ಹಲವು ವಿಶೇಷ ಪವಾಡಗಳ ದೇಗುಲ; ಮೈಸೂರಿನ ಕೋದಂಡರಾಮ ಮಂದಿರದಲ್ಲಿ ಇಂದಿಗೂ ಪುರಾಣಪ್ರಸಿದ್ಧ ಸನ್ನಿವೇಶಗಳು ಜಿವಂತ

ದೇವಸ್ಥಾನದ ಮುಂಭಾಗದಲ್ಲಿ ಆಕರ್ಷಕ ವಿಶಾಲ ಗೋಪುರವನ್ನು ಹೊಂದಿದೆ. ವಿಶಾಲ ಪ್ರಾಕಾರದಲ್ಲಿ ಗುಡಿಯನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಒಳಗೆ ಗಣಪತಿ, ಗರುಡ ಸ್ತಂಭ, ವಿಷ್ಣುವಿನ ದಶಾವತಾರ, ರಾಮಾನುಜಾಚಾರ್ಯರು ಹಾಗೂ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರ ವಿಗ್ರಹಗಳಿವೆ.

ಹಲವು ವಿಶೇಷ ಪವಾಡಗಳ ದೇಗುಲ; ಮೈಸೂರಿನ ಕೋದಂಡರಾಮ ಮಂದಿರದಲ್ಲಿ ಇಂದಿಗೂ ಪುರಾಣಪ್ರಸಿದ್ಧ ಸನ್ನಿವೇಶಗಳು ಜಿವಂತ
ಕೋದಂಡರಾಮ ಮಂದಿರ

ಮೈಸೂರು: ಇಂದು ನಾಡಿನೆಲ್ಲೆಡೆ ರಾಮನವಮಿ. ಕೊರೊನಾ ಭೀತಿ ನಡುವೆಯೂ ಶ್ರೀರಾಮಚಂದ್ರನ ಜನುಮದಿನವನ್ನು ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ರಾಮನವಮಿ ಅಂದರೆ ಎಲ್ಲಾ ರಾಮಮಂದಿರಗಳಲ್ಲೂ ಮಜ್ಜಿಗೆ ಪಾನಕ ಹಾಗೂ ರಾಮರಸದ ಅಬ್ಬರ ಜೋರಾಗಿರುತ್ತದೆ. ಇನ್ನು ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ರಾಮಮಂದಿರದಲ್ಲೂ ರಾಮನವಮಿ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ತನ್ನದೇ ಆದ ಸ್ಥಳಪುರಾಣವನ್ನು ಹೊಂದಿರುವ ಚುಂಚನಕಟ್ಟೆ ಕೋದಂಡರಾಮನ ದೇಗುಲದಲ್ಲಿ ಈ ಬಾರಿ ರಾಮನವಮಿಗೆ ಸದ್ಯ ತಡೆ ಉಂಟಾಗಿದೆ.

ರಾಮ ಲಕ್ಷ್ಮಣ ಸೀತೆ ಭೇಟಿಯಾದ ಪುರಾಣ ಪ್ರಸಿದ್ಧ ಸ್ಥಳ ಚುಂಚನಕಟ್ಟೆ ತನ್ನದೇ ಆದ ಸ್ಥಳ‌ ಪುರಾಣವನ್ನು ಹೊಂದಿದೆ. ತ್ರೇತಾಯುಗದಲ್ಲಿ ಇದು ಒಂದು ದಂಡಕಾರಣ್ಯವಾಗಿದ್ದು, ಇಲ್ಲಿ ಚುಂಚಾ ಚುಂಚಿ ಎಂಬ ರಾಕ್ಷಸರು ವಾಸವಾಗಿದ್ದರಂತೆ. ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತಾ ಎಲ್ಲರಿಗೂ ತೊಂದರೆ ಕೊಡುತ್ತಿದ್ದರಂತೆ. ಆಗ ಅದೇ ಕಾಡಿನಲ್ಲಿ ಆಶ್ರಮವನ್ನು ಹೊಂದಿದ್ದ ತ್ರಿಕಾಲ ಜ್ಞಾನಿಗಳಾದ ತೃಣಬಿಂದು ಮಹರ್ಷಿಗಳು ಇವರ ಮನಪರಿವರ್ತನೆ ಮಾಡಿದರಂತೆ. ನೀವಿಬ್ಬರು ದೇವಲೋಕದ ಕಿನ್ನರರು. ಶಾಪಗ್ರಸ್ತರಾಗಿ ಇಲ್ಲಿ ಬಂದಿದ್ದೀರಾ. ಇಲ್ಲಿಗೆ ನಾರಾಯಣ ಸ್ವರೂಪಿ ಶ್ರೀರಾಮ ಬಂದಾಗ ಆತನ ದರ್ಶನದಿಂದ ಶಾಪ ವಿಮೋಚನೆಯಾಗುತ್ತದೆ ಎಂದು ತಿಳಿಸಿದ್ದರಂತೆ. ಮಹರ್ಷಿಗಳ ಮಾತಿನಂತೆ ಚುಂಚಾ ಚುಂಚಿ ಪರಿವರ್ತನೆಯಾದರಂತೆ. ಮುಂದೆ ಶ್ರೀರಾಮ ಸೀತಾ ಲಕ್ಷ್ಮಣ ಸಮೇತನಾಗಿ ಇಲ್ಲಿಗೆ ಬಂದು ಚುಂಚಾ ಚುಂಚಿಯ ಶಾಪ ವಿಮೋಚನೆ ಮಾಡಿದ ನೆನಪಿನಾರ್ಥವಾಗಿ ಇಲ್ಲಿ ಕೋದಂಡರಾಮ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

