AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯಾ ಬಿಟ್ಟರೆ ಪವಿತ್ರ ಸ್ಥಳ ರಾಮದೇವರ ಬೆಟ್ಟ -ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ

ಅಯೋಧ್ಯಾ ಬಿಟ್ಟರೆ ಪವಿತ್ರ ಸ್ಥಳ ರಾಮದೇವರ ಬೆಟ್ಟ. ಒಂದಿಷ್ಟು ನೆನೆಗುದಿಗೆ ಬಿದ್ದಿತ್ತು, ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ಆ ಭಾಗದ ಜನರ ಒತ್ತಾಯ ಇತ್ತು. ಅದರಂತೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿದೆ.

TV9 Web
| Updated By: ಆಯೇಷಾ ಬಾನು|

Updated on:Feb 18, 2023 | 9:11 AM

Share

ರಾಮನಗರ: ರಾಮನಗರದಲ್ಲೇ ರಾಮಮಂದಿರ ಕಟ್ಟುತ್ತೇವೆ. ಇದು ಕೇವಲ ಘೋಷಣೆ ಅಲ್ಲ. ರಾಮನಗರ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ನೆಡುವ ಸಂಕಲ್ಪವಾಗಿದೆ. ಇದರ ಭಾಗವಾಗಿಯೇ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದು ಇದು ರಾಜಕೀಯ ವಲಯದಲ್ಲಿ ಸಂಚಲನ ಎಬ್ಬಿಸಿದೆ. ಈ ಸಂಬಂಧ ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಿದ್ದು ರಾಮದೇವರಬೆಟ್ಟ ರಣಹದ್ದುಗಳ ವನ್ಯಜೀವಿಧಾಮ. ರಾಮದೇವರ ಬೆಟ್ಟದಲ್ಲಿ ಪಟ್ಟಾಭಿರಾಮನ‌ ದೇವಸ್ಥಾನವಿದೆ. ಇದು ಮುಜರಾಯಿ ಇಲಾಖೆಯ ಜಾಗ ಎಂದು ಟಿವಿ9ಗೆ ರಾಮನಗರ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಮಾಹಿತಿ ನೀಡಿದ್ದಾರೆ.

ದೇವಸ್ಥಾನದ ಸುತ್ತ ಇರುವ 160 ಮೀಟರ್ ಜಾಗ ದೇವಸ್ಥಾನಕ್ಕೆ ಸೇರಿದ್ದು. ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಪ್ಲಾನ್ ಇದೆ. ಒಂದೂವರೆ ತಿಂಗಳ ಹಿಂದೆ ಸರ್ವೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಒಂದು ಕಮಿಟಿ ಆಗಿದೆ. ಇಲ್ಲಿ ಏನೇನು ಆಗಬೇಕು ಎಂದು ಪ್ಲಾನ್ ಆಗುತ್ತಿದೆ. 19 ಎಕರೆ ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ‌ದೇವಸ್ಥಾನ ಬರಲಿದೆ. ಸರ್ವೆ ಮಾಡಿ ತಿಳಿಸಲು ಹೇಳಿದ್ರು. ಒಂದು ಎಕರೆಯಷ್ಟು ಸಮತಟ್ಟಾದ ಜಾಗವಿದೆ. ವನ್ಯಜೀವಿಧಾಮ ಆಗುವಾಗಲೇ‌ ಮುಜರಾಯಿ ಇಲಾಖೆ ಜಾಗವನ್ನು ಗುರುತಿಸಲಾಗಿದೆ. ಆ ಜಾಗವನ್ನ ಬಿಟ್ಟು ವನ್ಯಜೀವಿಧಾಮ ಅಂತಾ ಹೇಳಲಾಗುತ್ತದೆ. ಅಲ್ಲಿ ಏನು ಕೆಲಸ ಆಗಬೇಕು ಎಂಬುದು ಕಮಿಟಿ ನಿರ್ಧಾರ ಮಾಡಲಿದೆ. ಪರಿಸರ ಸೂಕ್ಷ್ಮ ವಲಯದ ಮಧ್ಯದಲ್ಲಿ‌ ಇದೆ. ದಾಖಲೆಗಳ ಪ್ರಕಾರ ಜಾಗ ಗುರುತಿಸಲು ಮಾತ್ರ ಸೂಚಿಸಿದ್ದಾರೆ. ನಮ್ಮ ಅಭಿಪ್ರಾಯ ಇದುವರೆಗೂ ಕೇಳಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಮದೇವರಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ: ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿಗೆ ಸೂಚನೆ

