ಸೋಂಕಿತ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ವೈದ್ಯಕೀಯ ಕಾಲೇಜು; ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಎಲ್ಲರಿಗೂ ಕೊರೊನಾ ಆತಂಕ
ಸೋಂಕಿತ ವಿದ್ಯಾರ್ಥಿಗಳು ಬಸ್, ಕಾರುಗಳ ಮೂಲಕ ಊರಿಗೆ ಹೋಗಿರುವುದರಿಂದ ಪ್ರಯಾಣದಲ್ಲಿ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕೊರೊನಾ ಹರಡುವ ಸಾಧ್ಯತೆ ಇದ್ದು, ಕಾಲೇಜು ಆಡಳಿತ ಮಂಡಳಿಯ ಬೇಜವಾಬ್ದಾರಿ ನಡೆ ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.
ಬೆಳಗಾವಿ: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಾವಳಿಗಳ ಮೊರೆ ಹೋಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದೂ ಸವಾಲಾಗಿರುವುದರಿಂದ ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಂಡು ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳಲು ಮನವಿ ಮಾಡಿದೆ. ಆದರೆ, ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಬೆಳಗಾವಿಯ ಬಿಮ್ಸ್ ವೈದ್ಯಕೀಯ ಕಾಲೇಜು ಮಹಾ ಪ್ರಮಾದವೊಂದಕ್ಕೆ ಕಾರಣವಾಗಿದೆ. ವೈದ್ಯಕೀಯ ಸಂಸ್ಥೆಯಾಗಿ ಜವಾಬ್ದಾರಿಯಿಂದ ವರ್ತಿಸಬೇಕಾಗಿದ್ದ ಬಿಮ್ಸ್, ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡುವ ಬದಲು ಮನೆಗೆ ಹೋಗಿ ಎಂದು ವಿದ್ಯಾರ್ಥಿ ನಿಲಯದಿಂದ ಹೊರದಬ್ಬುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದೆ.
ಬಿಮ್ಸ್ ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡ ಕಾರಣ, ಏಪ್ರಿಲ್ 19ರಂದು 50 ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿತ್ತು. ಆ ಪೈಕಿ ವಸತಿ ನಿಲಯಗಳಲ್ಲಿದ್ದ ಹದಿನಾಲ್ಕು ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ನಿನ್ನೆಯಷ್ಟೇ ಈ ಎಲ್ಲಾ ವಿದ್ಯಾರ್ಥಿಗಳ ಕೊರೊನಾ ವರದಿ ಸಿಕ್ಕಿದ್ದು, ಪಾಸಿಟಿವ್ ಬಂದಿರುವುದು ಖಚಿತವಾಗಿದೆ.
ವಿದ್ಯಾರ್ಥಿಗಳಿಗೆ ಪಾಸಿಟಿವ್ ಇರುವುದು ಖಚಿತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಕ್ವಾರಂಟೈನ್ ಮಾಡಿ ವಸತಿ ನಿಲಯದಲ್ಲೇ ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದೆ. ಕೊರೊನಾ ಪಾಸಿಟಿವ್ ಇದ್ದರೂ ಮನೆಗೆ ಹೋಗಿ ಕ್ವಾರೆಂಟೈನ್ ಆಗಿ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ವಸತಿ ನಿಲಯದಿಂದ ಹೊರ ದಬ್ಬಿದ ಪರಿಣಾಮ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಮನೆಗೆ ತೆರಳಿದ್ದಾರೆ.
ಅತ್ತ ವಸತಿ ನಿಲಯದಲ್ಲಿದ್ದ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಆತಂಕ ಶುರುವಾಗಿದ್ದು, ಇನ್ನೊಂದೆಡೆ ವಿದ್ಯಾರ್ಥಿಗಳು ಮನೆಗಳಿಗೆ ತೆರಳಿರುವ ಕಾರಣ ಕುಟುಂಬಸ್ಥರಿಗೂ ಚಿಂತೆ ಆರಂಭವಾಗಿದೆ. ಅಲ್ಲದೇ, ಬಸ್, ಕಾರುಗಳ ಮೂಲಕ ಊರಿಗೆ ಹೋಗಿರುವುದರಿಂದ ಪ್ರಯಾಣದಲ್ಲಿ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕೊರೊನಾ ಹರಡುವ ಸಾಧ್ಯತೆ ಇದ್ದು, ಕಾಲೇಜು ಆಡಳಿತ ಮಂಡಳಿಯ ಬೇಜವಾಬ್ದಾರಿ ನಡೆ ಎಲ್ಲರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