ಧನುಷ್ಕೋಟಿ ರಾಮ, ಸೀತೆ ಮತ್ತು ಲಕ್ಷ್ಮಣ ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಾಗ ಇಲ್ಲಿ ಸಂಪೂರ್ಣ ಕಾಡು ಆವರಿಸಿತ್ತು. ಕಾವೇರಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಳಂತೆ. ಸೀತೆ ಇಲ್ಲಿ ನೀರೆ ಇಲ್ಲವಲ್ಲ, ಇಲ್ಲಿ ಹೇಗೆ ವಾಸ ಮಾಡುವುದು ಎಂದು ಕೇಳಿದಾಗ ರಾಮನು ತಮ್ಮ ಲಕ್ಷ್ಮಣನಿಗೆ ತಾನು ಸೂಚಿಸಿದ ಸ್ಥಳದಲ್ಲಿ ಬಾಣ ಹೂಡುವಂತೆ ಹೇಳಿದನಂತೆ. ಅದೇ ರೀತಿ ಲಕ್ಷ್ಮಣ ಅಲ್ಲಿ ಬಾಣ ಹೂಡಿದಾಗ ಕಾವೇರಿ ಧುಮ್ಮಿಕ್ಕಿ‌ ಹರಿಯಲು ಆರಂಭಿಸಿದಳಂತೆ. ಈಗಲೂ ಸುಮಾರು 60 ಅಡಿ ಎತ್ತರದಿಂದ ಕಾವೇರಿ ಇಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಅದಕ್ಕಾಗಿಯೇ ಈ ಸ್ಥಳಕ್ಕೆ ಧನುಷ್ಕೋಟಿ ಎಂಬ ಹೆಸರು ಬಂದಿದೆ.

ಸೀತಾಮಡು ಉಕ್ಕಿ ಹರಿಯುತ್ತಿದ್ದ ಕಾವೇರಿಯಲ್ಲಿ ಸ್ನಾನ ಮಾಡಲು ಸೀತೆ ಬಯಸಿದಳಂತೆ ಅದರಂತೆ ಲಕ್ಷ್ಮಣ ಬಂಡೆಯ ಬಳಿ ಇದಕ್ಕೆ ವ್ಯವಸ್ಥೆ ಮಾಡಿದ್ದನಂತೆ. ಅಲ್ಲಿ ಸೀತೆ ಮನತಣಿಯುವವರೆಗೂ ಸ್ನಾನ‌ ಮಾಡಿ ಕಾವೇರಿ ಮಡಿಲಲ್ಲಿ ವಿಹರಿಸಿದಳಂತೆ. ಅಚ್ಚರಿ ಎಂದರೆ ಈಗಲೂ ಸೀತೆ ಸ್ನಾನ ಮಾಡಿದ ಸ್ಥಳದಲ್ಲಿ ಹಳದಿ ಮಿಶ್ರಿತ ಅರಿಶಿಣ ಬಣ್ಣದ ನೀರು ಹರಿಯುತ್ತದೆ. ಇದು ಸೀತೆ ಸ್ನಾನ ಮಾಡಿದಾಗ ಹರಿದ ಅರಿಶಿಣ ಆಕೆ ಬಳಸಿದ ಸೀಗೆಕಾಯಿಯ ಬಣ್ಣ ಎನ್ನುವುದು ಸ್ಥಳೀಯರ ನಂಬಿಕೆ. ಅದಕ್ಕಾಗಿಯೇ ಈ ಅಪರೂಪದ ಸ್ಥಳಕ್ಕೆ ಸೀತಾಮಡು ಎಂದು ಕರೆಯುತ್ತಾರೆ‌.