ಅಯೋಧ್ಯಾ ಬಿಟ್ಟರೆ ಪವಿತ್ರ ಸ್ಥಳ ರಾಮದೇವರ ಬೆಟ್ಟ

ಇನ್ನು ಈ ಬಗ್ಗೆ ಮಾತನಾಡಿದ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ, ರಾಮದೇವರ ಬೆಟ್ಟದಲ್ಲಿ ಈಗಾಗಲೇ ರಾಮನ ದೇವಸ್ಥಾನ ಇದೆ. ಅಯೋಧ್ಯಾ ಬಿಟ್ಟರೆ ಪವಿತ್ರ ಸ್ಥಳ ರಾಮದೇವರ ಬೆಟ್ಟ. ಒಂದಿಷ್ಟು ನೆನೆಗುದಿಗೆ ಬಿದ್ದಿತ್ತು, ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ಆ ಭಾಗದ ಜನರ ಒತ್ತಾಯ ಇತ್ತು. ಅದರಂತೆ ರಾಜ್ಯ ಸರ್ಕಾರ ಬಜೆಟ್​ನಲ್ಲಿ ಘೋಷಣೆ ಮಾಡಿದೆ. ಡಿಪಿಆರ್ ತಯಾರು ಮಾಡುತ್ತಿದ್ದೇವೆ. ಯಾವ ರೀತಿಯಲ್ಲಿ ಮಾಡಬೇಕು ಅಂತಾ ಕಾರ್ಯಕ್ರಮ ರೂಪಿಸಿ ಮಾಡಲು ಸರ್ಕಾರ ಬದ್ಧವಾಗಿದೆ. ಕನಿಷ್ಠ 50 ಕೋಟಿ ವೆಚ್ಚ ಆಗಲಿದೆ. ಪರಿಸರ ಸೂಕ್ಷ್ಮ ಪ್ರದೇಶ ಆಗಿರುವ ಕಾರಣ ನಿರ್ಬಂಧ ಕೂಡಾ ಇದೆ. ಕಾನೂನು ಚೌಕಟ್ಟಿನಲ್ಲಿ ಇರುವ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ನಿರ್ಮಾಣಕ್ಕೆ ಕೆಲಸ ಶುರುವಾದ ಮೇಲೆ ಮುಗಿಯಲು ಎರಡು ವರ್ಷ ಕಾಲ ಸಾಕು. ಸುತ್ತಮುತ್ತಲ ಸ್ಥಳಗಳನ್ನು ಕಲ್ಪನೆಯಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ರಾಮನಗರ ಜಿಲ್ಲೆಯ ಬೇರೆ ಬೇರೆ ಸ್ಥಳಗಳನ್ನು ಕೂಡಾ ಅಭಿವೃದ್ಧಿ ಮಾಡುತ್ತಿದ್ದೇವೆ. ಶಕ್ತಿ, ಭಕ್ತಿ ಕೇಂದ್ರದ ಅಭಿವೃದ್ಧಿ ನಮ್ಮ ಕರ್ತವ್ಯ. ರಾಮನ ಸೇವೆಗಿಂತ ಪವಿತ್ರವಾದುದು ಇನ್ನೊಂದಿಲ್ಲ. ಕೈಗೆಟುಕದ ಬಜೆಟ್ ಏನೂ ಇಲ್ಲ. ಕುಮಾರಸ್ವಾಮಿ ಸ್ವತಃ ಸಿಎಂ ಆಗಿದ್ದರೂ ರಾಮನಗರದಲ್ಲಿ ವಿಶ್ವವಿದ್ಯಾಲಯ ಮಾಡಲು ಆಗಿರಲಿಲ್ಲ, ನಾವು ಮಾಡುತ್ತಿದ್ದೇವೆ. ಕೇವಲ ಧಾರ್ಮಿಕವಾಗಿ, ಚುನಾವಣಾ ಹಿನ್ನೆಲೆಯಲ್ಲಿ ನಾವು ಮಾಡುತ್ತಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಇರುವುದು ರಾಮರಾಜ್ಯ, ರಾಮನ ಆಶೀರ್ವಾದ. ದಕ್ಷಿಣ ಭಾರತ ಅಯೋಧ್ಯಾ ಆಗಿ ಅಭಿವೃದ್ಧಿ ಮಾಡುತ್ತೇವೆ ಎಂದರು.

