ಹಾವೇರಿ: ಮಳೆರಾಯನ ಅವಾಂತರಕ್ಕೆ ಕೆರೆಯಂತಾದ ಮೆಣಸಿನಕಾಯಿ ಬೆಳೆದ ಜಮೀನು
ರೈತ ಮಲ್ಲಪ್ಪ ಬಡಿಗೇರ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಮೆಣಸಿನಕಾಯಿ ಸಸಿಗಳು, ಗೊಬ್ಬರ, ಆಳು ಅದು ಇದು ಎಂದು ಮೆಣಸಿನಕಾಯಿ ಸುಮಾರು ಅರವತ್ತು ಸಾವಿರ ರುಪಾಯಿ ಖರ್ಚು ಮಾಡಿದ್ದರು. ಆದರೆ ನಿನ್ನೆ (ಮೇ 26) ಸಂಜೆ ಸುರಿದ ಮಳೆ ರೈತ ಮಲ್ಲಪ್ಪನ ಜಮೀನನ್ನು ಅಕ್ಷರಶಃ ಕೆರೆಯಂತೆ ಮಾಡಿದೆ.
ಹಾವೇರಿ: ಕೊರೊನಾ ಲಾಕ್ಡೌನ್ನಿಂದಾಗಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ರೈತರು ಬೆಳೆದ ಬದನೆಕಾಯಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಮಾರಾಟ ಮಾಡಲಾಗದೆ ರೈತರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಒಂದು ಗಂಟೆ ಕಾಲ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವೆಡೆ ಮೆಣಸಿನಕಾಯಿ ಬೆಳೆದ ರೈತರನ್ನು ಚಿಂತೆಗೆ ಈಡುಮಾಡಿದೆ. ಅದಕ್ಕೊಂದು ನಿದರ್ಶನ ಜಿಲ್ಲೆಯ ಹಾನಗಲ್ ತಾಲೂಕಿನ ಹೆರೂರು ಗ್ರಾಮದ ರೈತನ ಸ್ಥಿತಿ.
ಕೆರೆಯಂತಾದ ಜಮೀನು ಹೆರೂರು ಗ್ರಾಮದ ರೈತ ಮಲ್ಲಪ್ಪ ಬಡಿಗೇರ ಎಂಬುವವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಮೆಣಸಿನಕಾಯಿ ಸಸಿಗಳು, ಗೊಬ್ಬರ, ಆಳು ಅದು ಇದು ಎಂದು ಮೆಣಸಿನಕಾಯಿ ಸುಮಾರು ಅರವತ್ತು ಸಾವಿರ ರುಪಾಯಿ ಖರ್ಚು ಮಾಡಿದ್ದರು. ಆದರೆ ನಿನ್ನೆ (ಮೇ 26) ಸಂಜೆ ಸುರಿದ ಮಳೆ ರೈತ ಮಲ್ಲಪ್ಪನ ಜಮೀನನ್ನು ಅಕ್ಷರಶಃ ಕೆರೆಯಂತೆ ಮಾಡಿದೆ. ಕೆರೆಯಲ್ಲಿ ನೀರು ತುಂಬಿಕೊಂಡಂತೆ ಜಮೀನಿನ ತುಂಬ ನೀರು ತುಂಬಿಕೊಂಡಿದೆ. ಜಮೀನಿನಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಒಂದೂವರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಹಾಕಿದ್ದ ರೈತ ಮಲ್ಲಪ್ಪ, ಬೆಳೆಯನ್ನು ಜೋಪಾನ ಮಾಡಿದ್ದರು. ನಿರೀಕ್ಷೆಗೂ ಮೀರಿ ಮೆಣಸಿನಕಾಯಿ ಬೆಳೆ ಭರ್ಜರಿಯಾಗಿ ಬೆಳೆದಿತ್ತು. ಮೆಣಸಿನಕಾಯಿ ಕೂಡ ಆಗುತ್ತಿತ್ತು. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಮೆಣಸಿನಕಾಯಿ ಕಟಾವು ಮಾಡಬೇಕಿತ್ತು. ಕೊರೊನಾ ಲಾಕ್ಡೌನ್ನಿಂದಾಗಿ ಖರೀದಿದಾರರು ಇಲ್ಲದ್ದಕ್ಕೆ ಕಟಾವು ಮಾಡುವುದು ತಡವಾಗಿತ್ತು. ಇನ್ನೇನು ಮೆಣಸಿನಕಾಯಿ ಕಟಾವು ಮಾಡಿ ಸಿಕ್ಕಷ್ಟು ಸಿಗಲಿ ಮಾರಾಟ ಮಾಡಿದರೆ ಆಯಿತು ಎನ್ನುವಷ್ಟರಲ್ಲಿ ಮಳೆರಾಯ ಬರಸಿಡಿಲು ಬಡಿಯುವಂತೆ ಮಾಡಿದ್ದಾನೆ. ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ಮಳೆಯ ನೀರಿನಿಂದ ಜಲಾವೃತವಾಗಿದೆ. ಜಮೀನಿನಲ್ಲಿ ನಿಂತಿರುವ ನೀರು ಕಡಿಮೆಯಾಗಲು ಕನಿಷ್ಟ ನಾಲ್ಕೈದು ದಿನಗಳಾದರೂ ಬೇಕು. ಅಷ್ಟರಲ್ಲಿ ಬೆಳೆ ಕೊಳೆತು ಹಾಳಾಗಿರುತ್ತದೆ. ಮಳೆರಾಯನ ಆರ್ಭಟದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಗೆ ಜಾರಿದ ರೈತ ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವುದಕ್ಕೆ ಈಗಾಗಲೆ ರೈತ ಮಲ್ಲಪ್ಪ ಅರವತ್ತು ಸಾವಿರ ರುಪಾಯಿ ಖರ್ಚು ಮಾಡಿದ್ದಾನೆ. ಅವರಿವರ ಬಳಿ ಸಾಲ ಮಾಡಿಕೊಂಡು ಮೆಣಸಿನಕಾಯಿ ಬೆಳೆ ಬೆಳೆದಿದ್ದಾನೆ. ಆದರೆ ಈಗ ಬೆಳೆದ ಬೆಳೆಗೆ ಬೆಲೆ ಇಲ್ಲದಿರುವುದು ಒಂದೆಡೆಯಾದರೆ, ಬೆಳೆ ಸಂಪೂರ್ಣ ನೀರಿನಲ್ಲಿ ಹೋಮ ಮಾಡಿದಂತೆ ಆಗಿರುವುದು ರೈತನನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತನನ್ನು ಕಾಡುತ್ತಿದೆ.
ಒಂದೂವರೆ ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದೆ. ಇನ್ನೂ ಒಮ್ಮೆಯೂ ಕಟಾವು ಮಾಡಿರಲಿಲ್ಲ. ಮಾರುಕಟ್ಟೆಯಲ್ಲಿ ಈಗಿರುವ ದರ ನೋಡಿದರೆ ಆಳಿನ ಖರ್ಚು ಆಗುವುದಿಲ್ಲ. ಹೀಗಾಗಿ ಕಟಾವು ಮಾಡಿದರಾಯಿತು ಎಂದುಕೊಂಡಿದ್ದೆ. ಆದರೆ ಈಗ ಮಳೆರಾಯ ಎಲ್ಲ ಬೆಳೆಯನ್ನು ಸಂಪೂರ್ಣ ಹಾಳು ಮಾಡಿದ್ದಾನೆ. ಇದು ಮೊದಲಲ್ಲ. ಕಳೆದ ವರ್ಷವೂ ನಮಗೆ ಇದೆ ಪರಿಸ್ಥಿತಿ ಬಂದಿತ್ತು. ಆಗಲೂ ಸೂಕ್ತ ಪರಿಹಾರ ಸಿಗಲಿಲ್ಲ. ಚುನಾವಣೆ ಬಂದಾಗ ಮಾತ್ರ ಬರುವ ರಾಜಕಾರಣಿಗಳು ಇಂತಹ ಸಮಯದಲ್ಲಿ ನಮ್ಮತ್ತ ತಿರುಗಿಯೂ ನೋಡುವುದಿಲ್ಲ. ನಮಗೆ ಸರಕಾರದ ಪರಿಹಾರಕ್ಕಿಂತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂದು ರೈತ ಮಲ್ಲಪ್ಪ ಬಡಿಗೇರ ಆಗ್ರಹಿಸಿದ್ದಾರೆ.
ಇದನ್ನೂ ಓದಿ
ಕರ್ನಾಟಕದ 8 ಜಿಲ್ಲೆಗಳಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ರಾಜ್ಯದ ಸರಾಸರಿ ಪ್ರಮಾಣಕ್ಕಿಂತಲೂ ಕಡಿಮೆ
ಹದಿನೈದು ದಿನದ ಅಂತರದಲ್ಲಿ ಬೆಳಗಾವಿಯ ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾಗೆ ಬಲಿ
(Rain has ruined the Chilli Crop at haveri)