Kodandarama swamy temple 2

ಮೈಸೂರಿನ ಕೋದಂಡರಾಮ ದೇವಾಲಯದ ಚಿತ್ರಣ

ರಾಮನ ಬಲ ಭಾಗದಲ್ಲಿ ಸೀತೆ ಹನುಮನಿಲ್ಲದ ಗರ್ಭಗುಡಿ ಇನ್ನು ಚುಂಚನಕಟ್ಟೆಯ ಕೋದಂಡರಾಮ ದೇವಸ್ಥಾನದ ಮತ್ತೊಂದು ವಿಶೇಷತೆ ಎಂದರೆ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ವಿಗ್ರಹ. ಸಾಮಾನ್ಯವಾಗಿ ವಿಶ್ವದ ಎಲ್ಲಾ ಭಾಗದ ರಾಮನ ದೇವಸ್ಥಾನದಲ್ಲಿ ರಾಮನ ಎಡಭಾಗದಲ್ಲಿ ಸೀತೆಯಿರುತ್ತಾಳೆ. ಆದರೆ ಇಲ್ಲಿ ರಾಮನ ಬಲಭಾಗದಲ್ಲಿ ಸೀತೆ ಇರುವುದು ವಿಶೇಷ. ಇದಕ್ಕೆ ಕಾರಣ ತೃಣಬಿಂದು ಮಹರ್ಷಿಗಳು. ರಾಮನ ವಿವಾಹ ಕಾಲದಲ್ಲಿ ಸೀತಾಮಾತೆಯನ್ನು ನಾನು ನಿನ್ನ ಎಡಭಾಗದಲ್ಲಿ ನೋಡಿದ್ದೇನೆ. ಈಗ ನಿನ್ನ ಬಲ ಭಾಗದಲ್ಲಿ ಸೀತೆಯನ್ನು ನಾನು ನೋಡಬೇಕು ಎಂದು ಅಪೇಕ್ಷೆಪಟ್ಟರಂತೆ.

ಮಹಾಮುನಿಗಳ ಅಪೇಕ್ಷೆ ನೆರವೇರಿಸಲು ರಾಮನು ಸೀತೆಯನ್ನು ಬಲಭಾಗದಲ್ಲಿ ಲಕ್ಷ್ಮಣನನ್ನು ಎಡಭಾಗದಲ್ಲಿ ನಿಲ್ಲಿಸಿಕೊಂಡು ದರ್ಶನ ನೀಡಿದನಂತೆ. ಹೀಗಾಗಿ ಇಲ್ಲಿನ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹ ವಿಶೇಷತೆಯಿಂದ ಮೂಡಿಬಂದಿದೆ. ಇನ್ನು ರಾಮನ ಎಲ್ಲಾ ದೇಗುಲದಲ್ಲೂ ರಾಮನ ನೆಚ್ಚಿನ ಬಂಟ ಹನುಮಂತನನ್ನು ಕಾಣುತ್ತೇವೆ. ಆದರೆ ಕೋದಂಡರಾಮನ ದೇಗುಲದ ಗರ್ಭಗುಡಿಯಲ್ಲಿ ಹನುಮಂತನಿಲ್ಲ. ಇದಕ್ಕೆ ಕಾರಣ ಶ್ರೀರಾಮ ಇಲ್ಲಿಗೆ ಬಂದಾಗ ಇನ್ನು ಕಿಷ್ಕಿಂಧಾ ಪರ್ವತಕ್ಕೆ ಭೇಟಿ ನೀಡಿರಲಿಲ್ಲವಂತೆ. ಹೀಗಾಗಿ ಹನುಮನ ಪರಿಚಯವೂ ಆಗಿರಲಿಲ್ಲವಂತೆ. ವಾಸ್ತವತೆ ಆಧಾರದಲ್ಲಿ ತೃಣಬಿಂದು ಮಹರ್ಷಿಗಳು ಖುದ್ದಾಗಿ ಇಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣರನ್ನು ಪ್ರತಿಷ್ಠಾಪಿಸಿರುವ ಕಾರಣ ಗರ್ಭಗುಡಿಯಲ್ಲಿ ಹನುಮನಿಗೆ ಅವಕಾಶ ನೀಡಿರಲಿಲ್ಲ. ಆದರೆ ಕೋದಂಡರಾಮ ದೇಗುಲದ ಹೊರಗೆ ಹನುಮನ ಗುಡಿಯಿದೆ. ಎಲ್ಲಾ ಕಡೆ ವಿಘ್ನನಿವಾರಕ ಗಣಪನಿಗೆ ಅಗ್ರಪೂಜೆಯಾದರೆ ಇಲ್ಲಿ ಮೊದಲು ಹನುಮನ ದರ್ಶನ ಹಾಗೂ ಪೂಜೆ ಮಾಡಲಾಗುತ್ತದೆ.

Kodandarama swamy temple 1

ಪುರಾಣಪ್ರಸಿದ್ಧ ದೇವಸ್ಥಾನ

ಸೋಜಿಗದ ಶಬ್ದರಹಿತ ಗರ್ಭಗುಡಿ-ಅಚ್ಚರಿಯ ಉಪಕಥೆ ಚುಂಚನಕಟ್ಟೆಯ ಕೋದಂಡರಾಮ ದೇಗುಲದ ಪಕ್ಕದಲ್ಲೇ ಕಾವೇರಿ ಭೋರ್ಗರೆದು ಧುಮ್ಮಿಕ್ಕುತ್ತಾಳೆ. ಆಕೆಯ ಅಬ್ಬರದ ಶಬ್ದ ದೂರ ದೂರದವರೆಗೂ ಕಿವಿಗೆ ಅಪ್ಪಳಿಸುತ್ತದೆ. ದೇವಸ್ಥಾನದ ಆವರಣದಲ್ಲೂ ಕಾವೇರಿಯ ಭೋರ್ಗರೆತ ಕಿವಿಗೆ ರಾಚುತ್ತದೆ‌. ಆದರೆ ಅಚ್ಚರಿ ಅಂದರೆ ದೇವಸ್ಥಾನದ ಗರ್ಭಗುಡಿಯಲ್ಲಿ ಕಾವೇರಿ ನದಿ ನೀರಿನ ಝಳು ಝುಳು ಶಬ್ದವೂ ಕೇಳಿಸುವುದಿಲ್ಲ. ಇದರ ಹಿಂದೆ ಒಂದು ಉಪಕಥೆಯೇ ಇದೆ. ರಾಮ ಲಕ್ಷ್ಮಣ ಸೀತೆ ಇಲ್ಲಿಗೆ ಭೇಟಿ ನೀಡಿ ಚುಂಚಾ ಚುಂಚಿಯ ಶಾಪ ವಿಮೋಚನೆ ಮಾಡಿ ತೃಣಬಿಂದು ಮಹರ್ಷಿಗಳಿಗೆ ದರ್ಶನ ನೀಡಿದ ನಂತರ ಈ ಸ್ಥಳದ ಪರಿಸರ ಸೌಂದರ್ಯಕ್ಕೆ ಮಾರುಹೋಗಿ ಸ್ವಲ್ಪ ದಿನ ಇಲ್ಲಿಯೇ ವಾಸ್ತವ್ಯ ಹೂಡಲು ನಿರ್ಧರಿಸಿದರಂತೆ.