‘ದೇವಸ್ಥಾನಕ್ಕೂ ಮುನ್ನ ರಾಮನಗರದಲ್ಲಿ BJP ಆಫೀಸ್ ಕಟ್ಟಿ’

ರಾಮನಗರದಲ್ಲಿ ಪ್ರಬಲ ಒಕ್ಕಲಿಗ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಹೆಚ್​ಡಿ ಕುಮಾರಸ್ವಾಮಿಯ ರಾಜಕೀಯ ಪ್ರಾಬಲ್ಯವನ್ನ ಮುರಿಯುವುದಕ್ಕಾಗಿಯೇ ಬಿಜೆಪಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಬಲಿಷ್ಠ ಪಡೆ ಕಟ್ಟಿದೆ. ಈಗ ಬಜೆಟ್​ನಲ್ಲಿ ರಾಮಮಂದಿರ ಕಟ್ಟುವುದಾಗಿ ಘೋಷಿಸಿದ್ದು, ಡಿಕೆಶಿವಕುಮಾರ್​ರನ್ನ ಕೆರಳಿಸಿದೆ. ಈ ಕಾರಣಕ್ಕಾಗಿಯೇ ಸಚಿವ ಅಶ್ವತ್ಥ್ ನಾರಾಯಣ್​ರನ್ನೇ ನೇರ ಅಖಾಡಕ್ಕೆ ಆಹ್ವಾನಿಸಿದ್ದಾರೆ. ನೀವು ಯಾರ ದೇವಸ್ಥಾನವನ್ನಾದ್ರೂ ಕಟ್ಟಿಕೊಳ್ಳಿ. ಆದ್ರೆ ಮೊದಲು ಬಿಜೆಪಿಗೆ ಒಂದು ಭದ್ರವಾದ ಕಚೇರಿ ಕಟ್ಟಿಕೊಳ್ಳಿ ಎಂದು ಸವಾಲೆಸೆದಿದ್ದಾರೆ.

ಮಂದಿರ ಕಟ್ಟೋದಕ್ಕೂ ಮುನ್ನ ಆಫೀಸ್ ಮಾಡಿ ತೋರಿಸಿ ಎಂದ ಡಿಕೆಶಿ ಮಾತಿಗೆ ಸಚಿವ ಅಶ್ವತ್ಥ್ ನಾರಾಯಣ್ ಕೌಂಟರ್ ನೀಡಿದ್ರು. ನಮಗೆ ಪಕ್ಷ ಕಟ್ಟೋದು ಗೊತ್ತು. ದೇವಸ್ಥಾನ ನಿರ್ಮಿಸೋದು ಗೊತ್ತು ಎಂದ ಉನ್ನತ ಶಿಕ್ಷಣ ಸಚಿವರು, ಯೋಜನೆಗೆ DPR ಸಿದ್ಧವಾಗ್ತಿದೆ, ದೇವಸ್ಥಾನ ಕಟ್ಟಲು ಹಣವೂ ಇದೆ. ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ ಎಂದು ಟಾಂಗ್ ಕೊಟ್ರು.

ರಾಮನಗರದಲ್ಲಿ ಮಂದಿರ ಕಟ್ಟೋದು ನಾನೇ ಅಂದ ಹೆಚ್​ಡಿಕೆ

ರಾಮನಗದಲ್ಲಿ ಮಂದಿರ ಕಟ್ಟುವ ಬಿಜೆಪಿ ಘೋಷಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ರು. ಬಿಜೆಪಿಯವರೇ ಏನೇ ಘೋಷಣೆ ಮಾಡಲಿ ಮುಂದೆ ಅವರು ಅಧಿಕಾರಕ್ಕೆ ಬರಲ್ಲ, ನಾನೇ ಮಂದಿರ ಕಟ್ಟಬೇಕು ಎಂದು ಷರಾ ಬರೆದವರಂತೆ ಹೇಳಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:08 am, Sat, 18 February 23