ಬೆಂಗಳೂರು: ಉತ್ತರ ಕರ್ನಾಟಕ ಕಳೆದ ವರ್ಷದಂತೆ ಈ ಬಾರಿಯೂ ಭಾರೀ ವರ್ಷಧಾರೆ ಕಂಡಿದ್ದು, ಮಳೆ ಪ್ರವಾಹ ಅಲ್ಲಿನ ಜನರನ್ನು ಈ ಬಾರಿಯೂ ಹೈರಾಣಗೊಳಿಸಿದೆ. ಮೊದಲೇ ಕೊರೊನಾದಿಂದ ಕಂಗೆಟ್ಟ ಮಂದಿಗೆ ವಿಪರೀತವಾದ ಮುಂಗಾರು ಮಳೆಯಿಂದಾಗಿ ಹರ್ಷಧಾರೆ ಎಂಬುದೇ ಇಲ್ಲವಾಗಿದೆ.
ಇದನ್ನು ಮನಗಂಡು ನಿಮ್ಮ ನೆಚ್ಚಿನ ನಂಬರ್1ನ್ಯೂಸ್ ಚಾನೆಲ್ ಟಿವಿ9 ಕನ್ನಡ ಮತ್ತೊಮ್ಮೆ ತನ್ನ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮುಂದಾಗಿದೆ. ಇದಕ್ಕೆ ಎಂದಿನಂತೆ ಟಿವಿ9 ವೀಕ್ಷಕರು ಸಹ ಕೈಜೋಡಿಸಿದ್ದಾರೆ.
ಟಿವಿ9 ಕರೆಗೆ ಓಗೊಟ್ಟ ಸಹೃದಯೀ ವೀಕ್ಷಕರಿಗೆ ಧನ್ಯವಾದ ಉತ್ತರ ಕರ್ನಾಟಕದ ನೆರೆ, ಪ್ರವಾಹ ಪರಿಸ್ಥಿತಿಯಿಂದ ಬಸವಳಿದಿರುವ ಜನರಿಗೆ ನೆರವಾಗಲು ಟಿವಿ9 ತನ್ನ ವೀಕ್ಷಕರನ್ನು ಕೋರಿತ್ತು. ಟಿವಿ9 ಕರೆಗೆ ಓಗೊಟ್ಟು ಸಹೃದಯೀ ವೀಕ್ಷಕರು, ಕನ್ನಡ ಜನತೆ ಅಪಾರ ಪ್ರಮಾಣದಲ್ಲಿ ನೆರವು ನೀಡಿದ್ದಾರೆ. ಮುಖ್ಯವಾಗಿ ಅಕ್ಕಿ, ಬೇಳೆ, ಇತರೆ ಅಡುಗೆ ಸಾಮಾಗ್ರಿ ಜೊತೆಗೆ ಹಾಸಿಗೆ, ಹೊದಿಕೆ, ಕಂಬಳಿಯನ್ನೂ ಧಾರಾಳವಾಗಿ ನೀಡಿದ್ದಾರೆ.
ಟಿವಿ9 ವೀಕ್ಷಕರು ನೀಡಿರುವ ಈ ಕೊಡುಗೆಯನ್ನು ಸಂತ್ರಸ್ತರಿಗೆ ತಲುಪಿಸಲೆಂದು ಇಂದು ಟಿವಿ9 ತಂಡ ಸಾಮಾಗ್ರಿಗಳೊಂದಿಗೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದತ್ತ ಹೊರಟಿದೆ. ನಾಳೆ ಬೆಳಗ್ಗೆ ಅಫಜಲಪುರ ತಲುಪುತ್ತಿದ್ದಂತೆ ಅಲ್ಲಿನ ಸಂತ್ರಸ್ತರಿಗೆ ಟಿವಿ9 ವೀಕ್ಷಕರು ನೀಡಿರುವ ಸಾಮಾಗ್ರಿಗಳನ್ನು ತಲುಪಿಸಲಾಗುವುದು.