ಈ ವೇಳೆ ಕಾವೇರಿ ನದಿಯ ಪಕ್ಕದಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಿಕೊಂಡಿದ್ದರಂತೆ. ಆದರೆ ಕಾವೇರಿಯ ರಭಸದ ಹರಿವಿನ ಶಬ್ದದಿಂದಾಗಿ ಸೀತೆಗೆ ನಿದ್ರೆ ಬರುತ್ತಿರಲಿಲ್ಲವಂತೆ. ಈ ವಿಚಾರವನ್ನು ಸೀತೆ ರಾಮನಿಗೆ ತಿಳಿಸಿದಾಗ. ರಾಮನು ತನ್ನ ತಪೋಶಕ್ತಿಯಿಂದ ಸೀತೆ ಮಲಗಿದ್ದ ಜಾಗದಲ್ಲಿ ಕಾವೇರಿ ನದಿ ನೀರು ಹರಿಯುವ ಶಬ್ದ ಕೇಳಿಸದಂತೆ ಮಾಡಿದನಂತೆ. ಆಗ ಸೀತೆ ನೆಮ್ಮದಿಯಾಗಿ ನಿದ್ರೆ ಮಾಡಿದಳಂತೆ. ಮುಂದೆ ಅದೇ ಸ್ಥಳದಲ್ಲಿ ದೇಗುಲದ ಗರ್ಭಗುಡಿ ನಿರ್ಮಿಸಲಾಗಿದೆ. ಅಚ್ಚರಿಯೆಂದರೆ ಈಗಲೂ ಸಹಾ ಕಾವೇರಿ ನದಿ ಹರಿಯುವ ಶಬ್ದ ಗರ್ಭಗುಡಿಯ ಒಳಗೆ ಸ್ವಲ್ಪವೂ ಕೇಳಿಸುವುದಿಲ್ಲ.

ಆಕರ್ಷಕ ಕೋಂದಂಡ ರಾಮ ದೇವಸ್ಥಾನ ದೇವಸ್ಥಾನದ ಮುಂಭಾಗದಲ್ಲಿ ಆಕರ್ಷಕ ವಿಶಾಲ ಗೋಪುರವನ್ನು ಹೊಂದಿದೆ. ವಿಶಾಲ ಪ್ರಾಕಾರದಲ್ಲಿ ಗುಡಿಯನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಒಳಗೆ ಗಣಪತಿ, ಗರುಡ ಸ್ತಂಭ, ವಿಷ್ಣುವಿನ ದಶಾವತಾರ, ರಾಮಾನುಜಾಚಾರ್ಯರು ಹಾಗೂ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರ ವಿಗ್ರಹಗಳಿವೆ. ಇನ್ನು ದೇವಸ್ಥಾನದ ಸುತ್ತ ಕೆಲವೇ ದೂರದಲ್ಲಿ ಅನೇಕ ದೇವಾಲಯಗಳಿವೆ. ರಾಮಲಿಂಗೇಶ್ವರ ದೇವಸ್ಥಾನ. ಗೋಪಾಲಸ್ವಾಮಿ ದೇವಸ್ಥಾನ, ಸಿಡಿಲು ಮಲ್ಲಿಕಾರ್ಜುನ ದೇಗುಲ, ಕಪ್ಪಡಿ ದೇವಸ್ಥಾನ, ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ. ಎಡತೊರೆ ಅರ್ಕೇಶ್ವರ ದೇವಸ್ಥಾನಗಳಿವೆ.

ನಿಮಗೆ ಸಮಯವಾದಾಗ ಖಂಡಿತಾ ಚುಂಚನಕಟ್ಟೆಯ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿ. ಇದೊಂದು ಅಪರೂಪದ ಧಾರ್ಮಿಕ ಹಾಗೂ ಪ್ರವಾಸಿಕೇಂದ್ರ. ಹೀಗೆ ಭೇಟಿ ನೀಡುವಾಗ ಕೋವಿಡ್ 19 ನಿಯಮಗಳನ್ನು ತಪ್ಪದೆ ಪಾಲಿಸಿ. ನೀವು ಸುರಕ್ಷಿತವಾಗಿರಿ ನಿಮ್ಮ ಜೊತೆಯಾಗಿರುವವರ ಆರೋಗ್ಯವನ್ನು ಕಾಪಾಡಿ ಎನ್ನುವುದೇ ಟಿವಿ9 ಡಿಜಿಟಲ್‌ನ ಆಶಯ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹಿಂದೂ – ಮುಸ್ಲಿಂ ಭಾವೈಕ್ಯತೆ; ಶ್ರೀರಾಮನವಮಿ ಪ್ರಯುಕ್ತ ಆಂಜನೇಯ ಹಾಗೂ ಬಾಬಯ್ಯನಿಗೆ ವಿಶೇಷ ಪೂಜೆ

(Rama Navami 2021 Spiritual activities still alive in Kodandarama swamy temple in Mysore)

Click on your DTH Provider to Add TV9 Kannada