ಮಂತ್ರಾಲಯದ ಬಳಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ; ರಾಯರ ಭಕ್ತರು ನದಿ ದಂಡೆಗೆ ತೆರಳದಂತೆ ಕಟ್ಟೆಚ್ಚರ
ನದಿ ನೀರು ಹೆಚ್ಚಾದ ಕಾರಣ ಹಾವು ಸೇರಿದಂತೆ ಹಲವು ಜಲಚರಗಳು ನದಿ ದಂಡೆಯಲ್ಲಿ ಪ್ರತ್ಯಕ್ಷವಾಗಿದ್ದು, ಸಿಂಧನೂರ, ಮಾನವಿ ಮತ್ತು ರಾಯಚೂರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರವಾಹ ಆತಂಕ ಶುರುವಾಗಿದೆ.
ರಾಯಚೂರು: ತುಂಗಭದ್ರಾ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ, ರಾಯಚೂರು ಜಿಲ್ಲೆಯ ತುಂಗಭದ್ರಾ ನದಿ ದಂಡೆ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಮಂತ್ರಾಲಯದ ಬಳಿ ಅಪಾಯದ ಮಟ್ಟ ಮೀರಿ ನದಿ ಹರಿಯುತ್ತಿದ್ದು, ರಾಯರ ಭಕ್ತರು ನದಿ ದಂಡೆಗೆ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದೆ. ನದಿ ನೀರು ಹೆಚ್ಚಾದ ಕಾರಣ ಹಾವು ಸೇರಿದಂತೆ ಹಲವು ಜಲಚರಗಳು ನದಿ ದಂಡೆಯಲ್ಲಿ ಪ್ರತ್ಯಕ್ಷವಾಗಿದ್ದು, ಸಿಂಧನೂರ, ಮಾನವಿ ಮತ್ತು ರಾಯಚೂರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರವಾಹ ಆತಂಕ ಶುರುವಾಗಿದೆ. ಅಪಾಯದ ಮುನ್ನೆಚ್ಚರಿಕೆ ಅರಿತು ನದಿ ತೀರದ ಗ್ರಾಮಗಳಲ್ಲಿ ಕಂದಾಯ ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ರಾಯರ ಏಕಶಿಲಾ ಬೃಂದಾವನ ಜಲಾವೃತ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಏಕಶಿಲಾ ಬೃಂದಾವನ ಜಲಾವೃತವಾಗಿದೆ. ತುಂಗಭದ್ರಾ ನದಿ ನೀರು ಜಪದಕಟ್ಟೆ ಸುತ್ತವರಿದಿದೆ.
ಬಾಗಲಕೋಟೆ: ಮಳೆ ಕಡಿಮೆಯಾದರೂ ಪ್ರವಾಹ ತಗ್ಗಿಲ್ಲ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರೂಗಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು, ಸುಮಾರು 800 ಎಕರೆಯಷ್ಟು ಕಬ್ಬು ಬೆಳೆ ನೀರು ಪಾಲಾಗಿದೆ. ಬೆಳೆ ನಾಶದಿಂದ ಬೇಸರಗೊಂಡ ಈ ಭಾಗದ ರೈತರು, ನೀರಿನಲ್ಲಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.
ಚಿಕ್ಕಪಡಸಲಗಿ ಬಳಿಯ ಕೃಷ್ಣಾ ನದಿ ಸೇತುವೆ ಜಲಾವೃತ ಕೃಷ್ಣಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬಳಿಯ ಕೃಷ್ಣಾ ನದಿ ಸೇತುವೆ ಜಲಾವೃತವಾಗಿದೆ. ಹೀಗಾಗಿ ಧಾರವಾಡ-ವಿಜಯಪುರ ಮಾರ್ಗದಲ್ಲಿ ರಸ್ತೆ ಸಂಚಾರ ಸ್ಥಗಿತವಾಗಿದ್ದು, ಬ್ಯಾರಿಕೇಡ್ ಹಾಕಿ ಪೊಲೀಸರು ರಸ್ತೆ ಬಂದ್ ಮಾಡಿದ್ದಾರೆ.
ಇದನ್ನೂ ಓದಿ:
ಬೆಳಗಾವಿಯಲ್ಲಿ ಮುಂದುವರಿದ ಪ್ರವಾಹ ಭೀತಿ; ಗ್ರಾಮವೊಂದರಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತ
Published On - 11:14 am, Tue, 27 July 21