕೆ ಮಲಗಿದ್ದ ವೇಳೆ ಕೊಲೆ ಮಾಡಿ ಆಕೆಯ ಚಿನ್ನಾಭರಣಗಳನ್ನು ದೋಚಿದ್ದಾನೆ. ಅಷ್ಟೇ ಅಲ್ಲದೆ ಕುಟುಂಬಸ್ಥರೊಂದಿಗೆ ಸೇರಿ ಮನೆ ಸ್ವಚ್ಛತಾಕಾರ್ಯದಲ್ಲೂ ಭಾಗಿಯಾಗಿದ್ದಾನೆ. ಸದ್ಯ ಇದೀಗ ಆರೋಪಿ ಬಣ್ಣ ಬಯಲಾಗಿದೆ.
ರಾಯಚೂರು, ಸೆ.28: ಬೆಂಗಳೂರಿನ ವೈಯಾಲಿಕಾವಲಿನಲ್ಲಿ ನಡೆದ ಮಹಾಲಕ್ಷ್ಮೀಯ ಭೀಕರ ಕೊಲೆ (Bengaluru Woman Murder) ಬಳಿಕ ಬೆಂಗಳೂರಿನ ಮನೆ ಮಾಲೀಕರು ಬ್ಯಾಚುಲರ್ಸ್ಗಳಿಗೆ ಮನೆ ಕೊಡಲು ಆತಂಕ ಪಡುವಂತಾಗಿದೆ. ಇದರ ನಡುವೆ ರಾಯಚೂರಿನಲ್ಲಿ ಮತ್ತೊಂದು ದುರ್ಘಟನೆ ನಡೆದಿದ್ದು ಪ್ರತಿಯೊಬ್ಬ ಮನೆ ಮಾಲೀಕರೂ ಬಾಡಿಗೆಗೆ ಮನೆ ಕೊಡುವ ಮುನ್ನ ಸಾವಿರಾರು ಬಾರಿ ಯೋಚಿಸಬೇಕಾಗಿದೆ. ಬ್ಯಾಚುಲರ್ಸ್ಗೆ ಬಾಡಿಗೆ ಮನೆ ನೀಡುವ ಮನೆ ಮಾಲೀಕರೇ ಹುಷಾರ್. ಬಾಡಿಗೆ ಬಾಕಿ ಹಣ ಕೇಳಿ, ಮನೆ ಖಾಲಿ ಮಾಡು ಅಂದಿದ್ದಕ್ಕೆ ಮನೆ ಮಾಲೀಕಿಯನ್ನೇ ಕೊಂದ (Murder) ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಉದಯ್ ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಶಿವು ಎಂಬ ಆರೋಪಿ, ಮನೆ ಮಾಲೀಕಿಯನ್ನೇ ಕೊಂದು ಆಕೆಯ ಚಿನ್ನಾಭರಣ ಕದ್ದು ಬಳಿಕ ಆಕೆಯ ಮೃತದೇಹ ಸ್ವ ಗ್ರಾಮಕ್ಕೆ ಶಿಫ್ಟ್ ಆಗೋ ವರೆಗೆ ಬೆಳಿಗ್ಗೆ ಯಿಂದ ಸಂಜೆ ವರೆಗೂ ಕುಟುಂಬಸ್ಥರ ಜೊತೆಗಿದ್ದ. ನಂತರ ತನ್ನ ಊರಿಗೆ ಹೋಗಿದ್ದ. ಮಾರನೇ ದಿನ ಮೃತಳ ಕುಟುಂಬಸ್ಥರೊಂದಿಗೆ ತಾನೇ ಖುದ್ದು ಮನೆ ಒಡತಿ ಮನೆ ಸ್ವಚ್ಛಗೊಳಿಸಿದ್ದ. ಈ ಮೂಲಕ ಪ್ರಕರಣದ ಬಗ್ಗೆ ಆಗುತ್ತಿರೊ ಬೆಳವಣಿಗೆಗಳನ್ನ ಗಮನಿಸಿದ್ದ. ಸದ್ಯ ಪಶ್ಚಿಮ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಸ್ವಂತ ಮನೆಯಲ್ಲಿ ಬಾಡಿಗೆಗೆ ಕೊಟ್ಟು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದ ಮನೆ ಮಾಲೀಕಿ ಶೋಭಾ ಪಾಟೀಲ್(60) ಅವರು ಆರೋಪಿ ಶಿವುಗೆ ಬಾಡಿಗೆ ಬಾಕಿ ಹಣ ಕೇಳಿ, ಮನೆ ಖಾಲಿ ಮಾಡು ಎಂದಿದ್ದರು. ಇದಕ್ಕೆ ದ್ವೇಷಕಾರಿದ್ದ ಶಿವು, ಸೆಪ್ಟೆಂಬರ್21ರ ರಾತ್ರಿ ಮನೆ ಮಾಲೀಕಿ ಮಲಗಿದ್ದ ವೇಳೆ ಮುಖಕ್ಕೆ ದಿಂಬಿನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಆಕೆಯ ಚಿನ್ನಾಭರಣ ದೋಚಿದ್ದ. ಮರು ದಿನ ಸೆಪ್ಟೆಂಬರ್ 22ರ ಬೆಳಿಗ್ಗೆ ಕುಟುಂಬಸ್ಥರು ಪೋನ್ ಮಾಡಿದ್ದು ಆಕೆ ಫೋನ್ ರಿಸೀವ್ ಮಾಡದೇ ಇದ್ದಾಗ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಸಂಬಂಧಿಕರು ಮನೆ ಬಳಿ ಬಂದಾಗ ಆರೋಪಿ ಶಿವು ಅಮಾಯಕನಂತೆ ನಟಿಸಿದ್ದ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶೋಭಾ ಅವರದು ಸಹಜ ಸಾವೆಂದು ಮನೆಯವರೆಲ್ಲ ಶೋಭಾರ ಅಂತ್ಯಸಂಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಮೊಬೈಲ್, ಚಿನ್ನಾಭರಣ ಕಳುವು; ಮೂಡಿದ ಅನುಮಾನ
ಶೋಭಾರ ಅಂತ್ಯಸಂಸ್ಕಾರಕ್ಕೂ ಮುನ್ನ ಆರೋಪಿ ಶಿವು ಕೂಡ ಕುಟುಂಬಸ್ಥರೊಂದಿಗೆ ಸೇರಿ ಎಲ್ಲಾ ಕಾರ್ಯಗಳಲ್ಲೂ ಸಾಥ್ ನೀಡಿದ್ದ. ಮನೆ ಸ್ವಚ್ಛಗೊಳಿಸಿ ಅನುಮಾನ ಬಾರದಂತೆ ನಟಿಸಿದ್ದ. ಅಂತ್ಯಸಂಸ್ಕಾರ ಮುಗಿದ ಬಳಿಕ ಸೆಪ್ಟೆಂಬರ್ 23ರಂದು ಮನೆ ಸ್ವಚ್ಛಗೊಳಿಸಿ, ಮೃತಳ ಚಿನ್ನಾಭರಣ ಹುಡುಕಾಟ ನಡೆಸಲಾಗಿದೆ. ಮೃತ ಶೋಭಾರ ಮೊಬೈಲ್ ಫೋನ್, ಚಿನ್ನದ ಸರ, ಓಲೆ ಕಾಣದೇ ಇದ್ದಾಗ ಕುಟುಂಬಸ್ಥರಿಗೆ ಅನುಮಾನ ಮೂಡಿದೆ.
ಬಳಿಕ ಸೆಪ್ಟೆಂಬರ್ 24ರಂದು ಕುಟುಂಬಸ್ಥರು ಮನೆ ಪಕ್ಕದ ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಆಗ ಸೆಪ್ಟೆಂಬರ್21ರ ರಾತ್ರಿ ಶೋಭಾರನ್ನ ಹತ್ಯೆಗೈದಿದ್ದ ಶಿವು ಮನೆ ಒಳಗೆ, ಹೊರಗೆ ಓಡಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರ ಆಧಾರದ ಮೇಲೆ ಸೆಪ್ಟೆಂಬರ್25 ರಂದು ಕುಟುಂಬಸ್ಥರು ಪಶ್ಚಿಮ ಠಾಣೆ ಪೊಲೀಸರಿಗೆ ದೂರು ನೀಡಿದ್ದು ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ನಿನ್ನೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಸದ್ಯ ಕೊಲೆ ದೃಢಪಟ್ಟ ಹಿನ್ನೆಲೆ ಅಂತ್ಯಸಂಸ್ಕಾರ ಮಾಡಲಾದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:16 am, Sat, 28 September 24