ಕರ್ನಾಟಕದಲ್ಲಿ ಮುಂದುವರಿದ ಮಳೆ: ಧಾರವಾಡ, ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ, ಉತ್ತರ ಕನ್ನಡದಲ್ಲಿ ಭೂ ಕುಸಿತದ ಆತಂಕ

ಕರ್ನಾಟಕದಲ್ಲಿ ಮುಂದುವರಿದ ಮಳೆ: ಧಾರವಾಡ, ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ, ಉತ್ತರ ಕನ್ನಡದಲ್ಲಿ ಭೂ ಕುಸಿತದ ಆತಂಕ
ಬೆಂಗಳೂರಿನಲ್ಲಿ ಇನ್ನೂ ಐದು ದಿನ ಮಳೆ ಮುಂದುವರಿಯಲಿದೆ

ಕಾರವಾರ ಜಿಲ್ಲೆಯ ಐದು ಕಡೆ ಭೂ ಕುಸಿತದ ಸಾಧ್ಯತೆಯಿದೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಜಿಲ್ಲಾಡಳಿತವನ್ನು ಎಚ್ಚರಿಸಿದೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

May 20, 2022 | 7:31 AM

ಬೆಂಗಳೂರು: ಕರ್ನಾಟಕದಲ್ಲಿ ಮಳೆ (Karnataka Rain) ಮುಂದುವರಿದಿದ್ದು, ಇನ್ನೂ 5 ದಿನ ಭಾರೀ ಮಳೆಯಾಗುವ (Heavy Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Weather Update) ಹೇಳಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಾಸನ, ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ. ರಾಜ್ಯದ ಒಟ್ಟು 16 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಇದೆ. ಬೆಂಗಳೂರು ನಗರದಲ್ಲಿ ಇಂದೂ ಸಹ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಾವಣಗೆರೆ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಭೂ ಕುಸಿತದ ಆತಂಕ

ಕಾರವಾರ: ಜಿಲ್ಲೆಯಾದ್ಯಂತ ನಿನ್ನೆ (ಮೇ 19) ಸಂಜೆಯಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ನಿರಂತರ ಮಳೆಗೆ ಜನ ಜೀವನ ತತ್ತರಿಸಿದೆ. ಜಿಲ್ಲೆಯ ಐದು ಕಡೆ ಭೂ ಕುಸಿತದ ಸಾಧ್ಯತೆಯಿದೆ ಎಂದು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (Geological Survey of India – GSI) ಜಿಲ್ಲಾಡಳಿತವನ್ನು ಎಚ್ಚರಿಸಿದೆ. ಕಳಚೆ, ಅರಬೈಲ್ ಘಾಟ್, ಅಣಸಿ ಘಾಟ್, ಜಾಜಿಗುಡ್ಡ, ಸಿದ್ದಾಪುರ ತಾಲೂಕಿನ ವಿವೇಕಾನಂದ ನಗರ, ಕಾನಸೂರು ಪ್ರದೇಶದಲ್ಲಿ ಭೂ ಕುಸಿತದ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತಕ್ಕೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಹೇಳಿದೆ.

ದಾವಣಗೆರೆ: ಆಸ್ತಿ ನಷ್ಟ

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಅಪಾರ ಪ್ರಮಾಣ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನ ಜಯಂತಿನಗರ, ಚಿರಡೋಣಿ, ಕೋಟಿಹಾಳ, ಚಿಕ್ಕಕುರುಹಳ್ಳಿ, ಚಿರಡೋಣಿ ಗ್ರಾಮದ 33 ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆಯಿಂದಾಗಿ 1878 ಹೆಕ್ಟೇರ್ ಪ್ರದೇಶದಲ್ಲಿದ್ದ ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ. 65 ಹೆಕ್ಟೇರ್ ಪ್ರದೇಶದ ಅಡಿಕೆ, ತೆಂಗು, ಬಾಳೆಗೆ ಹಾನಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ₹ 5.5 ಕೋಟಿ ಮೌಲ್ಯದ ಬೆಳೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 84 ಮನೆಗಳು ಕುಸಿದಿವೆ. ಈ ಪೈಕಿ 17 ಮನೆಗಳು ಸಂಪೂರ್ಣ, 67 ಭಾಗಶಃ ಕುಸಿದಿವೆ. ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಮಳೆಯಿಂದಾಗಿ ಜಿಲ್ಲೆಯಲ್ಲಿ ₹ 10 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ, ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ‌ ಮಾಹಿತಿ ನೀಡಿದರು.

ಮಳೆ ಮುಂದುವರಿದಿರುವುದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಂಕ್ಲಿಪುರ-ಗುಡದಹಳ್ಳಿ ಸಂಪರ್ಕದ ಸೇತುವೆ ಮುಳುಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಂಕ್ಲಿಪುರದಲ್ಲಿ ಭಾನುವಳ್ಳಿ-ಏಕ್ಕೆಗೊಂದಿ ಸೇತುವೆ ಕೊಚ್ಚಿಹೋಗಿದೆ. ಕೋಟೆಹಾಳ್ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

ಹಾವೇರಿಯಲ್ಲಿ ಶಾಲೆಗಳಿಗೆ ರಜೆ

ಹಾವೇರಿ ಜಿಲ್ಲೆಯಲ್ಲಿಯೂ ರಾತ್ರಿಯಿಂದ ಸತತ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲ ಶಾಲೆಗಳಿಗೆ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ ರಜೆ ಘೋಷಿಸಿದ್ದಾರೆ.

ಕೆಆರ್​ಎಸ್ ಒಳಹರಿವು ಹೆಚ್ಚಳ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ಕೃಷ್ಣರಾಜ ಸಾಗರ (ಕೆಆರ್​ಎಸ್) ಜಲಾಶಯದ ಒಳಹರಿವು ಹೆಚ್ಚಾಗಿದೆ. ನಿನ್ನೆಗೆ ಹೋಲಿಸಿದರೆ ಒಳಹರಿವು 2 ಸಾವಿರ ಕ್ಯೂಸೆಕ್​ಗಳಷ್ಟು ಹೆಚ್ಚಾಗಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಇಂದು 102.30 ಅಡಿಗಳಷ್ಟು ನೀರಿನ ಸಂಗ್ರಹವಿದೆ. ಒಳಹರಿವು 15,922 ಕ್ಯೂಸೆಕ್, ಹೊರಹರಿವು 6,269 ಕ್ಯೂಸೆಕ್ ಇದೆ.

ಇನ್ನಷ್ಟು ಮಳೆಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada