ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಿದ್ದೇಗೆ ಕುಮಾರಸ್ವಾಮಿ, ಯಡಿಯೂರಪ್ಪ? ಡಿಕೆ ಶಿವಕುಮಾರ್ ಹೇಳಿದ ಸ್ವಾರಸ್ಯಕರ ಕಥೆ ಇಲ್ಲಿದೆ
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹೇಳಲು ಬಿಜೆಪಿ ಹಾಗೂ ಜೆಡಿಎಸ್ ಮುಂದಾಗಿದ್ದ ಬಗ್ಗೆ ಸ್ವಾರಸ್ಯಕರ ಕಥೆಯೊಂದನ್ನು ಡಿಸಿಎಂ ಡಿಕೆ ಶಿವಕುಮಾರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ. ಅತ್ತ ಬಿಜೆಪಿ, ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಯತ್ನಿಸಿರುವುದೂ ಗುಟ್ಟಾಗಿ ಉಳಿದಿಲ್ಲ.
ಬೆಂಗಳೂರು, ಫೆಬ್ರವರಿ 27: ರಾಜ್ಯಸಭೆ ಚುನಾವಣೆಗೆ (Rajya Sabha Election) ಸಕಲ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ (Congress), ತಂತ್ರಗಾರಿಕೆ ರೂಪಿಸುವ ನಿಟ್ಟಿನಲ್ಲಿ ಸೋಮವಾರ ರಾತ್ರಿ ಶಾಸಕಾಂಗ ಪಕ್ಷದ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಸಕ್ತಿದಾಯಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರಿಗೆ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗಾಳ ಹಾಕಿರುವ ವಿಚಾರವಾಗಿ ಮಾಹಿತಿ ನೀಡಿದ್ದಾರೆ.
‘ನಮ್ಮ ಸುಮಾರು 41 ಶಾಸಕರಿಗೆ ಅವರು (ಬಿಜೆಪಿ, ಜೆಡಿಎಸ್) ಗಾಳ ಹಾಕಿದ್ದಾರೆ. ಎಲ್ಲರಿಗೂ ಕರೆ ಮಾಡಿ ಆಮಿಷ ಒಡ್ಡಿದ್ದಾರೆ. ಕುಮಾರಸ್ವಾಮಿ ಅವರೇ ಖುದ್ದು ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದಾರೆ. ಅಂಥಾ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನೇ ಬಿಟ್ಟಿಲ್ಲ. ಕುಮಾರಸ್ವಾಮಿ ಅವರು ಫೋನ್ ಮಾಡಿ ಮಾತನಾಡಿದ್ದಾರೆ. ಬಿಜೆಪಿಯಿಂದ ಸ್ವತಃ ಬಿಎಸ್ ಯಡಿಯೂರಪ್ಪ ಸಹ ಮಾತನಾಡಿದ್ದಾರೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅವರು ಎಷ್ಟರ ಮಟ್ಟಿಗೆ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ನೋಡಿ, ನಮ್ಮ ಶಾಸಕರು 50 ಕೋಟಿ ರೂಪಾಯಿ ಕೊಡುತ್ತೇನೆ ಎಂದು ಆಮಿಷವೊಡ್ಡಿದರೂ ಅವರಿಗೆ ಓಟ್ ಹಾಕಲ್ಲ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿಜೆಪಿ ಶಾಸಕರ ಸಂಪರ್ಕಿಸಲು ಕಾಂಗ್ರೆಸ್ ಯತ್ನ
ಮತ್ತೊಂದೆಡೆ, ಬಿಜೆಪಿ ಶಾಸಕರನ್ನು ಸಂಪರ್ಕಿಸಲು ತಡರಾತ್ರಿವರೆಗೂ ಕಾಂಗ್ರೆಸ್ ನಾಯಕರು ಪ್ರಯತ್ನಿಸಿರುವುದು ತಿಳಿದುಬಂದಿದೆ. ಕಾಂಗ್ರೆಸ್ ನಾಯಕರಿಂದ ಇಬ್ಬರು ಬಿಜೆಪಿ ಶಾಸಕರನ್ನು ಸಂಪರ್ಕಿಸಲು ಪ್ರಯತ್ನ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದರು ಎನ್ನಲಾಗಿದೆ. ಇಬ್ಬರು ಬಿಜೆಪಿ, ಇಬ್ಬರು ಜೆಡಿಎಸ್ ಶಾಸಕರು ತಮ್ಮೊಂದಿಗೆ ಕೈ ಜೋಡಿಸುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಮತಗಳು ಕೊರತೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಭರ್ಜರಿ ಪ್ಲ್ಯಾನ್; ಹೇಗಿದೆ ಗೊತ್ತಾ?
ಬಿಜೆಪಿ, ಜೆಡಿಎಸ್ ಶಾಸಕರನ್ನು ಸಂಪರ್ಕಿಸಲು ಮೂವರು ಕಾಂಗ್ರೆಸ್ ಶಾಸಕರು ಹೊಟೆಲ್ನಿಂದ ತಡರಾತ್ರಿ ತೆರಳಿದ್ದರು. ಮಧ್ಯರಾತ್ರಿ 12.30ಕ್ಕೆ ತೆರಳಿ ಬಿಜೆಪಿಯ ಇಬ್ಬರು ಶಾಸಕರೊಂದಿಗೆ ಮಾತುಕತೆ ನಡೆಸಿ ವಾಪಸ್ ಆಗಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